ನಿವೇಶನ ಕೊಡಿಸುವುದಾಗಿ ನಂಬಿಸಿ ವಂಚನೆಗೊಳಗಾದ ದಿವ್ಯಾಂಗ ದಂಪತಿಯೊಂದು ನ್ಯಾಯಕ್ಕಾಗಿ ಗೃಹಸಚಿವ ಡಾ. ಜಿ ಪರಮೇಶ್ವರ ಅವರನ್ನು ಭೇಟಿಯಾಗಿದ್ದಾರೆ. ಪೊಲೀಸರ бездействияದಿಂದ ಮನನೊಂದು, ಅವರು ಕೀಟನಾಶಕದ ಬಾಟಲಿಯೊಂದಿಗೆ ಬಂದಿದ್ದು, ಸಚಿವರು ತನಿಖೆಗೆ ಭರವಸೆ ನೀಡಿದ್ದಾರೆ.
ಬೆಳಗಾವಿ(ಡಿ.17): ತಮಗೆ ಆದ ವಂಚನೆಗೆ ನ್ಯಾಯ ಸಿಗುತ್ತಿಲ್ಲ ಎಂದು ಮನನೊಂದ ದಿವ್ಯಾಂಗ ದಂಪತಿಯೊಬ್ಬರು ಕೀಟನಾಶಕದ ಬಾಟಲಿಯೊಂದಿಗೆ ಗೃಹಸಚಿವ ಡಾ ಜಿ ಪರಮೇಶ್ವರ ಅವರನ್ನು ಭೇಟಿ ಮಾಡಲು ಬಂದಿದ್ದ ಆಘಾತಕಾರಿ ಘಟನೆ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ಖನದಾಳ ಗ್ರಾಮದ ಯಲ್ಲಪ್ಪ ನಾಯಕ ಮತ್ತು ಬಾಳವ್ವ ನಾಯಕ ಎಂಬ ದಿವ್ಯಾಂಗ ದಂಪತಿಗಳು ಗೃಹಸಚಿವರ ಕಾಲಿಗೆ ಬಿದ್ದು ತಮಗೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದ್ದಾರೆ.
ವಂಚಕರ ವಿರುದ್ಧ ಕ್ರಮ ಕೈಗೊಳ್ಳದ ಖಾಕಿ: ಪಿಎಸ್‌ಐ ವಿರುದ್ಧ ದಂಪತಿ ಆಕ್ರೋಶ
ನಿವೇಶನ ಕೊಡಿಸುವುದಾಗಿ ನಂಬಿಸಿ ವಂಚಕರು ಇವರಿಂದ ಹಣ ಪಡೆದು ಮೋಸ ಮಾಡಿದ್ದಾರೆ. ಈ ಬಗ್ಗೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಸಹ, ಪಿಎಸ್‌ಐ ಮಾಳಪ್ಪ ಪೂಜಾರಿ ಅವರು ವಂಚಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದಂಪತಿಗಳು ಗಂಭೀರವಾಗಿ ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಅಲೆದಾಡಿ ಸುಸ್ತಾದ ದಂಪತಿಗಳು ಇಂದು ಗೃಹಸಚಿವರನ್ನು ಭೇಟಿಯಾಗಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಜೇಬಿನಲ್ಲಿತ್ತು ವಿಷದ ಬಾಟಲಿ!
ಗೃಹಸಚಿವರ ಭೇಟಿಗೂ ಮುನ್ನ ಪೊಲೀಸರು ದಂಪತಿಗಳನ್ನು ತಪಾಸಣೆ ನಡೆಸಿದಾಗ, ಯಲ್ಲಪ್ಪ ಅವರ ಜೇಬಿನಲ್ಲಿ ಕೀಟನಾಶಕ (ವಿಷ) ಪತ್ತೆಯಾಗಿದೆ. ನ್ಯಾಯ ಸಿಗದಿದ್ದರೆ ಆತ್ಮ೧ಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಇದನ್ನು ತಂದಿರಬಹುದು ಎಂದು ಶಂಕಿಸಲಾಗಿದೆ. ತಕ್ಷಣವೇ ಪೊಲೀಸರು ವಿಷದ ಬಾಟಲಿಯನ್ನು ವಶಕ್ಕೆ ಪಡೆದು ಅನಾಹುತವನ್ನು ತಪ್ಪಿಸಿದ್ದಾರೆ. ದಂಪತಿಗಳ ಅಳಲನ್ನು ಶಾಂತವಾಗಿ ಆಲಿಸಿದ ಗೃಹಸಚಿವ ಡಾ ಜಿ ಪರಮೇಶ್ವರ ಅವರು, ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.


