ಮಂಡ್ಯದಲ್ಲಿ ಇದ್ದ ಒಂದು ಸ್ಥಾನವನ್ನೂ ಕಳೆದುಕೊಂಡ ಬಿಜೆಪಿ: ನಾಲ್ವರಿಗೆ ಠೇವಣಿಯೂ ಇಲ್ಲ
ಮಂಡ್ಯದಲ್ಲಿ ಬಿಜೆಪಿಯ ಮೊದಿ, ಶಾ, ಯೋಗಿ, ನಡ್ಡಾ ಮುಂತಾದ ಘಟಾನುಘಟಿಗಳ ಪ್ರಚಾರದ ನಂತರವು ಜಿಲ್ಲೆಯಲ್ಲಿ ಒಂದು ಸ್ಥಾನವನ್ನು ಗೆಲ್ಲದೆ ಇದ್ದುದ್ದನ್ನು ಕಳೆದುಕೊಂಡು ಬಿಜೆಪಿ ಶೂನ್ಯ ಸಂಪಾದಿಸಿದೆ.
ಎಚ್.ಕೆ.ಅಶ್ವಥ್ ಹಳುವಾಡಿ, ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ:ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆಯಾದರೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಇದ್ದ ಒಂದು ಸ್ಥಾನವನ್ನು ಕಳೆದುಕೊಂಡು ಶೂನ್ಯ ಸಂಪಾದಿಸಿದೆ. 2019ರಲ್ಲಿ ನಡೆದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಿ ಗೆಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದ ಬಿಜೆಪಿ ಸಂಘಟನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡದಿರುವುದು ವೈಫಲ್ಯಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದನ್ನೆ ಮಾನದಂಡವಾಗಿಸಿಕೊಂಡು ಜಿಲ್ಲೆಯಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ವಿಸ್ತರಿಸುವ ಪ್ರಯತ್ನಕ್ಕಿಳಿಯಿತು. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಕಾಂಗ್ರೆಸ್- ಜೆಡಿಎಸ್‌ನಲ್ಲಿ ಟಿಕೆಟ್ ವಂಚಿತರಾದ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೆಳೆದುಕೊಂಡು ಎರಡೂ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಹಸಕ್ಕಿಳಿದಿತ್ತು. ಆದರೆ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಕೆ.ಆರ್ .ಪೇಟೆ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತಗಳಿಸಿದ್ದರೆ ವಿನಃ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೇಲುಕೋಟೆ, ಮಳವಳ್ಳಿ ಹಾಗೂ ನಾಗಮಂಗಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸಾಧನೆ ಕಳಪೆಯಾಗಿರುವುದು ಬಿಜೆಪಿ ವರ್ಚಸ್ಸಿಗೆ ಹಿನ್ನೆಡೆ ಉಂಟು ಮಾಡಿದೆ.
ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಶಾಸಕರನ್ನು ಗೆಲ್ಲಿಸಲು ಸಂಕಲ್ಪ ಮಾಡಿದ್ದ ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರು ಚುನಾವಣೆ ಘೋಷಣೆಗೂ ಮುಂಚೆಯೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರನ್ನು ಜಿಲ್ಲೆಗೆ ಕರೆತಂದು ಮೆಗಾಡೈರಿ ಉದ್ಘಾಟನೆ, ಬೆಂಗಳೂರು- ಮೈಸೂರು ಹೆದ್ದಾರಿಗೆ ಚಾಲನೆ ನೀಡಿ ಬಿಜೆಪಿ ಪರ ಅಲೆ ಎಬ್ಬಿಸುವ ಪ್ರಯತ್ನ ನಡೆಸಿತ್ತು. ಪ್ರಧಾನಿ ನರೇಂದ್ರ ಮೋದಿ ಸುಮಾರು ಒಂದು ಕಿ.ಮೀಗೂ ಹೆಚ್ಚು ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ರೋಡ್ ಶೋ ನಡೆಸಿದ್ದರು. ಈ ವೇಳೆ ಲಕ್ಷಾಂತರ ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಜನಸಂಕಲ್ಪ ಯಾತ್ರೆ ಮೂಲಕ ಜನತಾಶಕ್ತಿ ಪ್ರದರ್ಶಿಸಿ ಕಾಂಗ್ರೆಸ್ - ಜೆಡಿಎಸ್ ಪಾಳಯದಲ್ಲಿ ನಡುಕ ಹುಟ್ಟಿಸಿದ್ದರು.
ಸಚಿವರಾದ ಸಿ.ಟಿ.ರವಿ, ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಹಲವರು ಟಿಪ್ಪು ಸುಲ್ತಾನ್ ವಿಚಾರವಾಗಿ ಉರಿಗೌಡ - ನಂಜೇಗೌಡರ ಹೆಸರುಗಳನ್ನು ಮುನ್ನಲೆಗೆ ತಂದರಲ್ಲದೇ ಶ್ರೀರಂಗಪಟ್ಟಣದಲ್ಲಿ ಮೂಡಲ ಬಾಗಿಲು ಶ್ರೀ ಆಂಜನೇಯ ದೇವಸ್ಥಾನದ ವಿಚಾರ ತೆಗೆದು ಧರ್ಮ ರಾಜಕಾರಣದ ಹೆಸರಿನಲ್ಲಿ ವಿಧಾನಸಭಾ ಚುನಾವಣೆ ಎದುರಿಸಲು ಮುಂದಾಗಿದ್ದು ಜಿಲ್ಲೆಯಲ್ಲಿ ಹಿನ್ನೆಡೆಯಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಕಳೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಮೂರುವರೆ ವರ್ಷಗಳ ಕಾಲ ಸಚಿವರಾಗಿ ಕೆಲಸ ಮಾಡಿದ್ದ ಸಚಿವ ಕೆ.ಸಿ.ನಾರಾಯಣಗೌಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದರು. ಸಚಿವರಾದ ಆರ್.ಅಶೋಕ್, ಕೆ.ಗೋಪಾಲಯ್ಯ ಜಿಲ್ಲಾ ಉಸ್ತುವಾರಿ ಸಚಿವರುಗಳಾಗಿ ಕೆಲಸ ಮಾಡಿದ್ದರೂ ಅವರ ವೈಫಲ್ಯಗಳು ಬಿಜೆಪಿ ಗೆಲುವಿಗೆ ಮುಳುವಾದವು ಎಂದು ಹೇಳಲಾಗುತ್ತಿದೆ.
ಕೇಂದ್ರ ಬಿಜೆಪಿ ಸರ್ಕಾರದ ಆಡಳಿತವನ್ನು ಮೆಚ್ಚಿ ಸಂಸದೆ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಘೋಷಿಸಿದ್ದರು. ಅದರಂತೆ ಜಿಲ್ಲೆಯ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ನಾಗಮಂಗಲ ಕ್ಷೇತ್ರಗಳಲ್ಲಿ ಸಾಕಷ್ಟುಪ್ರಚಾರ ನಡೆಸಿದ್ದರು. ಮತದಾರರು ಮಾತ್ರ ಬಿಜೆಪಿ ಕೈ ಹಿಡಿಯಲಿಲ್ಲ.
ಜಿಲ್ಲೆಯಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರನ್ನು ಜಿಲ್ಲೆಗೆ ಕರೆಸಿ ಪ್ರಚಾರ ನಡೆಸಿತ್ತು. ಆದರೆ, ಒಕ್ಕಲಿಗ ಸಮುದಾಯ ಅವರತ್ತ ತಿರುಗಿಯೂ ನೋಡಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಚಿವರಾದ ಸಿ.ಟಿ.ರವಿ, ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದರೂ ಪ್ರಯೋಜನವಾಗಲಿಲ್ಲ.
ಆದರೆ, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಶ್ರೀರಂಗಪಟ್ಟಣ ಕ್ಷೇತ್ರದ ಸಚ್ಚಿದಾನಂದ, ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಸಚಿವ ನಾರಾಯಣಗೌಡ, ಮಂಡ್ಯ ಕ್ಷೇತ್ರದ ಅಶೋಕ್ ಎಸ್ .ಡಿ.ಜಯರಾಂ ನಿರೀಕ್ಷಿತ ಪ್ರಮಾಣದಲ್ಲಿ ಮತ ಪಡೆದು ಠೇವಣಿ ಉಳಿಸಿಕೊಂಡಿದ್ದಾರೆ. ಆದರೆ, ಮದ್ದೂರು ಕ್ಷೇತ್ರದ ಎಸ್ .ಪಿ.ಸ್ವಾಮಿ, ಮಳವಳ್ಳಿ ಕ್ಷೇತ್ರದ ಜಿ.ಮುನಿರಾಜು, ಮೇಲುಕೋಟೆ ಕ್ಷೇತ್ರದ ಡಾ.ಇಂದ್ರೇಶ್, ನಾಗಮಂಗಲ ಕ್ಷೇತ್ರದಲ್ಲಿ ಸುಧಾ ಶಿವರಾಮೇಗೌಡ ಠೇವಣಿ ಕಳೆದುಕೊಂಡು ಸೋಲು ಕಂಡಿದ್ದಾರೆ.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಸುಮಾರು 2 ಸಾವಿರ ಕೋಟಿಗೂ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿರುವುದಾಗಿ ಹೇಳಿದ್ದರು. ಆದರೆ, ಆಡಳಿತ ವಿರೋಧಿ ಅಲೆಯಲ್ಲಿ ಕಳೆದ ಉಪಚುನಾವಣೆಯಲ್ಲಿ ಸುಮಾರು 66,094 ಮತಗಳನ್ನು ಪಡೆದಿದ್ದ ಸಚಿವ ಕೆ.ಸಿ.ನಾರಾಯಣಗೌಡ ಈ ಚುನಾವಣೆಯಲ್ಲಿ 38,151 ಮತಗಳನ್ನಷ್ಟೆಪಡೆದು ಬಿಜೆಪಿ ಪಕ್ಷದ ಸಂಘಟನೆಗೆ ತೀವ್ರ ಹಿನ್ನಡೆಯಾಗಿದೆ.
ಬಿಜೆಪಿಯ 4 ಮಂದಿಗೆ ಠೇವಣಿಯೂ ಇಲ್ಲ
ಪ್ರಸಕ್ತ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದ ಬಿಜೆಪಿಯ ಏಳು ಮಂದಿ ಪೈಕಿ ನಾಲ್ಕು ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಮದ್ದೂರು ಕ್ಷೇತ್ರದ ಎಸ್.ಪಿ.ಸ್ವಾಮಿ, ನಾಗಮಂಗಲ ಕ್ಷೇತ್ರದ ಸುಧಾ ಶಿವರಾಮೇಗೌಡ, ಮೇಲುಕೋಟೆ ಕ್ಷೇತ್ರದ ಎನ್.ಇಂದ್ರೇಶ್ ಹಾಗೂ ಮಳವಳ್ಳಿ ಕ್ಷೇತ್ರದ ಜಿ.ಮುನಿರಾಜು ಠೇವಣಿ ಕಳೆದುಕೊಂಡವರಾಗಿದ್ದಾರೆ. ಸ್ವೀಕೃತವಾದ ಮತಗಳಲ್ಲಿ ಶೇ.1/6 ಭಾಗದಷ್ಟುಮತಗಳನ್ನು ಪಡೆಯಬೇಕು. ಇಷ್ಟುಮತಗಳನ್ನು ಪಡೆಯದಿರುವ ಕಾರಣ ನಾಲ್ವರು ಠೇವಣಿ ಕಳೆದುಕೊಂಡಿದ್ದಾರೆ. ಉಳಿದಂತೆ ಕೆ.ಆರ್.ಪೇಟೆ ಕ್ಷೇತ್ರದ ಕೆ.ಸಿ.ನಾರಾಯಣಗೌಡ, ಮಂಡ್ಯ ಕ್ಷೇತ್ರದ ಅಶೋಕ್ ಜಯರಾಂ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ಎಸ್.ಸಚ್ಚಿದಾನಂದ ಠೇವಣಿ ಉಳಿಸಿಕೊಂಡಿದ್ದಾರೆ.