ಜೆಡಿಎಸ್‌ನಲ್ಲಿ ದೇವೇಗೌಡರ ಮಾತಿಗೆ ಈಗ ಕಿಮ್ಮತ್ತಿಲ್ಲ. ದೇವೇಗೌಡರು ಕಟ್ಟಿಬೆಳೆಸಿದ ಪಕ್ಷವನ್ನು ಅವರ ಪಕ್ಷದವರೇ ಇನ್ನೊಂದು ಪಕ್ಷದ ಕೈ ಕೆಳಗೆ ಇಡುತ್ತಿದ್ದಾರೆ ಎಂದರೆ ನಾವ್ಯಾಕೆ ಬೇಡ ಎನ್ನೋಣ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಂಡ್ಯ (ಜು.23) :  ಜೆಡಿಎಸ್‌ನಲ್ಲಿ ದೇವೇಗೌಡರ ಮಾತಿಗೆ ಈಗ ಕಿಮ್ಮತ್ತಿಲ್ಲ. ದೇವೇಗೌಡರು ಕಟ್ಟಿಬೆಳೆಸಿದ ಪಕ್ಷವನ್ನು ಅವರ ಪಕ್ಷದವರೇ ಇನ್ನೊಂದು ಪಕ್ಷದ ಕೈ ಕೆಳಗೆ ಇಡುತ್ತಿದ್ದಾರೆ ಎಂದರೆ ನಾವ್ಯಾಕೆ ಬೇಡ ಎನ್ನೋಣ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ(Chaluvarayaswamy) ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶನಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು(HD Devegowda) ಇದುವರೆಗೂ ಪಕ್ಷವನ್ನು ಇನ್ನೊಂದು ಪಕ್ಷದೊಂದಿಗೆ ವಿಲೀನ ಮಾಡುವ ನಿರ್ಧಾರ ತೆಗೆದುಕೊಂಡ ನಿದರ್ಶನವೇ ಇಲ್ಲ. 10 ಸ್ಥಾನಗಳಲ್ಲಿ ಗೆಲ್ಲಲಿ, 3 ಸ್ಥಾನ ಗೆಲ್ಲಲಿ ಅಥವಾ 50 ಸ್ಥಾನಗಳಲ್ಲೇ ಗೆಲ್ಲಲಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇಂದು ದೇವೇಗೌಡರು ಕಟ್ಟಿಬೆಳೆಸಿದ ಪಕ್ಷವನ್ನು ಅವರ ಪಕ್ಷದವರೇ ಬೇರೆ ಪಕ್ಷಕ್ಕೆ ಕೊಡುತ್ತಿದ್ದಾರೆ ಎಂದರೆ ಅದು ಅವರ ಪಕ್ಷದ ತೀರ್ಮಾನ. ಇದನ್ನು ಬೇಡ ಎನ್ನಲು ನಾವ್ಯಾರು ಎಂದರು.

ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ದೇವೇಗೌಡರು ಸ್ಪಷ್ಟಪಡಿಸಲಿ: ಸಚಿವ ಚಲುವರಾಯಸ್ವಾಮಿ

ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿಯಾಗಲು ಹೊರಟಿವೆ. ಕಾಂಗ್ರೆಸ್‌ ಪಕ್ಷಕ್ಕೆ ಒಬ್ಬರು ಪೈಪೋಟಿ ಕೊಡಲು ಸಾಧ್ಯವಿಲ್ಲವೆಂದು ಇಬ್ಬರು ಸೇರುತ್ತಿದ್ದಾರೆ. ಅವರ ಮೈತ್ರಿಯ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಚುನಾವಣೆಯಲ್ಲಿ ಬಿಜೆಪಿಯ ಭರವಸೆಗಳನ್ನು ನಂಬಲಿಲ್ಲ. ಜೆಡಿಎಸ್‌ನ ಪಂಚರತ್ನ ಯೋಜನೆಯನ್ನೂ ನಂಬಲಿಲ್ಲ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ನಂಬಿದರು. ನಾವು ಅವುಗಳನ್ನು ಜಾರಿಗೊಳಿಸಿದ್ದೇವೆ. ಇದರಿಂದ ಎರಡೂ ಪಕ್ಷದವರು ಹತಾಶರಾಗಿದ್ದಾರೆ ಎಂದು ಕುಟುಕಿದರು.

ಬಿಜೆಪಿ ದುರ್ಬಲ:

ಅಧಿವೇಶನ ನಡೆಯುವ ಸಮಯದಲ್ಲಿ ವಿಪಕ್ಷ ನಾಯಕನೊಬ್ಬನನ್ನು ಆಯ್ಕೆ ಮಾಡಲಾಗದಂತಹ ದುರ್ಬಲ ಸ್ಥಿತಿಯನ್ನು ಬಿಜೆಪಿ ಎದುರಿಸುತ್ತಿದೆ. ಇಂತಹ ಬೆಳವಣಿಗೆಯನ್ನು ನಾವು ಇತಿಹಾಸದಲ್ಲೇ ನೋಡಿಲ್ಲ. ಜೆಡಿಎಸ್‌ನಲ್ಲಿ ಸಂಘಟನೆ ಮಾಡಲಾಗುತ್ತಿಲ್ಲ. ಬಿಜೆಪಿಗೆ ಜೆಡಿಎಸ್‌ ಅನಿವಾರ್ಯವಾದರೆ, ಜೆಡಿಎಸ್‌ನವರಿಗೆ ಬಿಜೆಪಿಯವರೂ ಅನಿವಾರ್ಯವಾಗಿದ್ದಾರೆ. ಅವರಿಬ್ಬರಿಗೂ ಹೊಂದಾಣಿಕೆ ಅನಿವಾರ್ಯವಾಗಿದೆ ಎಂದರು.

ಯಾರೀ ಸುರೇಶ್‌ಗೌಡ?

ಕೃಷಿ ಸಚಿವರು ವಾರಕ್ಕೊಂದು ಬಾರಿ ನಾಗಮಂಗಲಕ್ಕೆ ಬಂದು ಕಲೆಕ್ಷನ್‌ ಮಾಡ್ತಾರೆ ಎಂಬ ಮಾಜಿ ಶಾಸಕ ಸುರೇಶ್‌ಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾರ್ರೀ ಅದು ಸುರೇಶಗೌಡ. ಯಾರು ಅವರು? ಯಾರದೋ ಹೆಸರಿನಲ್ಲಿ, ಯಾವುದೋ ಘಳಿಗೆಯಲ್ಲಿ ಶಾಸಕರಾದವರು ಲೀಡರ್‌ ಆಗೋಕೆ ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಸ್ವಂತ ಶಕ್ತಿ ಬೆಳೆಸಿಕೊಂಡವರು ನಾಯಕರಾಗುತ್ತಾರೆ. ಐದು ವರ್ಷ ಜೆಡಿಎಸ್‌ನ ಏಳು ಶಾಸಕರಿದ್ದರು. 12 ತಿಂಗಳು ಜೆಡಿಎಸ್‌ ಸರ್ಕಾರ ಇತ್ತು, ಇಬ್ಬರು ಮಂತ್ರಿಗಳಿದ್ದರು. ಅಭಿವೃದ್ಧಿಗೆ ಕೊಟ್ಟಕೊಡುಗೆ ಏನು ಎನ್ನುವುದನ್ನು ನೆನಪಿಸಿಕೊಳ್ಳಲಿ ಎಂದು ಜರಿದರಲ್ಲದೇ, ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಜಗದೀಶ್‌ನಿಂದ ಕಂಪ್ಲೆಂಟ್‌ ಕೊಡಿಸಿದವರು, ಅವರನ್ನು ದುರುಪಯೋಗಪಡಿಸಿಕೊಂಡವರು ಯಾರೆಂಬುದು ಜನರಿಗೆ ಗೊತ್ತಿದೆ. ದುಡ್ಡು ಕೊಟ್ಟು ಹೇಳಿಕೆ ಕೊಡಿಸಿದ ಆರೋಪ ಬರುತ್ತೆ ಎಂದೇ ನಾನು ಆಸ್ಪತ್ರೆಗೆ ಜಗದೀಶ್‌ನನ್ನು ನೋಡಲು ಹೋಗಲಿಲ್ಲ ಎಂದರು.

ಜೆಡಿಎಸ್‌ನವರು ಬದುಕಿಸೋಕೆ ತಯಾರಿರಲಿಲ್ಲ:

ಸಾವು-ಬದುಕಿನ ನಡುವೆ ಸೆಣಸಾಡುತ್ತಿದ್ದವನನ್ನು ಬದುಕಿಸಲು ಪ್ರಯತ್ನಿಸದೆ ಆ್ಯಂಬುಲೆನ್ಸ್‌ನ್ನು ತಡೆದರು. ಕುಮಾರಸ್ವಾಮಿ ಆಸ್ಪತ್ರೆಗೆ ಸ್ಥಳಾಂತರ ಮಾಡಬೇಡಿ ಎನ್ನುತ್ತಾರೆ. ಜೆಡಿಎಸ್‌ನವರು ಜಗದೀಶ್‌ನನ್ನು ಬದುಕಿಸೋಕೆ ತಯಾರಿದ್ದರಾ. ಈ ಬಗ್ಗೆ ಅವರ ಮನಸಾಕ್ಷಿಯನ್ನು ಕೇಳಿಕೊಳ್ಳೋಕೆ ಜೆಡಿಎಸ್‌ನವರಿಗೆ ಹೇಳಿ ಎಂದು ಟಾಂಗ್‌ ಕೊಟ್ಟರು.

ನಮಗೆ ಅಭಿವೃದ್ಧಿ ಬದ್ಧತೆ ಇದೆ:

ನನಗೆ ಜಿಲ್ಲೆ ಅಭಿವೃದ್ಧಿ ಬಗ್ಗೆ ಬದ್ಧತೆ ಇದೆ. ಎಲ್ಲಿಗೇ ಹೋದರೂ ಜಿಲ್ಲೆ ನೆನಪಿಗೆ ಬರುತ್ತೆ. ಇಡೀ ರಾಜ್ಯದ ಜವಾಬ್ದಾರಿ ಜೊತೆಗೆ ಮಂಡ್ಯ ಜವಾಬ್ದಾರಿ ನನ್ನ ಮೇಲಿದೆ. ನಾವು ಬಂದ ಕೂಡಲೇ ಮೈಷುಗರ್‌ ಆರಂಭವಾಗಿದೆ. 50 ಕೋಟಿ ಹಣ ಕೊಡಿಸಿದ್ದೇವೆ. ಜೆಡಿಎಸ್‌ನವರ ಕಾಲದಲ್ಲಿ ಇಂತಹ ಬೆಳವಣಿಗೆ ನಡೆದಿತ್ತಾ ಎಂದು ಪ್ರಶ್ನಿಸಿದರು.

ಶಾಸಕರು ತಾಳ್ಮೆಯಿಂದ ಕೆಲಸ ಮಾಡಬೇಕು: ಸಚಿವ ಚಲುವರಾಯಸ್ವಾಮಿ

ಸಿಎಂ ಮಾಡೋದು ಗೊತ್ತು, ಇಳಿಸೋದು ಗೊತ್ತು ಎಂಬ ಬಿ.ಕೆ.ಹರಿಪ್ರಸಾದ್‌ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಕಾರಣಕ್ಕೆ ಹಾಗೆ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಇದು ಅನವಶ್ಯಕ. ಬಹುಶಃ ಅವರು ಹಾಗೆ ಹೇಳಿರೋಕೆ ಸಾಧ್ಯವಿಲ್ಲ. ನಮ್ಮ ಪಾರ್ಟಿಯಲ್ಲಿ ಆ ಥರಹದ ಆಲೋಚನೆ ಇಲ್ಲ. ಸಿಎಂ ಬಗ್ಗೆ ಯಾವುದೇ ಅಪಸ್ವರ ಇಲ್ಲ. ಸಿಎಂ ಸದೃಢವಾಗಿದ್ದಾರೆ, ಸರ್ಕಾರವೂ ಸದೃಢವಾಗಿದೆ ಎಂದರು.

ಶಾಸಕ ಪಿ.ರವಿಕುಮಾರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಸಿ.ಜೋಗಿಗೌಡ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಇತರರಿದ್ದರು.