ಧರ್ಮಸ್ಥಳ ಪ್ರಕರಣದಲ್ಲಿ ಸಿ.ಎನ್‌. ಚಿನ್ನಯ್ಯನ ಬಂಧನದ ಹಿಂದಿನ ಸತ್ಯ ಬಯಲು. ಹಣದ ಆಮಿಷ ಮತ್ತು ಬೆದರಿಕೆಗೆ ಮಣಿದು ಸುಳ್ಳು ದೂರು ನೀಡಿದ್ದಾಗಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ. 'ತಿಮರೋಡಿ ಗ್ಯಾಂಗ್'ನ ಷಡ್ಯಂತ್ರದ ಬಲೆಗೆ ಬಿದ್ದ ಚಿನ್ನಯ್ಯನ ಕಥೆ.

ಬೆಂಗಳೂರು (ಆ.23): ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ದೂರು ಮತ್ತು ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪದಲ್ಲಿ ಬಂಧಿತನಾಗಿರುವ ಸಿ.ಎನ್. ಚಿನ್ನಯ್ಯ, ತಾನು ಹೇಗೆ 'ತಿಮರೋಡಿ ಗ್ಯಾಂಗ್'ನ ಷಡ್ಯಂತ್ರದ ಬಲೆಗೆ ಸಿಲುಕಿದೆ ಎಂಬುದನ್ನು ಪೊಲೀಸರಿಗೆ ವಿವರಿಸಿದ್ದಾನೆ. ಸೌಜನ್ಯಾ ಮಾವ ತಿಮರೋಡಿ ಗ್ಯಾಂಗ್‌ಗೆ ಒಪ್ಪಿಸಿದ ಬಗ್ಗೆ ಹಾಗೂ ಷಡ್ಯಂತ್ರಕ್ಕೆ ಒಪ್ಪದಿದ್ದ ಚಿನ್ನಯ್ಯಗೆ, ಹಣದ ಆಮಿಷ ಮತ್ತು ಬೆದರಿಕೆ ಹಾಕಿದ ಬಗ್ಗೆಯೂ ನ್ಯಾಯಾಧೀಶಯ ಮುಂದೆ ಬಾಯಿ ಬಿಟ್ಟಿದ್ದಾನೆ.

ತಮಿಳುನಾಡಿನಿಂದ ಉಜಿರೆಗೆ ವಾಪಸ್:

2014ರಲ್ಲಿ ಧರ್ಮಸ್ಥಳದಲ್ಲಿ ಕೆಲಸ ಬಿಟ್ಟು ತಮಿಳುನಾಡಿನ ಈರೋಡ್‌ನಲ್ಲಿ ಸ್ಪಿನ್ನಿಂಗ್ ಮಿಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಚಿನ್ನಯ್ಯನನ್ನು, ಸುಮಾರು 2 ವರ್ಷಗಳ ಹಿಂದೆ ಆತನ ಸಹೋದರಿ ರತ್ನ, ಉಜಿರೆಗೆ ಬರುವಂತೆ ಕರೆದಿದ್ದಳು. 'ಉಜಿರೆಯಲ್ಲಿ ಯಾವುದಾದರೂ ಕೆಲಸ ಸಿಗುತ್ತೆ ಬಾ' ಎಂದು ಹೇಳಿದ ನಂತರ ಚಿನ್ನಯ್ಯ ಈರೋಡ್‌ನಿಂದ ಉಜಿರೆಗೆ ವಾಪಸ್ಸಾಗಿದ್ದನು. ಅಲ್ಲಿಯೂ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದನು.

ಸೌಜನ್ಯಾ ಮಾವನಿಂದ ತಿಮರೋಡಿ ಗ್ಯಾಂಗ್‌ಗೆ ಪರಿಚಯ:

ಉಜಿರೆಯಲ್ಲಿ ಕೆಲಸ ಹುಡುಕುತ್ತಿದ್ದ ಚಿನ್ನಯ್ಯನನ್ನು ಸೌಜನ್ಯಾಳ ಮಾವ ವಿಠ್ಠಲ್ ಗೌಡ ಗುರುತಿಸಿ ಮಾತನಾಡಿಸಿದ್ದಾರೆ. ಚಿನ್ನಯ್ಯ ಈ ಹಿಂದೆ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂಳುವ ಕೆಲಸ ಮಾಡುತ್ತಿದ್ದ ಮಾಹಿತಿ ಪಡೆದ ವಿಠ್ಠಲ್ ಗೌಡ, ಆತನನ್ನು ಮಹೇಶ್ ಶೆಟ್ಟಿ ತಿಮರೋಡಿ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, 'ಧರ್ಮಸ್ಥಳದಲ್ಲಿ ಹೆಣಗಳನ್ನು ಹೂಳುತ್ತಿದ್ದ ವ್ಯಕ್ತಿ' ಎಂದು ತಿಮರೋಡಿಗೆ ಚಿನ್ನಯ್ಯನನ್ನು ಪರಿಚಯಿಸಿದ್ದಾರೆ.

ಸುಳ್ಳಿನ ಕಥೆ ಸೃಷ್ಟಿಸಿದ ತಿಮರೋಡಿ:

ಚಿನ್ನಯ್ಯನಿಂದ ಮಾಹಿತಿ ಪಡೆದ ಮಹೇಶ್ ಶೆಟ್ಟಿ ತಿಮರೋಡಿ, ತಾನು ಧರ್ಮಸ್ಥಳದಲ್ಲಿ 427 ಹೆಣಗಳನ್ನು ಕಾನೂನು ಪ್ರಕಾರ ಹೂಳಿದ್ದೇನೆ ಎಂದು ಹೇಳಿದಾಗ, ತಿಮರೋಡಿ ಈ ಮಾಹಿತಿಯನ್ನು ತಿರುಚಿ ನೂರಾರು ಕೊಲೆ ಮತ್ತು ಅತ್ಯಾಚಾರಗಳು ನಡೆದಿವೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ. ಚಿನ್ನಯ್ಯನ ಮೂಲಕ ಧರ್ಮಸ್ಥಳದ ವಿರುದ್ಧ ಸುಳ್ಳು ದೂರು ನೀಡಿ, ಅದನ್ನು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯನ್ನಾಗಿ ಮಾಡುವ ಸಂಚು ರೂಪಿಸಿದ್ದಾನೆ.

ಆರಂಭದಲ್ಲಿ ಇದಕ್ಕೆ ಒಪ್ಪದ ಚಿನ್ನಯ್ಯ, ಸುಳ್ಳು ದೂರು ನೀಡುವುದಿಲ್ಲ ಎಂದು ನಿರಾಕರಿಸಿದ್ದಾನೆ. ಆದರೆ, ನಂತರ ತಿಮರೋಡಿ ಗ್ಯಾಂಗ್ ಚಿನ್ನಯ್ಯನಿಗೆ ಹಣದ ಆಮಿಷವೊಡ್ಡಿ ಮತ್ತು ಬೆದರಿಕೆ ಹಾಕಿ, ಈ ಕೆಲಸಕ್ಕೆ ಒಪ್ಪಿಸಿದ್ದಾರೆ. 'ಒಂದು ವೇಳೆ ಸಹಕರಿಸದಿದ್ದರೆ ನಿನ್ನ ಮೇಲೆ ಕೊಲೆ ಕೇಸ್ ಹಾಕಿಸುತ್ತೇವೆ' ಎಂದು ಹೆದರಿಸಿದಾಗ, ಹಣದ ಆಸೆ ಮತ್ತು ಹೆದರಿಕೆಗೆ ಮಣಿದ ಚಿನ್ನಯ್ಯ ಸುಳ್ಳು ದೂರು ನೀಡಲು ಒಪ್ಪಿಕೊಂಡಿದ್ದಾನೆ. ಈ ಪ್ರಮುಖ ಘಟ್ಟದಲ್ಲಿ, ತಲೆಬುರುಡೆಯೊಂದನ್ನು ನೀಡಿ ಶರಣಾಗುವಂತೆ ಚಿನ್ನಯ್ಯನಿಗೆ ಗ್ಯಾಂಗ್ ಸೂಚಿಸಿದೆ. ಚಿನ್ನಯ್ಯನ ಈ ಹೇಳಿಕೆಗಳು ಪೊಲೀಸರಿಗೆ ಪ್ರಕರಣದ ಸೂತ್ರಧಾರಿಗಳನ್ನು ಬಂಧಿಸಲು ಸಹಾಯ ಮಾಡಲಿವೆ.