ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ಯಾವುದೇ ಪತ್ರ ಬಂದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್‌ ಜೋಶಿ ತಿಳಿಸಿದ್ದಾರೆ.

ಬೆಂಗಳೂರು (ಜು.29): ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ಯಾವುದೇ ಪತ್ರ ಬಂದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್‌ ಜೋಶಿ ತಿಳಿಸಿದ್ದಾರೆ. ಹಾವೇರಿಯಲ್ಲಿ ಜನವರಿ 6ರಿಂದ 8ರವರೆಗೆ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಂದಿನ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಬಜೆಟ್‌ನಲ್ಲಿಯೇ 20 ಕೋಟಿ ರು.ಗಳನ್ನು ನಿಗದಿ ಪಡಿಸಿದ್ದರು. 

ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ನಡೆದು ದಾಖಲೆಯ ಸಂಖ್ಯೆಯಲ್ಲಿ ಕನ್ನಡಿಗರು ಪಾಲ್ಗೊಂಡಿದ್ದರು. ಹೀಗಾಗಿ ಇನ್ನೂ ಹೆಚ್ಚಿನ 5 ಕೋಟಿ ರು.ಗಳ ಬೇಡಿಕೆಯನ್ನು ಹಾವೇರಿ ಜಿಲ್ಲಾಡಳಿತವೇ ಸಲ್ಲಿಸಿದೆ. ಇದಕ್ಕೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಕನ್ನಡ ಸಾಹಿತ್ಯ ಪರಿಷತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ನಿಗದಿ, ಸರ್ವಾಧ್ಯಕ್ಷರ ಆಯ್ಕೆ, ಗೋಷ್ಠಿಗಳನ್ನು ರೂಪಿಸಿ ಅದಕ್ಕೆ ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕುವುದು, ಸನ್ಮಾನಕ್ಕೆ ಸಾಧಕರನ್ನು ಗುರುತಿಸುವಂತಹ ಕಾರ್ಯಗಳನ್ನು ನಿರ್ವಹಿಸುತ್ತದೆ. 

ವಿರೋ​ಧಿ​ಗ​ಳೊಂದಿಗೆ ರಾಜ​ಕೀಯ ಮಾಡೋಣ: ಶಾಸ​ಕ ವಿಜಯೇಂದ್ರ

ಆದರೆ ವೇದಿಕೆ ರೂಪಿಸುವುದು, ಊಟ-ವಸತಿ ಮೊದಲಾದ ಅವಶ್ಯ ಸೌಲಭ್ಯಗಳನ್ನು ಸುವ್ಯವಸ್ಥಿತವಾಗಿ ರೂಪಿಸುವುದನ್ನು ಜಿಲ್ಲಾಡಳಿತ ನಿರ್ವಹಿಸುತ್ತದೆ. ಆದ್ದರಿಂದ ಜಿಲ್ಲಾಡಳಿತವೇ ಲೆಕ್ಕ ಪತ್ರದ ಮೂಲಕ ಖರ್ಚು-ವೆಚ್ಚಗಳನ್ನು ಸಿದ್ದ ಪಡಿಸಿ ಸರ್ಕಾರಕ್ಕೆ ಸಲ್ಲಿಸಿ ಹೆಚ್ಚಿನ ಅನುದಾನ ಪಡೆದುಕೊಳ್ಳುವುದು ಮೊದಲಿಂದಲೂ ನಡೆದು ಕೊಂಡು ಬಂದ ಕ್ರಮ’ ಎಂದು ಹೇಳಿದ್ದಾರೆ. ‘ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿಯೇ ಇಪ್ಪತ್ತು ನಾನಾ ಸಮಿತಿಗಳು ರಚನೆಯಾಗಿದ್ದು, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿಯಲ್ಲಿ ಹಾವೇರಿ ಸಂಸದ ಶಿವಕುಮಾರ ಉದಾಸಿಯವರು ಗೌರವಾಧ್ಯಕ್ಷರಾಗಿದ್ದು, ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಅವರು ಅಧ್ಯಕ್ಷರಾಗಿದ್ದರು. 

ಕೊಡಗಿನ 44 ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆ: ಭಾರತೀಯ ಭೂವಿಜ್ಞಾನ ವರದಿಯಲ್ಲೇನಿದೆ?

ಲೆಕ್ಕ ಪತ್ರ ನಿರ್ವಹಣೆಯನ್ನು ಜಿಲ್ಲಾಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿರುವ ಈ ಸಮಿತಿಯೇ ಮಾಡಿದ್ದು ಹೆಚ್ಚುವರಿ ಹಣದ ಬೇಡಿಕೆಯನ್ನು ಈ ಸಮಿತಿಯೇ ಸಲ್ಲಿಸಿದೆ. ಇದರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯಾವುದೇ ಪಾತ್ರ ಇರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಇಲಾಖೆಯೂ ಅಲ್ಲ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸರ್ಕಾರಿ ನೌಕರರೂ ಅಲ್ಲ. ಖರ್ಚು ವೆಚ್ಚಕ್ಕೆ ಸಂಬಂಧ ಪಟ್ಟಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರದಿಂದ ಯಾವುದೇ ಪತ್ರವೂ ಬಂದಿಲ್ಲ’ ಎಂದಿದ್ದಾರೆ.