ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ದೇವೇಗೌಡರು ಸ್ಪಷ್ಟಪಡಿಸಲಿ: ಸಚಿವ ಚಲುವರಾಯಸ್ವಾಮಿ
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಮಾತುಕೇಳಿ ಬರುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಸೋತು ಸುಣ್ಣವಾಗಿವೆ. ಹೀಗಾಗಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ಮುಂದಾಗಿವೆ. ಮೈತ್ರಿ ಬಗ್ಗೆ ನನಗೆ ನಂಬಿಕೆ ಇಲ್ಲ. ಕುಮಾರಸ್ವಾಮಿ ಮಾತಿನ ಮೇಲೂ ನಂಬಿಕೆ ಇಲ್ಲ. ಮೈತ್ರಿ ಕುರಿತು ದೇವೇಗೌಡರೇ ಸ್ಪಷ್ಟಪಡಿಸಬೇಕು ಎಂದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ.
ಶಿವಮೊಗ್ಗ(ಜು.22): ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತುಟಿ ಬಿಚ್ಚುವವರೆಗೂ ಆ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಮಾತುಕೇಳಿ ಬರುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಸೋತು ಸುಣ್ಣವಾಗಿವೆ. ಹೀಗಾಗಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ಮುಂದಾಗಿವೆ. ಮೈತ್ರಿ ಬಗ್ಗೆ ನನಗೆ ನಂಬಿಕೆ ಇಲ್ಲ. ಕುಮಾರಸ್ವಾಮಿ ಮಾತಿನ ಮೇಲೂ ನಂಬಿಕೆ ಇಲ್ಲ. ಮೈತ್ರಿ ಕುರಿತು ದೇವೇಗೌಡರೇ ಸ್ಪಷ್ಟಪಡಿಸಬೇಕು ಎಂದರು.
ಜೆಡಿಎಸ್- ಬಿಜೆಪಿ ಮೈತ್ರಿ: ಎಚ್‌ಡಿ ದೇವೇಗೌಡರ ನಿಲುವು ಏನು?
ಸದನದಲ್ಲಿ ಜೊತೆ ಜೊತೆಯಾಗಿ ಎರಡೂ ಪಕ್ಷ ನಡೆದುಕೊಂಡು ಹೋಗುತ್ತಿವೆ. ಬಿಜೆಪಿಗೂ ಅನಿವಾರ್ಯತೆ ಇದೆ. ಜೆಡಿಎಸ್‌ಗೂ ಬಿಜೆಪಿ ಜೊತೆ ಹೋಗುವ ಅವಶ್ಯಕತೆ ಕಂಡುಬರುತ್ತಿದೆ. ಆದರೆ, ಇದನ್ನು ಲೋಕಸಭಾ ಚುನಾವಣೆಯಲ್ಲಿ ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಟೀಕಿಸಿದರು.
ಕುಟುಂಬದವರೇ ಕಾರಣ: ಬಿಜೆಪಿ ಸರ್ಕಾರ ಧಿಕ್ಕರಿಸಿ ಜನ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ನಾವು ಸುಮ್ಮನೆ ಬೆಳಗ್ಗೆ ಹೋಗಿ, ರಾತ್ರಿ ಗೆದ್ದವರಲ್ಲ. ಕುಮಾರಸ್ವಾಮಿ ನಡವಳಿಕೆ, ಸರಿಯಿಲ್ಲ ಅಂತ ಆ ಪಕ್ಷದಿಂದ ಹೊರಗೆ ಬಂದಿದ್ದೇವೆ. ಆರಂಭದಿಂದಲೂ ಪ್ರತಿ ಚುನಾವಣೆಯಲ್ಲಿ ಕನಿಷ್ಠ 10 ಜನ ಜೆಡಿಎಸ್‌ನಿಂದ ಹೊರಬರ್ತಿದ್ದಾರೆ. ಆ ಪಕ್ಷ ಈ ಸ್ಥಿತಿಗೆ ಬರಲು ಅವರ ಕುಟುಂಬವೇ ಕಾರಣ ಹೊರತೂ ನಾವಲ್ಲ ಎಂದು ತಿರುಗೇಟು ನೀಡಿದರು.
ಪೈನ್‌ಡ್ರೈವ್ ಬಿಡುಗಡೆಗೆ ಹೇಳಿ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪೆನ್‌ಡ್ರೈವ್ ಬಿಡುಗಡೆ ಮಾಡಲು ಯಾರು ಬೇಡ ಅಂದಿದ್ದಾರೆ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪವೂ ಸತ್ಯಕ್ಕೆ ದೂರವಾದುದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದೂವರೆ ತಿಂಗಳು ಆಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಹೇಗೆ ವರ್ಗಾವಣೆ ಆಗಿದೆಯೋ ಅದೇ ರೀತಿ ವರ್ಗಾವಣೆ ನಡೆಯುತ್ತಿದೆ ಎಂದು ಹೇಳಿದರು.