ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗುವ ಬಾಲ ಕಾರ್ಮಿಕ ಅನಿಷ್ಠ ಪದ್ಧತಿ ಮುಂದುವರೆಸಲು ಯತ್ನಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಜೂ.13) : ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗುವ ಬಾಲ ಕಾರ್ಮಿಕ ಅನಿಷ್ಠ ಪದ್ಧತಿ ಮುಂದುವರೆಸಲು ಯತ್ನಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಅವರು ಸೋಮವಾರ ‘ಬಾಲ ಕಾರ್ಮಿಕ ವಿರೋಧಿ ದಿನಾಚರಣೆ’ ನಿಮಿತ್ತ ಎಂ.ಜಿ.ರಸ್ತೆಯ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣವೇ ಇಲ್ಲದಿದ್ದರೆ ಬದುಕುವ ದಾರಿ ಇರುವುದಿಲ್ಲ. ರಾಜ್ಯದ 7 ಕೋಟಿ ಜನ ಸೇರಿ ದೇಶದ 142 ಕೋಟಿ ಜನರು ಶಿಕ್ಷಣ ಪಡೆಯಬೇಕು. ಎಲ್ಲರೂ ಉದ್ಯೋಗ ಪಡೆದು ಮನುಷ್ಯರಾಗಿ ಬದುಕುವ ವಾತಾವರಣ ಇರ ಬೇಕು. ಭಾರತ ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿ ರಾಷ್ಟ್ರ ಎನ್ನಿಸಿಕೊಳ್ಳಬೇಕಾದರೆ ಸಾಕ್ಷರತೆ ಅಗತ್ಯ. ಶಿಕ್ಷಣಕ್ಕೆ ಅಡ್ಡಿಯಾಗುವ ಬಾಲಕಾರ್ಮಿಕ ಅನಿಷ್ಠ ಪದ್ಧತಿ ನಿಲ್ಲಬೇಕಿದೆ. ಗ್ಯಾರೇಜ್‌, ಪೆಟ್ರೋಲ್‌ ಬಂಕ್‌, ಅಂಗಡಿ ಮುಂಗಟ್ಟು ಹಾಗೂ ಹೋಟೆಲ್‌ಗಳ ಮಾಲೀಕರು ಸಣ್ಣ ಮಕ್ಕಳನ್ನು ಯಾವುದೇ ಕಾರಣಕ್ಕೂ ಕೆಲಸಕ್ಕೆ ನಿಯೋಜಿಸಿಕೊಳ್ಳಬಾರದು ಎಂದರು.

Child labour: ಬಾಲ ಕಾರ್ಮಿಕ ಪದ್ಧತಿಗಿಲ್ಲ ಕೊನೆ: 2 ವರ್ಷದಲ್ಲಿ 39 ಮಕ್ಕಳ ರಕ್ಷಣೆ

ಇದಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾತ್ರವಲ್ಲದೆ, ಕಠಿಣ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಪೋಷಕರು, ಮಾತ್ರವಲ್ಲದೆ ಉದ್ಯಮ ನಡೆಸುವವರೂ ಈ ಬಗ್ಗೆ ಜಾಗೃತರಾಗಬೇಕು. ಸಂವಿಧಾನ ಶಿಕ್ಷಣ ಮೂಲಭೂತ ಹಕ್ಕು ಎಂದು ಹೇಳುತ್ತದೆ. ಮಕ್ಕಳು ಕಲಿಯುವ ವಯಸ್ಸಿನಲ್ಲಿ ದುಡಿಮೆ ಮಾಡಿದರೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ. ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವವರ ವಿರುದ್ಧ ನಿರ್ದಾ ಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಬಾಲ ಕಾರ್ಮಿಕ ಪದ್ಧತಿ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ಜನತೆ ಎಲ್ಲಾದರೂ ಬಾಲ ಕಾರ್ಮಿಕರನ್ನು ಕಂಡರೆ ಸ್ವಯಂ ದೂರು ನೀಡಬೇಕು. ಉಚಿತ ದೂರವಾಣಿ 1098 ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರ ಒಳಿತಿಗಾಗಿ ಇಲಾಖೆ ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ ಎಂದು ಹೇಳಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸೋಣ: ಬಿ.ಪಿ ದೇವಮಾನೆ

ಜಾಗೃತಿ ಜಾಥಾ

ಈ ವೇಳೆ ಮಹಾತ್ಮ ಗಾಂಧಿ ಪ್ರತಿಮೆ ಬಳಿಯಿಂದ ಆರಂಭವಾದ ಜಾಗೃತಿ ಜಾಥಾ ಕಬ್ಬನ್‌ ಪಾರ್ಕ್, ವಿಧಾನ ಸೌಧ ಮೂಲಕ ಕೆ.ಆರ್‌.ವೃತ್ತಕ್ಕೆ ತೆರಳಿ ಸಮಾಪ್ತಿಗೊಂಡಿತು. ಜಾಥಾದಲ್ಲಿ ಸ್ಕೌಟ್ಸ್‌ ಆ್ಯಂಡ್‌ ಗೈಡ್‌್ಸ, ಎನ್‌ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.