ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆ ಕುರಿತು ಶಾಸಕ ಶ್ರೀವತ್ಸ ಅನುಮಾನ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯ ಆರೋಪಗಳಿಗೆ ಸರ್ಕಾರ ಯಾಕೆ ಬೆಲೆ ಕೊಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಧರ್ಮಸ್ಥಳದ ವಿರುದ್ಧದ ಆನ್‌ಲೈನ್ ಅಪಪ್ರಚಾರ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮೈಸೂರು (ಆ.15): ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆ ಕುರಿತು ಮೈಸೂರಿನ ಶಾಸಕ ಶ್ರೀವತ್ಸ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಶ್ರೀವತ್ಸ್ ಅವರು 'ಅನಾಮಿಕ ಏನು ವಿಕ್ರಂ ಬೇತಾಳನ ದೊಡ್ಡ ದೊಡ್ಡ ಗುಡ್ಡ ಅಗೆದು ಅವನೇ ಹೂತು ಹಾಕಿ ಬರುವುದಕ್ಕೆ?' ಎಂದು ಮೈಸೂರಿನಲ್ಲಿ ಶಾಸಕ ಶ್ರೀವತ್ಸ್ ಆಕ್ರೋಶ ವ್ಯಕ್ತಪಡಿಸಿದರು.
ಅನಾಮಿಕ ವ್ಯಕ್ತಿಯೊಬ್ಬನ ದೂರಿನ ಆಧಾರದ ಮೇಲೆ ಎಸ್ಐಟಿ ತನಿಖೆ ಆರಂಭವಾಗಿದೆ. ಆತನೇ ಶವಗಳನ್ನು ಹೂತು ಹಾಕಿದ್ದಾನೆ ಎಂದು ಬಂದವನ ಮಾತಿಗೆ ಸರ್ಕಾರ ಕಿವಿಗೊಡುತ್ತಿದೆಯೇ? ಸರ್ಕಾರ ಏನು ಅನಾಮಿಕನ ಪರವಾಗಿದ್ಯಾ? ಎಂದು ಪ್ರಶ್ನಿಸಿದರು. ಆತ ತೋರಿಸಿದ ಸ್ಥಳಗಳಲ್ಲಿ ಯಾವುದೇ ಆಧಾರಗಳು ಸಿಗದಿರುವುದರಿಂದ, ಮೊದಲು ಈ ಅನಾಮಿಕ ವ್ಯಕ್ತಿಯ ಬಗ್ಗೆ ತನಿಖೆ ನಡೆಸಬೇಕೆಂದು ಶಾಸಕರು ಒತ್ತಾಯಿಸಿದರು.
ಸರ್ಕಾರ ಮೌನದ ಅರ್ಥ ಅಪಪ್ರಚಾರ ನಡೆಯಲಿ ಎಂಬುದಾ?
ಧರ್ಮಸ್ಥಳದ ವಿರುದ್ಧ ಯೂಟ್ಯೂಬ್‌ನಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ತಡೆಯಲು ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕ ಶ್ರೀವತ್ಸ ಕಿಡಿಕಾರಿದ್ದಾರೆ. ಸರ್ಕಾರದ ಮೌನವು ಅಪಪ್ರಚಾರಕ್ಕೆ ಬೆಂಬಲ ನೀಡುತ್ತಿದೆಯೇ? ಅಪಪ್ರಚಾರಕ್ಕೆ ಸರ್ಕಾರ ಬೆನ್ನಿಗೆ ನಿಂತಿದೆಯೇ? ಎಂದು ಆರೋಪಿಸಿದ ಅವರು, ಧರ್ಮಸ್ಥಳದಂತಹ ಹಿಂದೂ ಶ್ರದ್ಧಾ ಕೇಂದ್ರವನ್ನು ಗುರಿಯಾಗಿಸಿಕೊಂಡು ನೂರಾರು ಕೊಲೆಗಳಾಗಿವೆ ಎಂಬ ಸುಳ್ಳು ಆರೋಪಗಳನ್ನು ಹಬ್ಬಿಸಲಾಗುತ್ತಿದೆ ಎಂದರು. ಸರ್ಕಾರ ಗಂಭೀರವಾಗಿದ್ದರೆ, ಮೊದಲು ಅಪಪ್ರಚಾರಕಾರರ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದರು.
ಸೌಜನ್ಯ ಕೇಸ್, ಅನಾಮಿಕನ ಹೇಳಿಕೆ ಎರಡೂ ತನಿಖೆ ಆಗಬೇಕು:
ಸೌಜನ್ಯ ಕೇಸ್‌ನ ಸಮಗ್ರ ತನಿಖೆಯ ಜೊತೆಗೆ, ಅನಾಮಿಕ ವ್ಯಕ್ತಿಯ ಆರೋಪಗಳ ಬಗ್ಗೆಯೂ ತನಿಖೆ ನಡೆಯಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಶಾಸಕರು ಧರ್ಮಸ್ಥಳದ ಪರವಾಗಿ ನಿಲ್ಲಬೇಕೆಂದು ಹೇಳಿದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳುತ್ತಿದೆ. ಒಂದೆಡೆ ಉದಯಗಿರಿಯಲ್ಲಿ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಬಂಧನ ಕ್ರಮ ತೆಗೆದುಕೊಂಡ ಸರ್ಕಾರ, ಧರ್ಮಸ್ಥಳದ ವಿರುದ್ಧದ ಅಪಪ್ರಚಾರಕ್ಕೆ ಯಾಕೆ ಕಾನೂನು ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದರು.
ನಟ ದರ್ಶನ್ ಬೇಲ್ ರದ್ದು
ನಟ ದರ್ಶನ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಶಾಸಕ ಶ್ರೀವತ್ಸ ಸ್ವಾಗತಿಸಿದರು. ಕಾನೂನನ್ನು ದುಡ್ಡಿನಿಂದ ಕೊಂಡುಕೊಳ್ಳಬಹುದು ಎಂಬ ಊಹಾಪೋಹಗಳು ಕಳೆದ ಐದಾರು ತಿಂಗಳಿಂದ ಹಬ್ಬಿದ್ದವು. ಆದರೆ, ಈ ತೀರ್ಪು ಆ ಎಲ್ಲಾ ಆರೋಪಗಳನ್ನು ಸುಳ್ಳಾಗಿಸಿದೆ. ಯಾರೇ ತಪ್ಪು ಮಾಡಿದರೂ ನಮ್ಮ ನ್ಯಾಯವ್ಯವಸ್ಥೆಯಲ್ಲಿ ಶಿಕ್ಷೆ ಖಚಿತ ಎಂದು ಶಾಸಕರು ಹೇಳಿದರು. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಎಲ್ಲರೂ ಸ್ವಾಗತಿಸಬೇಕು ಎಂದರು.
