ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ವಿರುದ್ಧದ ಆರೋಪಗಳ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ರಾಮನಗರ (ಆ.16): ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದೇವಸ್ಥಾನಕ್ಕೆ ಬಿಜೆಪಿಗಿಂತಲೂ ಹೆಚ್ಚು ಕಾಂಗ್ರೆಸ್‌ನವರು ಭೇಟಿ ನೀಡುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಧರ್ಮಸ್ಥಳಕ್ಕೆ ರಾಜ್ಯದಿಂದ ಮಾತ್ರವಲ್ಲ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಹರಿದಾಡುತ್ತಿರುವ ಆರೋಪಗಳ ಕುರಿತು ಸ್ಪಷ್ಟ ತನಿಖೆ ನಡೆಸಲಾಗುತ್ತಿದೆ. ಎಂದರು.
ಧರ್ಮಸ್ಥಳದ ಬುರುಡೆ ಕೇಸ್‌ಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ರೆಡ್ಡಿ, ಕೆಲವು ಹಿಂದೂಗಳೇ ಧರ್ಮಸ್ಥಳದ ವಿರುದ್ಧ ಮಾತನಾಡುತ್ತಿದ್ದಾರೆ. ಈಗ ಒಬ್ಬ ಅನಾಮಿಕ ವ್ಯಕ್ತಿ ‘ಹೆಣಗಳನ್ನು ಹೂತಿಟ್ಟಿದ್ದೇನೆ’ ಎಂದು ಆರೋಪಿಸಿದ್ದಾನೆ. ಈ ಆರೋಪಗಳ ಸತ್ಯಾಸತ್ಯತೆಯನ್ನು ತಿಳಿಯಲು ನಮ್ಮ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದೆ. ಈ ಅಪಪ್ರಚಾರಗಳಿಗೆ ಕಡಿವಾಣ ಹಾಕಲು ತನಿಖೆ ನಡೆಯುತ್ತಿದೆ, ಎಂದು ಸ್ಪಷ್ಟಪಡಿಸಿದರು.
ನಮಗೂ ಶ್ರೀ ಮಂಜುನಾಥನ ಮೇಲೆ ಭಕ್ತಿ ಇದೆ:
ನಮಗೂ ಶ್ರೀ ಮಂಜುನಾಥನ ಮೇಲೆ ಭಕ್ತಿಯಿದೆ ಎಂದ ಸಚಿವರು, ಬುರುಡೆ ಪ್ರಕರಣದಲ್ಲಿ ತನಿಖೆಯಿಂದ ಯಾವುದೇ ಸಾಕ್ಷ್ಯ ಸಿಗದಿದ್ದರೆ, ಈ ಆರೋಪ ಮಾಡಿದ ಅನಾಮಿಕ ವ್ಯಕ್ತಿಯ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಧರ್ಮಸ್ಥಳದ ಘನತೆಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದರು. ಈ ಘಟನೆಯಿಂದ ಧರ್ಮಸ್ಥಳದ ಭಕ್ತರಲ್ಲಿ ಆತಂಕ ಮೂಡಿದ್ದು, ತನಿಖೆಯ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.
