ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಮುಸುಕುಧಾರಿ ವ್ಯಕ್ತಿಗೆ ಶರಣಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಮುಸುಕುಧಾರಿಯ ಮಾತಿನಂತೆ ಎಸ್ಐಟಿ ರಚಿಸಲಾಗಿದ್ದು, ಆತನನ್ನೇ ತನಿಖಾಧಿಕಾರಿ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಆ.16): ಧರ್ಮಸ್ಥಳ ವಿಚಾರದಲ್ಲಿ ರಾಜ್ಯ ಸರ್ಕಾರ ಮುಸುಕುಧಾರಿ ವ್ಯಕ್ತಿಗೆ ಶರಣಾಗಿದೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಪಾದಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಕಮ್ಯುನಿಸ್ಟರ ಮಾತು ಕೇಳಿ ಎಸ್ಐಟಿ ರಚಿಸಿದೆ. ಮುಸುಕುಧಾರಿ ವ್ಯಕ್ತಿಯೇ ಎಸ್ಐಟಿಗೆ ಹಾಗೆ ಮಾಡಿ ಹೀಗೆ ಮಾಡಿ ಎನ್ನುತ್ತಾನೆ. ಮೊದಲು ಆತನನ್ನು ಬಂಧಿಸಿ ತನಿಖೆ ಮಾಡಬೇಕು. ಕೋರ್ಟ್‌ಗೆ ಹಾಜರುಪಡಿಸಬೇಕು. ಅದರ ಬದಲು ಮುಸುಕುಧಾರಿಯನ್ನೇ ತನಿಖಾಧಿಕಾರಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Dharmasthala Case: 19 ದಿನದಲ್ಲಿ 17 ಸ್ಥಳಗಳಲ್ಲಿ ಅಗೆದ್ರೂ ಸಿಕ್ಕಿಲ್ಲ ಸಾಕ್ಷ್ಯ, ಇಂದು ಮತ್ತೆ ಇಂದು ಮತ್ತೆ ಉತ್ಖನನ?
ಧರ್ಮಕ್ಕೂ ಕ್ರಿಮಿನಲ್ ಚಟುವಟಿಕೆಗೂ ಸಂಬಂಧ ಇಲ್ಲ. ಧರ್ಮಸ್ಥಳಕ್ಕೆ ಇಡೀ ರಾಜ್ಯಾದ್ಯಂತ ಭಕ್ತರಿದ್ದಾರೆ. ನಾವೂ ಭಕ್ತರೇ. ಹೀಗಾಗಿ ನಾವೂ ಹೋಗುತ್ತೇವೆ. ಕೆಲವರಿಂದ ದೇವಸ್ಥಾನದ ವಿರುದ್ಧ ಷಡ್ಯಂತ್ರ ನಡೆದಿದೆ. ಕಮ್ಯುನಿಸ್ಟರ ಜತೆ ಸೇರಿ ತಪ್ಪು ದಾರಿಗೆ ಎಳೆದರೆ ಸರ್ಕಾರ ಭಕ್ತರ ತಾಳ್ಮೆ ಪ್ರಶ್ನೆ ಮಾಡಿದಂತಾಗುತ್ತದೆ. ಅಲ್ಲಿ ಮಾಡಿರುವ ಆರೋಪಗಳು ಸುಳ್ಳಾದರೆ ಭಕ್ತರು ಬಡಿಗೆ ತೆಗೆದುಕೊಂಡು ಬರುತ್ತಾರೆ ಎಂದು ಎಚ್ಚರಿಸಿದರು.


