ರಾಮನಗರ(ಜ. 20)  ನಾನು ಆರೋಗ್ಯವಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಜನರ ಸೇವೆಯಿಂದಾಗಿ ನನ್ನ ಆರೋಗ್ಯ ಚೆನ್ನಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಸ್ಪಷ್ಟಪಡಿಸಿದರು.

ಬಿಡದಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನನ್ನ ಆರೋಗ್ಯ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಊಹಾಪೋಹಗಳು ಹಬ್ಬಿದ್ದವು. ನಾನು ಹಲವು ತಿಂಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದೇನೆ. ಅದಕ್ಕಾಗಿ ದೇಶದ ಮೂಲೆ ಮೂಲೆಗಳಲ್ಲಿ ಈಗಾಗಲೇ ಖಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಆದರೆ, ಇಷ್ಟು ದಿನಗಳ ಕಾಲ ನನ್ನನ್ನ ನಂಬಿಕೊಂಡಿರುವ ಜನರನ್ನ ನೋಡದೆ ಇರಲು ಸಾಧ್ಯವಾಗಲೇ ಇಲ್ಲ. ಅದಕ್ಕಾಗಿ ನನ್ನ ಜನರ ಜತೆಗೆ ಇದ್ದುಕೊಂಡು ನನ್ನ ಖಾಯಿಲೆಯನ್ನ ಮರೆಯುತ್ತಿದ್ದೇನೆ ಎಂದರು.

ರೈ ಮನೆ ಆಯುಧ ಪೂಜೆ ಏನಾಯ್ತು?

ಅದೇ ರೀತಿ ನಾನು ಮಾಡಿರುವ ಒಳ್ಳೆಯ ಕೆಲಸಗಳು ಹಾಗೂ ಧಾರ್ಮಿಕ ಕೆಲಸದಿಂದಾಗಿ ನಾನು ಇನ್ನು ಬದುಕಿದ್ದೇನೆ. ಅಂದಹಾಗೆ, ನಾನು ಬದುಕಿರುವರೆಗೂ ಜನರ ಜತೆಯಲ್ಲೇ ಇರುತ್ತೇನೆ ಹಾಗೇ ನಾನು ಸಾವಿಗೆ ಅಂಜುವ ವ್ಯಕ್ತಿ ಅಲ್ಲವೇ ಅಲ್ಲ ಎಂದು ಹೇಳಿದರು.

ಇನ್ನು ನನ್ನ ಆಸ್ತಿ ಸಂಪಾದನೆಗೆ ತಕ್ಕಹಾಗೆ ಒಂದು ರೂಪಾಯಿ ಮೋಸ ಮಾಡದೇ ತೆರಿಗೆ ಕಟ್ಟುತ್ತಿದ್ದೇನೆ. ಅದಕ್ಕಾಗಿಯೇ ನಾನು ಸಂಪಾದನೆ ಮಾಡಿದ ಎಲ್ಲಾ ಅಸ್ತಿಯನ್ನ ಈಗಾಗಲೇ ಯಾರಿಗೆ ಸೇರಬೇಕೋ ಎಲ್ಲರ ಹೆಸರಿಗೆ ವಿಲ್ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನನಗೆ ಏನೇನು ಬೇಕಿಲ್ಲ. ಜನರ ಕೆಲಸ ಮಾಡುವುದಷ್ಟೇ ನನ್ನ ಗಮನ. ನನ್ನ ಟಿಕೆಟ್‌ ಕನ್ಫರ್ಮ್ ಆಗಿದೆ, ಯಾವಾಗ ಬೇಕಾದ್ರೂ ಹೋಗಬಹುದು. ದೊಡ್ಡದಾದ ಸಂಘಟನೆ ಕಟ್ಟಿದ್ದೇನೆ, ನಾನು ಹೋದ ಬಳಿಕ ಸಂಘಟನೆ ಹಾಳಾಗಬಾರದು. ಸಂಘಟನೆಗೂ ಹೊಸಬರನ್ನು ನೇಮಿಸಲಿದ್ದೇನೆ ಎಂದರು.

ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹುದ್ದಗೂ ರಾಜೀನಾಮೆ ನೀಡಲು ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.