ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ನಡೆದ ಶೋಧ ಕಾರ್ಯದಲ್ಲಿ ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದೆ. ಪತ್ತೆಯಾದ ಕಾರ್ಡ್ ಮಾಲೀಕರು ಜಾಂಡೀಸ್ ನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಆರನೇ ಗುಂಡಿಯಲ್ಲಿ ಪುರುಷನ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿದೆ.

ಬೆಳ್ತಂಗಡಿ: ತಿಂಗಳಿಂದೀಚೆಗೆ ಸುದ್ದಿಗೆ ಗ್ರಾಸವಾಗಿದ್ದಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ನೂರಾರು ಶವಗಳನ್ನು ಹೂತು ಸಮಾಧಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಐ.ಟಿ. ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ವಿ‍ಶೇಷ ತನಿಖಾ ತಂಡ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟ ಪರಿಸರದ ಕಾಡಿನಲ್ಲಿ ಸೋಮವಾರದಿಂದ ಪ್ರಾರಂಭವಾದ ಪ್ರತ್ಯಕ್ಷ ತನಿಖೆಯಲ್ಲಿ ಅನಾಮಿಕ ದೂರುದಾರ ತಿಳಿಸಿರುವ ಸ್ಥಳಗಳನ್ನು ಪರಿಶೀಲನೆ ನಡೆಸಲಾಯ್ತು. ಸ್ಥಳ ಗುರುತಿಸುವಿಕೆ ನಡೆಯಿತು. 13 ಸ್ಥಳಗಳನ್ನು ಗುರುತಿಸಲಾಯ್ತು. ತನಿಖೆಯ ಭಾಗವಾಗಿ ಬುಧವಾರ 5 ಸ್ಥಳಗಳನ್ನು ಅಗೆಯಲಾಯ್ತು. ಆದರೆ ಯಾವುದೇ ಕಳೇಬರ ಸಿಕ್ಕಿರಲಿಲ್ಲ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಕುಮಾರ್ ಮೊಹಂತಿ ಸಂಜೆ 4.45 ಸುಮಾರಿಗೆ ನೇತ್ರಾವತಿ ನದಿ ಕಿನಾರೆ ಸಮೀಪ ನಡೆದ ಕಾರ್ಯಾಚರಣೆಯನ್ನು ಎಸ್ ಪಿ ಅನುಚೇತ್ ಅವರ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು 45 ನಿಮಿಷ ಕಾಲ ಸ್ಥಳದಲ್ಲಿದ್ದರು.

ಆದರೆ ಪಾಯಿಂಟ್ ನಂಬರ್ 1ರಲ್ಲಿ ಬಟ್ಟೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿತ್ತು. ಪತ್ತೆಯಾದ ಬಗ್ಗೆ ಅನನ್ಯಾ ಭಟ್ ಪರ ವಕೀಲ ಮಂಜುನಾಥ್ ಮಾಹಿತಿ ನೀಡಿದ್ದರು. ಗುರುತಿಸಬಹುದಾದ ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್‌ಗಳ ಪತ್ತೆ (ಒಂದರಲ್ಲಿ ಪುರುಷರ ಹೆಸರು, ಮತ್ತೊಂದರಲ್ಲಿ ಮಹಿಳೆಯ ಹೆಸರು ‘ಲಕ್ಷ್ಮಿ’) ಮುಂದಿನ ತನಿಖೆಗೆ ಹೊಸ ದಾರಿಯನ್ನು ಒದಗಿಸುತ್ತದೆ. ನಾವು ಎಸ್‌ಐಟಿ ಈ ಪ್ರಮುಖ ಸುಳಿಗಳನ್ನು ಗಂಭೀರವಾಗಿ ಹಾಗೂ ತ್ವರಿತವಾಗಿ ಅನುಸರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

ಪಾಯಿಂಟ್ ನಂಬರ್ 1ರಲ್ಲಿ ಸಿಕ್ಕ ಕಾರ್ಡ್ ಯಾರದ್ದು?

ಇದೀಗ ಪ್ರಾಥಮಿಕ ಪರಿಶೀಲನೆಯ ನಂತರ, ಪಾನ್ ಕಾರ್ಡ್‌ ಹೊಂದಿರುವ ವ್ಯಕ್ತಿ 2025ರ ಮಾರ್ಚ್ ತಿಂಗಳಲ್ಲಿ ಜಾಂಡೀಸ್‌ ಕಾಯಿಲೆಯಿಂದ ಮೃತಪಟ್ಟಿರುವುದು ಬಹಿರಂಗವಾಗಿದೆ. ಮೃತ ವ್ಯಕ್ತಿಯ ಹೆಸರು ಹಾಗೂ ಮೃತ್ಯದ ವಿವರಗಳು ಪಾನ್ ಕಾರ್ಡ್‌ನ ಮೂಲಕ ದೃಢಪಡಿಸಿ, ಎಸ್‌ಐಟಿ ಅಧಿಕೃತ ದಾಖಲಾತಿಗಳ ಜತೆ ಹೋಲಿಕೆ ನಡೆಸಿದೆ. ಅದರ ಜೊತೆಗೆ, ಪಾನ್ ಕಾರ್ಡ್‌ಗೆ ಸೇರಿದ ವ್ಯಕ್ತಿಯ ತಂದೆಯನ್ನು ಎಸ್‌ಐಟಿ ಸಂಪರ್ಕಿಸಿದ್ದು, ಮಾಹಿತಿಯನ್ನು ಪಡೆದುಕೊಂಡಿದೆ. ಈ ಮೂಲಕ ತನಿಖೆಯ ಮುಂದಿನ ಹಂತಕ್ಕೆ ಹೋಗಿದೆ. ಈ ಬೆಳವಣಿಗೆ ಪ್ರಕರಣದ ಸುಳಿವಿಗೆ ಮತ್ತೊಂದು ಹೊಸ ದಿಕ್ಕು ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

6 ಗುಂಡಿಗಳ ಅಗೆತ ಪೂರ್ಣ, ಸಿಕ್ಕಿದ್ದೇನು?

ಅನಾಮಿಕ ದೂರುದಾರ ಈಗಾಗಲೇ 13 ಸ್ಥಳಗಳನ್ನು ಗುರುತಿಸಿದ್ದು ಇದರಲ್ಲಿ ಐದು ಕಡೆ ಶೋಧ ಬುಧವಾರ ಮುಕ್ತಾಯವಾಗಿತ್ತು. ಮೂರನೇ ದಿನ ಗುರುವಾರ ಮಧ್ಯಾಹ್ನ 6 ನೇ ಗುಂಡಿಯಲ್ಲಿ ಕುರುಹು ಪತ್ತೆಯಾಗಿದೆ. ಪುರುಷನ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿದೆ. ಕಳೆದ ಮೂರು ದಿನಗಳಂತೆ ದೂರುದಾರ ಗುರುತಿಸಿರುವ ಸ್ಥಳಗಳಲ್ಲಿ ಎ.ಎನ್.ಎಫ್ ತಂಡ ಕಾವಲು ಕಾಯಲು ನಿಯೋಜಿಸಲಾಗಿದೆ.