ರಾಜ್ಯ ರಾಜಧಾನಿಯಲ್ಲಿ ಕೊರೋನಾ ನಿಯಂತ್ರಿಸಲು ಮುಂಬೈ ಮಾದರಿ!
ಬೆಂಗಳೂರಿನಲ್ಲಿ ಏರುತ್ತಲೇ ಇದೆ ಕೊರೋನಾ| ಕೊರೋನಾ ಪ್ರಕರಣಗಳ ನಿಯಂತ್ರಣಕ್ಕೆ ಮುಂಬೈ ಮಾದರಿ ಮೊರೆ ಹೋದ ಸರ್ಕಾರ| ವಾರ್ಡ್ ಮಟ್ಟದ ಸಮಿತಿ ರಚನೆ
ಬೆಂಗಳೂರು(ಮೇ.09): ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ನಿರ್ವಹಣೆಗೆ ಮುಂಬೈ ಮಾದರಿಯನ್ನು ಅನುಸರಿಸಲು ಸರ್ಕಾರ ನಿರ್ಧರಿಸಿದೆ. ಮಹಾನಗರದ ಎಲ್ಲಾ 198 ವಾರ್ಡ್‌ಗಳಲ್ಲಿ ವಿಕೇಂದ್ರೀಕೃತ ಚಿಕಿತ್ಸೆ ಮತ್ತು ತುರ್ತು ಪ್ರತಿಕ್ರಿಯೆ ಸಮಿತಿ(DETER) ರಚಿಸಲು ಸರ್ಕಾರ ಮುಂದಾಗಿದೆ.
ಇಂತಹುದ್ದೊಂದು ಯೋಜನೆ ಜಾರಿಗೊಳಿಸಲು ಶನಿವಾರ ಸರ್ಕಾರ ನಿರ್ಧರಿಸಿದ್ದು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಅಲ್ಲದೇ ನಗರದ ಪ್ರತಿಯೊಬ್ಬ ವ್ಯಕ್ತಿಯ ಸುರಕ್ಷತೆಗಾಗಿ ಈ ಕ್ರಮ ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಸಮಿತಿ ಜೊತೆ ಸಂಪರ್ಕ ಸಾಧಿಸಿ, ಸೂಕ್ತವಾದ ಆರೋಗ್ಯ ವ್ಯವಸ್ಥೆ ಪಡೆದುಕೊಳ್ಳಲು ಜನರಿಗೆ ಸಾಧ್ಯವಾಗುತ್ತದೆ ಎಂದಿದ್ದಾರೆ.
ವಾರ್ಡ್ ಮಟ್ಟದ ಈ ಸಮಿತಿ ಬಹುತೇಕ ನಗರಗಳಲ್ಲಿ ಯಶಸ್ವಿಯಾಗಿದೆ. ಸೂಕ್ತ ಸಮಯದಲ್ಲಿ ಸೂಕ್ತವಾದ ಚಿಕಿತ್ಸೆ ನಿಡಲು ಸಹಕಾರಿಯಾಘುತ್ತದೆ. ಸದ್ಯಕ್ಕೀಗ ಇರುವ ಕೆಂದ್ರೀಕ್ಋತ ವ್ಯವಸ್ಥೆಯಿಂದ ಟೆಸ್ಟ್ ರಿಪೋರ್ಟ್ ನೀಡುವ ಪ್ರಕ್ರಿಯೆ, ಆಸ್ಪತ್ರೆಗೆ ದಾಖಲಾಗುವ ಪ್ರಕ್ರಿಯೆ ಹಾಗೂ ಬಿಯು ನಂಬರ್ ಒದಗಿಸುವ ಪ್ರಕ್ರಿಯೆ ಹೀಗೆ ಎಲ್ಲಾ ವಿಚಾರದಲ್ಲೂ ವಿಳಂಬವಾಗುತ್ತಿದೆ ಎಂದೂ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಕಾರ್ಯ ನಿರ್ವಹಣೆ ಹೇಗೆ?
* ಪ್ರತಿ ವಾರ್ಡಿನಲ್ಲಿ ವೈದ್ಯರು, ದಾದಿಯರು, ಸ್ವಯಂ ಸೇವಕರು, ಸ್ಥಳೀಯ ನಿವಾಸಿಗಳ ಸಂಘಗಳ ಪದಾಧಿಕಾರಿಗಳಿರುವ ಕನಿಷ್ಠ 50 ಜನರ ಸಮಿತಿ ರಚನೆ. ಈ ಸಮಿತಿ ಸೋಂಕಿತರನ್ನು ಚಿಕಿತ್ಸೆಯ ಅಗತ್ಯವನ್ನು ಆದ್ಯತೆ ಆಧಾರದಲ್ಲಿ ನಿರ್ಧರಿಸುವ ಕೇಂದ್ರಕ್ಕೆ (ಟ್ರಯೇಜಿಂಗ್ ಸೆಂಟರ್) ಕರೆತಂದು, ರೋಗ ಲಕ್ಷಣಗಳಿಗೆ ಅನುಗುಣವಾಗಿ ವರ್ಗೀಕರಿಸುತ್ತದೆ.
* ಆಸ್ಪತ್ರೆಯಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆಯೂ ಜಾರಿಗೊಳಿಸುವ ಸಾಧ್ಯತೆ ಇದೆ.
* ವಾರ್ಡ್ ಸಮಿತಿಗಳು ಸಾಧಾರಣ ರೋಗಲಕ್ಷಣ ಇರುವವರಿಗೆ ಮನೆಯಲ್ಲಿ ಕ್ವಾರಂಟೈನ್ ಆಗಲು ಸೂಚಿಸುತ್ತವೆ. ಈ ನಿಟ್ಟಿನಲ್ಲಿ ಔಷದ ಕಿಟ್ ಒದಗಿಸಲಿವೆ. ಆಸ್ಪತ್ರೆಗೆ ದಾಖಲಿಸಬೇಕಾದವರನ್ನು ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಗೆ ದಾಖಲಿಸಲಿವೆ.
* ಹಾಸಿಗೆ ಹಂಚಿಕೆ ವ್ಯವಸ್ಥೆ ಸುಧಾರಣೆಗೆ ಈಗ ಪ್ರತಿ ಕೇಂದ್ರದ ಕಂಪ್ಯೂಟರಿನ ಐ -ಮ್ಯಾಕ್ ಐಡಿ ಹೊಂದಿರುವವರು ಇನ್ನು ಮುಂದೆ ಹೆಸರನ್ನು ಸಹ ನಮೂದಿಸಬೇಕು ಎಂಬ ನಿಯಮ ಕಡ್ಡಾಯಗೊಳಿಸಲಾಗಿದೆ
* ಇದನ್ನು ಹೊರತುಪಡಿಸಿ ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಕೊರೋನಾ ನಿಯಂತ್ರಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ಜಾಗೃತಿ ಮೂಡಿಸಲಿದೆ ಈ ಸಮಿತಿ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona