ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಬಳಿ, ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಪುತ್ರನ ಸಕ್ಕರೆ ಕಾರ್ಖಾನೆಗೆ ಕಾಂಕ್ರೀಟ್ ಮಶಿನ್ ಸಾಗಿಸುತ್ತಿದ್ದ ಲಾರಿಗೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿದೆ. ರಮೇಶ್ ಗವಡೆ (30) ಎಂಬ ಯುವಕ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಧಾರವಾಡ(ಡಿ.18): ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಪುತ್ರನ ಮೃಣಾಲ್ ಸಕ್ಕರೆ ಕಾರ್ಖಾನೆಗೆ ಕಾಂಕ್ರೀಟ್ ಮಶಿನ್ ತರುತ್ತಿದ್ದ ವೇಳೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಳಿ ಸಂಭವಿಸಿದೆ.

ಸಚಿವೆ ಹೆಬ್ಬಾಳ್ಕರ್ ಪುತ್ರನ ಮಾಲೀಕತ್ವದ ಕಾರ್ಖಾನೆ

ಧಾರವಾಡ ತಾಲೂಕಿನ ಪುಡಲಕಲಕಟ್ಟಿ ಗ್ರಾಮದಲ್ಲಿರುವ 'ಮೃಣಾಲ್ ಶುಗರ್ಸ್' ಈ ಸಕ್ಕರೆ ಕಾರ್ಖಾನೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳಕರ್ ಅವರಿಗೆ ಸೇರಿದ್ದಾಗಿದೆ. ಕಾರ್ಖಾನೆಯ ಕಾಮಗಾರಿಗಾಗಿ ಕಾಂಕ್ರೀಟ್ ಮಶಿನ್ ಅನ್ನು ಸಾಗಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಹೈ ಟೆನ್ಷನ್ ವೈರ್ ತಗುಲಿ ಸಂಭವಿಸಿದ ಅವಘಡ

ಬೆಳಗಾವಿ ಜಿಲ್ಲೆಯ ನಂದಗಡದಿಂದ ಲಾರಿಯ ಮೂಲಕ ಕಾಂಕ್ರೀಟ್ ಮಶಿನ್ ಅನ್ನು ಕಾರ್ಖಾನೆಗೆ ತರಲಾಗುತ್ತಿತ್ತು. ಉಪ್ಪಿನ ಬೆಟಗೇರಿ ಮಾರ್ಗವಾಗಿ ಬರುತ್ತಿದ್ದಾಗ ಮಾರ್ಗಮಧ್ಯೆ ಲಾರಿಗೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿದೆ. ಲಾರಿಗೆ ವೈರ್ ತಗುಲಿದ್ದನ್ನು ಗಮನಿಸಿದ ಯುವಕ, ಅದನ್ನು ತೆಗೆಯಲು ಲಾರಿಯ ಹ್ಯಾಂಡಲ್ ಹಿಡಿದ ತಕ್ಷಣ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತ ಯುವಕನ ಗುರುತು ಪತ್ತೆ

ಮೃತ ಯುವಕನನ್ನು ರಮೇಶ್ ಗವಡೆ (30) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಇನ್ನಿಬ್ಬರು ಯುವಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಧಾರವಾಡದ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.