ಮೈಸೂರು ರೈಲ್ವೆ ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಅಪಹರಿಸಲು ಯತ್ನಿಸಿದ 50 ವರ್ಷದ ವೃದ್ಧೆಯನ್ನು ಆರ್‌ಪಿಎಫ್ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಿಂದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿ, ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಮೈಸೂರು, (ಅ.23): ಮೈಸೂರು ರೈಲ್ವೆ ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಅಪಹರಣ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದ್ದು, 50 ವರ್ಷದ ವೃದ್ಧೆಯನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಸಿಸಿಟಿವಿ ಸೆರೆಯಾಯ್ತು ಮಗು ಅಪಹರಣ ದೃಶ್ಯ:

ಮೈಸೂರು ರೈಲ್ವೆ ನಿಲ್ದಾಣದ ವೇಟಿಂಗ್ ರೂಮ್‌ನಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ವೃದ್ಧೆಯೊಬ್ಬರು ಎತ್ತಿಕೊಂಡು ಹೋಗಲು ಯತ್ನಿಸಿದ್ದಾರೆ. ಎಚ್ಚರಗೊಂಡ ತಾಯಿಗೆ ಮಗು ನಾಪತ್ತೆಯಾಗಿರುವುದು ಗೊತ್ತಾಗಿ, ಕೂಡಲೇ ಕುಟುಂಬಸ್ಥರೊಂದಿಗೆ ಆರ್‌ಪಿಎಫ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಿಸಿಟಿವಿ ದೃಶ್ಯದಿಂದ ಆರೋಪಿ ಪತ್ತೆ:

ಕೂಡಲೇ ಕಾರ್ಯಪ್ರವೃತ್ತರಾದ ಆರ್‌ಪಿಎಫ್ ಪೊಲೀಸರು, ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. 50 ವರ್ಷದ ವೃದ್ಧೆಯೊಬ್ಬರು ಮಗುವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿ, ಮಗುವನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಕುಟುಂಬಕ್ಕೆ ಹಿಂದಿರುಗಿಸಿದರು.

ಬಂಧಿತ ವೃದ್ಧೆಯನ್ನು ಹಾಸನ ಮೂಲದ ನಂದಿನಿ ಎಂದು ಗುರುತಿಸಲಾಗಿದೆ. ಆರ್‌ಪಿಎಫ್ ಪೊಲೀಸರು ಆರೋಪಿಯ ವಿರುದ್ಧ ಅಪಹರಣ ಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಆರೋಪಿಯ ಉದ್ದೇಶದ ಕುರಿತು ತಿಳಿಯಲು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.