ಕೊಡಗಿನ 44 ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆ: ಭಾರತೀಯ ಭೂವಿಜ್ಞಾನ ವರದಿಯಲ್ಲೇನಿದೆ?
ಜಿಲ್ಲೆಯಲ್ಲಿ ಕಳೆದ ಒಂದು ವಾರಗಳ ಕಾಲ ಭಾರೀ ಮಳೆಯಾಗಿ ಹಲವೆಡೆ ಪ್ರವಾಹ ಎದುರಾಗಿದ್ದು ಗೊತ್ತೇ ಇದೆ. ಇದೀಗ ಪ್ರವಾಹದ ಜೊತೆಗೆ ಜಿಲ್ಲೆಯ 44 ಪ್ರದೇಶಗಳಲ್ಲಿ ಭೂಕುಸಿತವಾಗುತ್ತದೆ ಎಂದು ಭಾರತೀಯ ಭೂವಿಜ್ಞಾನ ಇಲಾಖೆ ಗುರುತ್ತಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜು.28): ಜಿಲ್ಲೆಯಲ್ಲಿ ಕಳೆದ ಒಂದು ವಾರಗಳ ಕಾಲ ಭಾರೀ ಮಳೆಯಾಗಿ ಹಲವೆಡೆ ಪ್ರವಾಹ ಎದುರಾಗಿದ್ದು ಗೊತ್ತೇ ಇದೆ. ಇದೀಗ ಪ್ರವಾಹದ ಜೊತೆಗೆ ಜಿಲ್ಲೆಯ 44 ಪ್ರದೇಶಗಳಲ್ಲಿ ಭೂಕುಸಿತವಾಗುತ್ತದೆ ಎಂದು ಭಾರತೀಯ ಭೂವಿಜ್ಞಾನ ಇಲಾಖೆ ಗುರುತ್ತಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿದೆ. ಇದು ಕೊಡಗು ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಹೌದು ಮಡಿಕೇರಿ, ವಿರಾಜಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಭೂಕುಸಿತವಾಗುತ್ತದೆ ಎಂದು 44 ಪ್ರದೇಶಗಳನ್ನು ಗುರುತ್ತಿಸಿದೆ. ಅದರಲ್ಲೂ ಮಡಿಕೇರಿ ತಾಲ್ಲೂಕಿನಲ್ಲೇ ಹೆಚ್ಚು ಭೂಕುಸಿತವಾಗುವ ಪ್ರದೇಶಗಳನ್ನು ಗುರುತ್ತಿಸಿದೆ.
ಮಡಿಕೇರಿ ತಾಲ್ಲೂಕಿನ ಮದೆನಾಡು, ಮೊಣ್ಣಂಗೇರಿ, ಮುಕ್ಕೋಡ್ಲು, ಗಾಳಿಬೀಡು, ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ, ಮಾದಾಪುರ, ತಾಕೇರಿ, ಹಟ್ಟಿಹೊಳೆ, ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಹಾಗೂ ವಿರಾಜಪೇಟೆ ತಾಲ್ಲೂಕಿನ ತೋರಾ ಸೇರಿದಂತೆ ಒಟ್ಟು 44 ಪ್ರದೇಶಗಳಲ್ಲಿ ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ವರದಿ ನೀಡಿದೆ. 2018 ರಲ್ಲೂ ಇದೇ ರೀತಿ ಭೂಕುಸಿತವಾಗುತ್ತದೆ ಎಂದು ಭಾರತೀಯ ಭೂವಿಜ್ನಾನ ಇಲಾಖೆ ವರದಿ ನೀಡಿತ್ತು. ಇದೀಗ ಮತ್ತೆ ಇಂತಹದ್ದೇ ವರದಿ ನೀಡಿರುವುದು ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಈ ಪ್ರದೇಶಗಳಲ್ಲಿ ಭೂಕುಸಿತವಾಗುತ್ತದೆ ಎಂದು ಸ್ಯಾಟಲೈಟ್ ಸರ್ವೆ ಮಾಡಿ ವರದಿ ನೀಡಿರುವ ಇಲಾಖೆ, ಜೊತೆಗೆ ಭೂಕುಸಿತ ತಡೆಗಟ್ಟಲು ಪರಿಹಾರ ಕ್ರಮಗಳನ್ನು ಸೂಚಿಸಿದೆ.
ಉತ್ತರ ಕನ್ನಡ: ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಬ್ಯಾನ್
ಪರಿಹಾರ ಕ್ರಮಗಳನ್ನು ಸೂಚಿಸಿರುವುದಾದರೂ ಅವುಗಳು ಈ ಮಳೆಗಾಲಕ್ಕೆ ಉಪಯೋಗಕ್ಕೆ ಬರುವುದಿಲ್ಲ ಎನ್ನುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಭೂಕುಸಿತವಾಗುವ 44 ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ, ಮರಗಿಡಗಳ ಬೆಳೆಸುವುದು, ಕೆಲವು ಮಾದರಿಯ ಹುಲ್ಲುಗಳನ್ನು ಬೆಳೆಸುವುದರಿಂದ ಭೂಕುಸಿತವಾಗುವುದನ್ನು ತಡೆಗಟ್ಟಬಹುದು ಎಂದು ಇಲಾಖೆ ಹೇಳಿದೆ. ಈ ಪರಿಹಾರೋಪಾಯಗಳನ್ನು ಕೂಡಲೇ ಕೈಗೊಳ್ಳುವುದಕ್ಕೆ ಸರ್ಕಾರವೂ ರೆಡಿ ಇದೆ. ಇದೇ 25 ರಂದು ಜಿಲ್ಲೆಗೆ ಬಂದಿದ್ದ ಕಂದಾಯ ಸಚಿವ ಕೃಷ್ಣಬೈರೇಗೌಡ ಜಿಲ್ಲಾಮಟ್ಟದ ಅಧಿಕಾರಿಳೊಂದಿಗೆ ಸಭೆ ನಡೆಸಿ ಭೂಕುಸಿತ ತಡೆಗಟ್ಟುವುದಕ್ಕೆ ಅಗತ್ಯವಿರುವ ಕ್ರಮಗಳಿಗಾಗಿ 20 ಕೋಟಿಯನ್ನು ಸರ್ಕಾರ ಕೊಡಲು ಸಿದ್ಧವಿದೆ.
ಅಧಿಕಾರಿಗಳು ಯೋಜನೆ ರೂಪಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದ್ದಾರೆ. ಆದರೆ ಸದ್ಯಕ್ಕೆ ಜಿಲ್ಲೆಯಲ್ಲಿ ಮಳೆಗಾಲ ಈಗಷ್ಟೇ ಶುರುವಾಗಿದ್ದು, ಇನ್ನೂ ಒಂದು ತಿಂಗಳ ಕಾಲ ಸಾಕಷ್ಟು ಮಳೆ ಸುರಿಯಲಿದೆ. 2018 ರಿಂದಲೂ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿಯುವ ಆಶ್ಲೇಷ ಮಳೆಯಿಂದಾಗಿಯೇ ಇದುವರೆಗೆ ಭೂಕುಸಿತ, ಪ್ರವಾಹ ಎದುರಾಗಿವೆ. ಹೀಗಾಗಿಯೇ ಭೂಕುಸಿತವಾಗುವ ಪ್ರದೇಶಗಳಲ್ಲಿ ಅದನ್ನು ತಡೆಗಟ್ಟಲು ಪರಿಹಾರೋಪಾಯಗಳನ್ನು ಸೂಚಿಸಿದ್ದರೂ ಅದು ಪ್ರಯೋಜನಕ್ಕೆ ಬಾರದೇ ಇರುವುದು ಆತಂಕವನ್ನು ಹೆಚ್ಚಿಸಿದೆ. ಆದ್ದರಿಂದ ಈ ಬಾರಿಯ ಮಳೆಗಾಲದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಪಾರಾಗಿ ಜನರು ನಿಟ್ಟುಸಿರು ಬಿಡಬೇಕಾದರೆ ಇನ್ನೂ ಒಂದು ತಿಂಗಳು ಜೀವವನ್ನು ಕೈಯಲ್ಲಿಡಿದು ಬದುಕಬೇಕಾಗಿದೆ.
ಟೊಮೆಟೋಗೆ ಚಿನ್ನದ ದರ: ಸಸಿಗಳಿಗೆ ಹೆಚ್ಚಿದ ಬೇಡಿಕೆ
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಭಾರತೀಯ ಭೂವಿಜ್ನಾನ ಇಲಾಖೆ ಅಧಿಕಾರಿಗಳು ಭೂಕುಸಿತ ಮತ್ತು ಪ್ರವಾಹ ಪ್ರದೇಶಗಳನ್ನು ಗುರುತ್ತಿಸಿದ್ದಾರೆ. ಅಂತಹ ಪ್ರದೇಶಗಳಲ್ಲಿ ಈಗಾಗಲೇ ನಾವು ಜನರಿಗೆ ಜಾಗೃತಿ ಮತ್ತು ಧೈರ್ಯ ಮೂಡಿಸುವ ಕೆಲಸ ಮಾಡಿದ್ದೇವೆ. ಜೊತೆಗೆ ಒಂದು ವೇಳೆ ಭೂಕುಸಿದಂತಹ ಘಟನೆಗಳು ನಡೆದರೆ, ಕೂಡಲೇ ಜನರನ್ನು ರಕ್ಷಿಸಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ. ಇನ್ನು ಕೆ.ನಿಡುಗಣೆ ಗ್ರಾಮದವರಾದ ಎಂ.ಬಿ. ದೇವಯ್ಯ ಅವರು 2018 ರಿಂದ ನಾವು ಈ ಸ್ಥಿತಿಯನ್ನು ಅನುಭವಿಸಿದ್ದೇವೆ. ಭಾರತೀಯ ಭೂವಿಜ್ನಾನ ಅಧಿಕಾರಿಗಳು ನೀಡಿರುವ ವರದಿ ಆಧಾರದಲ್ಲಿ ಜನರನ್ನು ರಕ್ಷಿಸಲು ಸರ್ಕಾರ ಮುಂದಾಗಲಿ ಎಂದಿದ್ದಾರೆ.