ಡಿಜಿಪಿ ರಾಮಚಂದ್ರ ರಾವ್ ಅವರ ಅಸಭ್ಯ ವರ್ತನೆಯ ವಿಡಿಯೋವೊಂದು ವೈರಲ್ ಆಗಿದ್ದು, ಇದು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋ 10 ವರ್ಷ ಹಳೆಯದು ಮತ್ತು ಎಐ-ರಚಿತ ಎಂದು ರಾವ್ ಹೇಳಿಕೊಂಡರೂ, ಅದರ ಸತ್ಯಾಸತ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಬೆಂಗಳೂರು (ಜ.19): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿರುವ ಡಿಜಿಪಿ ರಾಮಚಂದ್ರ ರಾವ್ ಅವರ ಅಸಭ್ಯ ವರ್ತನೆಯ ವಿಡಿಯೋದ ಹಿಂದೆ 'ನಗ್ನ ಸತ್ಯ'ವೇನು ಎಂಬ ಚರ್ಚೆ ಆರಂಭವಾಗಿದೆ. ಈ ವಿಡಿಯೋ ಎಲ್ಲಿ ಶೂಟ್ ಮಾಡಿದ್ದು ಎಲ್ಲಿ ಹಾಗೂ ತಮ್ಮ ವಿಡಿಯೋ ಬಗ್ಗೆ ಡಿಜಿಪಿ ರಾಮಚಂದ್ರರಾವ್‌ ಕೂಡ ಸ್ಪಷ್ಟನೆ ನೀಡಿದ್ದಾರೆ.

ಇದು 10 ವರ್ಷಗಳ ಹಳೆಯ ವಿಡಿಯೋ?

ಲಭ್ಯವಿರುವ ಮೂಲಗಳ ಪ್ರಕಾರ, ಈಗ ವೈರಲ್ ಆಗುತ್ತಿರುವ ವಿಡಿಯೋ ಇತ್ತೀಚಿನದಲ್ಲ. ಇದು ಸುಮಾರು 10 ವರ್ಷಗಳಷ್ಟು ಹಳೆಯದು ಎನ್ನಲಾಗುತ್ತಿದೆ. ರಾಮಚಂದ್ರ ರಾವ್ ಅವರು ಈ ಹಿಂದೆ ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರ ಕಚೇರಿಯಲ್ಲೇ ಈ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಡಿಯೋ ವಿವಾದದ ಬಗ್ಗೆ ಮಾತನಾಡಿದ ರಾಮಚಂದ್ರ ರಾವ್, ಇಡೀ ಪ್ರಕರಣವನ್ನು ತಳ್ಳಿಹಾಕಿದ್ದಾರೆ. "ಈ ವಿಡಿಯೋ ನೋಡಿ ನನಗೆ ಶಾಕ್ ಆಗಿದೆ. ಇದರಲ್ಲಿರುವ ಮಹಿಳೆ ಯಾರು ಎಂಬುದು ನನಗೆ ಗೊತ್ತಿಲ್ಲ. ಇದು ಸಂಪೂರ್ಣವಾಗಿ ಎಡಿಟ್ ಮಾಡಿದ ಫ್ಯಾಬ್ರಿಕೇಟೆಡ್ ವಿಡಿಯೋ" ಎಂದು ಅವರು ಹೇಳಿದ್ದಾರೆ.

"ಇಂದಿನ ಕಾಲದಲ್ಲಿ ತಂತ್ರಜ್ಞಾನ ಬಳಸಿ ಏನನ್ನು ಬೇಕಾದರೂ ಸೃಷ್ಟಿಸಬಹುದು. ಇದು AI (Artificial Intelligence) ಜನರೇಟೆಡ್ ವಿಡಿಯೋ ಇರಬಹುದು. ಇದರ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ" ಎಂದು ಹೇಳಿದ್ದಾರೆ.

ನೈಜ ವಿಡಿಯೋ ಎನ್ನುವ ವಾದ

ಅಧಿಕಾರಿ ಇದು ಎಐ ಜನರೇಟೆಡ್ ವಿಡಿಯೋ ಎಂದು ಹೇಳುತ್ತಿದ್ದರೂ, ವಿಡಿಯೋದಲ್ಲಿರುವ ದೃಶ್ಯಗಳು ಅತ್ಯಂತ ಸ್ಪಷ್ಟವಾಗಿವೆ. ವಿಡಿಯೋದಲ್ಲಿರುವ ವ್ಯಕ್ತಿ ರಾಮಚಂದ್ರ ರಾವ್ ಅವರನ್ನೇ ಹೋಲುತ್ತಿದ್ದು, ಕಚೇರಿಯ ಪರಿಸರ ಕೂಡ ನೈಜವಾಗಿ ಕಾಣುತ್ತಿದೆ. ತಜ್ಞರ ಪ್ರಕಾರ, ಎಐ ವಿಡಿಯೋಗಳಿಗೂ ಮತ್ತು ನೈಜ ವಿಡಿಯೋಗಳಿಗೂ ವ್ಯತ್ಯಾಸ ಗುರುತಿಸುವುದು ಸುಲಭ. ಆದರೆ ಈ ವಿಡಿಯೋದಲ್ಲಿ ಅಂತಹ ಯಾವುದೇ ಲಕ್ಷಣಗಳು ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ ಎಂಬ ವಾದವೂ ಕೇಳಿಬರುತ್ತಿದೆ.

ವಿಡಿಯೋ ಬೆಂಗಳೂರಿನದ್ದಿರಲಿ ಅಥವಾ ಬೆಳಗಾವಿಯದ್ದಿರಲಿ, ಜವಾಬ್ದಾರಿಯುತ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿ ಸಮವಸ್ತ್ರ ಧರಿಸಿಯೇ ಇಂತಹ ಕೃತ್ಯದಲ್ಲಿ ತೊಡಗಿರುವುದು ಇಡೀ ಇಲಾಖೆಗೆ ಮುಜುಗರ ತಂದಿದೆ. ಅವರ ಕೆಳಗೆ ಕೆಲಸ ಮಾಡುವ ಸಾವಿರಾರು ಸಿಬ್ಬಂದಿಗಳಿಗೆ ಇದು ತಪ್ಪು ಸಂದೇಶ ರವಾನಿಸುತ್ತದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.