Asianet Suvarna News Asianet Suvarna News

Karnataka Elections: ನಾಲ್ಕು ಚುನಾವಣೆಗಳಲ್ಲಿ 7379 ಅಭ್ಯರ್ಥಿಗಳ ಠೇವಣಿ ಜಪ್ತಿ

ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ 10695 ಅಭ್ಯರ್ಥಿಗಳ ಪೈಕಿ 7379 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದು, ಅಂದಾಜು 5 ಕೋಟಿಗೂ ಠೇವಣಿ ಹಣ ಮುಟ್ಟುಗೋಲು ಹಾಕಿಕೊಂಡ ಚುನಾವಣೆ ಆಯೋಗ 

Deposits of 7379 Candidates Forfeited in 4 Elections in Karnataka grg
Author
First Published May 30, 2023, 1:56 PM IST | Last Updated May 30, 2023, 1:56 PM IST

ಮಂಜುನಾಥ ಗದಗಿನ

ಬೆಳಗಾವಿ(ಮೇ.30): ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್‌ ಸ್ಪಷ್ಟ ಬಹುಮತ ಗಳಿಸಿ ಇದೀಗ ಸರ್ಕಾರ ರಚನೆ ಮಾಡುತ್ತಿದ್ದರೆ, ಇತ್ತ ಗೆದ್ದ ಅಭ್ಯರ್ಥಿಗಳು ನನಗೆ ಸಚಿವ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆ ಚುನಾವಣೆಯಲ್ಲಿ ಸ್ಪರ್ಧಿಸಿ ಯಾರು ಯಾರು ಠೇವಣಿ ಕಳೆದುಕೊಂಡರು ಎಂಬ ಬಿಸಿಬಿಸಿ ಚರ್ಚೆ ಕೂಡ ನಡೆದಿದೆ. ಈ ಮಧ್ಯೆ ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ 10695 ಅಭ್ಯರ್ಥಿಗಳ ಪೈಕಿ 7379 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದು, ಅಂದಾಜು 5 ಕೋಟಿಗೂ ಠೇವಣಿ ಹಣ ಚುನಾವಣೆ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ.

ಕರ್ನಾಟಕ 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 223 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಒಟ್ಟು 2,242 ಅಭ್ಯರ್ಥಿಗಳ ಪೈಕಿ 1694 ಅಭ್ಯರ್ಥಿಗಳು, 2013ರ ಚುನಾವಣೆಯಲ್ಲಿ ಒಟ್ಟು ಸ್ಪರ್ಧಿಸಿದ್ದ 2948 ಅಭ್ಯರ್ಥಿಗಳ ಪೈಕಿ 2,419 ಅಭ್ಯರ್ಥಿಗಳು, 2018ರಲ್ಲಿ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 2892 ಅಭ್ಯರ್ಥಿಗಳ ಪೈಕಿ 1146, 2023ರಲ್ಲಿ 2,613 ಪೈಕಿ 2120 ಠೇವಣಿ ಕಳೆದುಕೊಂಡಿದ್ದಾರೆ.

ಒಂದೇ ದಿನ ಪ್ರಚಾರ: 1.2 ಲಕ್ಷ ಅಂತರದಿಂದ ಗೆದ್ದ ಡಿಕೆಶಿ: ಠೇವಣಿ ಕಳೆದುಕೊಂಡ ಆರ್ ಅಶೋಕ್‌

2008ರಲ್ಲಿ 1694 ಜನರ ಠೇವಣಿ ನಷ್ಟ:

2008ರ ವಿಧಾನಸಭೆ ಚುನಾವಣೆಯಲ್ಲಿ 223 ಕ್ಷೇತ್ರಗಳಲ್ಲಿ 2,242 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಪೈಕಿ 1,694 ಠೇವಣಿ ಕಳೆದುಕೊಂಡಿದ್ದರು. ಬಿಜೆಪಿ 110 ಅಭ್ಯರ್ಥಿಗಳು ಗೆದ್ದು 31 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಕಾಂಗ್ರೆಸ್‌ 80 ಅಭ್ಯರ್ಥಿಗಳು ಗೆಲವು ಸಾಧಿಸಿದ್ದರು. 11 ಅಭ್ಯರ್ಥಿಗಳ ಠೇವಣಿ ನಷ್ಟವಾಗಿತ್ತು. ಜೆಡಿಎಸ್‌ 28 ಅಭ್ಯರ್ಥಿಗಳು ಜಯ ಸಾಧಿಸಿದ್ದರು. 107 ಅಭ್ಯರ್ಥಿಗಳು ಹೀನಾಯ ಸೋಲುಂಡು ಠೇವಣಿ ಕಳೆದುಕೊಂಡಿದ್ದರು. 944 ಪಕ್ಷೇತರ ಅಭ್ಯರ್ಥಿಗಳ ಪೈಕಿ 923 ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲು ಆಗಿತ್ತು.

2013ರಲ್ಲಿ 2,419 ಅಭ್ಯರ್ಥಿಗಳ ಠೇವಣಿ ನಷ್ಟ:

2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 2,948 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಪೈಕಿ 2,419 ಅಭ್ಯರ್ಥಿಗಳ ಠೇವಣಿ ನಷ್ಟವಾಗಿತ್ತು. ಬಿಜೆಪಿ 40 ಅಭ್ಯರ್ಥಿಗಳು ಗೆಲುವು ಸಾಧಿಸಿ, 110 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಕಾಂಗ್ರೆಸ್‌ 122 ಸ್ಥಾನಗಳಲ್ಲಿ ಗೆದ್ದಿತ್ತು. 23 ಅಭ್ಯರ್ಥಿಗಳ ಠೇವಣಿ ನಷ್ಟವಾಗಿತ್ತು. ಜೆಡಿಎಸ್‌ 40 ಸ್ಥಾನಗಳಲ್ಲಿ ಗೆದ್ದು, 110 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಅಂದು ಯಡಿಯೂರಪ್ಪ ರಚಿಸಿದ್ದ ಕೆಜೆಪಿ ಪಕ್ಷ ಸ್ಪರ್ಧಿಸಿದ್ದ 204 ಅಭ್ಯರ್ಥಿಗಳಲ್ಲಿ 6 ಜನರು ಮಾತ್ರ ಗೆದ್ದಿದ್ದರು. 146 ಅಭ್ಯರ್ಥಿಗಳ ನಷ್ಟವಾಗಿತ್ತು. 1,217 ಪಕ್ಷೇತರ ಅಭ್ಯರ್ಥಿಗಳ ಪೈಕಿ 9 ಮಂದಿ ಗೆಲವು ಕಂಡಿದ್ದರೆ 1,190 ಜನರ ಠೇವಣಿ ಕಳೆದುಕೊಂಡಿದ್ದರು.

2018ರಲ್ಲಿ 1,146 ಅಭ್ಯರ್ಥಿಗಳ ಠೇವಣಿ ನಷ್ಟ:

2018ರ ಚುನಾವಣೆಯಲ್ಲಿ ಬಿಜೆಪಿಯ 104 ಅಭ್ಯರ್ಥಿಗಳು ಗೆಲುವು ಸಾಧಿಸಿ, 39 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಕಾಂಗ್ರೆಸ್‌ನ 80 ಅಭ್ಯರ್ಥಿಗಳು ಗೆದ್ದಿದ್ದರು. 13 ಅಭ್ಯರ್ಥಿಗಳ ಠೇವಣಿ ನಷ್ಟವಾಗಿತ್ತು. ಜೆಡಿಎಸ್‌ನ 37 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ 107 ಅಭ್ಯರ್ಥಿಗಳ ಠೇವಣಿ ಕಳೆದುಕೊಂಡಿದ್ದರು. 1,153 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿ 1,138 ಠೇವಣಿ ನಷ್ಟ ಅನುಭವಿಸಿದ್ದರು.

ಮಂಡ್ಯದಲ್ಲಿ ಇದ್ದ ಒಂದು ಸ್ಥಾನವನ್ನೂ ಕಳೆದುಕೊಂಡ ಬಿಜೆಪಿ: ನಾಲ್ವರಿಗೆ ಠೇವಣಿಯೂ ಇಲ್ಲ

2023ರಲ್ಲಿ 2120 ಠೇವಣಿ ನಷ್ಟ:

ಪ್ರಸ್ತುತ ಚುನಾವಣೆಯಲ್ಲಿ 2,613 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, 2120 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಬಿಜೆಪಿಯ 66 ಅಭ್ಯರ್ಥಿಗಳು ಗೆಲವು ಕಂಡಿದ್ದರೆ 31 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನ 12 ಅಭ್ಯರ್ಥಿಗಳು, ಜೆಡಿಎಸ್‌ನ 136 ಅಭ್ಯರ್ಥಿಗಳ ಠೇವಣಿ ಹೋಗಿದೆ. 1611 ಪಕ್ಷೇತರರು ಸ್ಪರ್ಧೆ ಮಾಡಿದ್ದರು, ಇವರಲ್ಲಿ 1580ಕ್ಕೂ ಜನರು ಠೇವಣಿ ಕಳೆದುಕೊಂಡಿದ್ದಾರೆ. ಆಪ್‌ ತಾನು ಸ್ಪರ್ಧಿಸಿದ್ದ 207 ಕ್ಷೇತ್ರಗಳಲ್ಲೂ ಠೇವಣಿ ಕಳೆದುಕೊಂಡಿದೆ.

ಠೇವಣಿ ಮುಟ್ಟುಗೋಲು ಯಾಕೆ?

ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವವರು .10 ಸಾವಿರ ಠೇವಣಿ ಹಣವನ್ನು ನಾಮಪತ್ರ ಸಲ್ಲಿಕೆ ವೇಳೆ ಇಡಬೇಕು. ಪರಿಶಿಷ್ಟಜಾತಿ ಮತ್ತು ಪ.ಪಂಗಡ ಸಮುದಾಯದ ಅಭ್ಯರ್ಥಿಗಳು 5,000 ಠೇವಣಿ ಪಾವತಿಸಬೇಕು. ಅಭ್ಯರ್ಥಿ ತಾನು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಅರ್ಹ ಮತಗಳ 1/6 ಗಿಂತ (ಶೇ.16.67) ಹೆಚ್ಚು ಮತ ಗಳಿಸಬೇಕು. ಒಂದು ವೇಳೆ ಆ ಮತ ಗಳಿಕೆ ಅಸಾಧ್ಯವಾದರೆ ಅಭ್ಯರ್ಥಿಯ ಠೇವಣಿ ಹಣ ಜಪ್ತಿಯಾಗುತ್ತದೆ.

Latest Videos
Follow Us:
Download App:
  • android
  • ios