ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದು ಮೂಲ ಕರ್ನಾಟಕ ಎಪಿಎಂಸಿ ಕಾಯ್ದೆಯ ಎಲ್ಲ ಆಶಯಗಳನ್ನು ಹೊಂದಿರುವ ಸುಧಾರಿತ ಎಪಿಎಂಸಿ ಮಸೂ​ದೆಯನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗುವುದು ಎಂದ ಎಚ್‌.ಕೆ. ಪಾಟೀಲ್‌ ಹಾಗೂ ಶಿವಾನಂದ ಪಾಟೀಲ 

ಬೆಂಗಳೂರು(ಜೂ.15):  ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ಎಪಿಎಂಸಿ ಕಾಯ್ದೆಯ ಬದಲಾಗಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದು ಮೂಲ ಕಾಯ್ದೆಯನ್ನು ಮತ್ತಷ್ಟು ಸುಧಾರಣೆಗಳೊಂದಿಗೆ ಮರು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಜು. 3ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸದರಿ ಸುಧಾರಿತ ಎಪಿಎಂಸಿ ಮದೂ​ದೆ ಮಂಡಿಸಲು ತೀರ್ಮಾನಿಸಿದೆ.

ಹಾಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡಿ ಮೂಲ ಎಪಿಎಂಸಿ ಕಾಯ್ದೆಯ ಸುಧಾರಿತ ಸ್ವರೂಪದಲ್ಲಿ ಜಾರಿಗೊಳಿಸುವ ಸಂಬಂಧ ಜವಳಿ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಬುಧವಾರ ಉನ್ನತ ಮಟ್ಟದ ಸಭೆ ನಡೆ​ಸಿ​ದರು. ಈ ಸಭೆಯಲ್ಲಿ ಸುಧಾರಿತ ಕಾಯ್ದೆ ಜಾರಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ಗೋಹತ್ಯೆ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಇಲ್ಲ: ಸಚಿವ ಎಚ್‌.ಕೆ.ಪಾಟೀಲ್‌

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌.ಕೆ. ಪಾಟೀಲ್‌ ಹಾಗೂ ಶಿವಾನಂದ ಪಾಟೀಲ ಅವರು, ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದು ಮೂಲ ಕರ್ನಾಟಕ ಎಪಿಎಂಸಿ ಕಾಯ್ದೆಯ ಎಲ್ಲ ಆಶಯಗಳನ್ನು ಹೊಂದಿರುವ ಸುಧಾರಿತ ಎಪಿಎಂಸಿ ಮಸೂ​ದೆಯನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗುವುದು ಎಂದರು.

ಬಿಜೆಪಿ ತಂದಿ​ದ್ದ ಎಪಿ​ಎಂಸಿ ಕಾಯ್ದೆ ರದ್ದು ಏಕೆ?:

ರಾಜ್ಯದ ಮೂಲ ಎಪಿಎಂಸಿ ಕಾಯ್ದೆಯು ಅತ್ಯಂತ ಸಶಕ್ತ ಹಾಗೂ ದೇಶಕ್ಕೆ ಮಾದರಿಯಾಗಿತ್ತು. ಆದರೆ, ತಿದ್ದುಪಡಿ ಮೂಲಕ ಕಾಯ್ದೆಯನ್ನು ನಿಸ್ಸತ್ವಗೊಳಿಸಲಾಯಿತು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರೈತರು ಹಾಗೂ ಸಂಘಟನೆಗಳು ಹೋರಾಟ ನಡೆಸಿದ ವೇಳೆ ಇತರ ಕಾಯ್ದೆ ಹಿಂಪಡೆದರೂ ಎಂಪಿಎಂಸಿ ಕಾಯ್ದೆಯನ್ನು ಬಿಜೆಪಿ ಸರ್ಕಾರ ಮುಂದುವರೆಸಿತ್ತು.

ಕಾಂಗ್ರೆಸ್‌ನಿಂದ ಮಾತ್ರ ಸಂವಿಧಾನ ರಕ್ಷಣೆ: ಶಾಸಕ ಎಚ್‌.ಕೆ.ಪಾಟೀಲ್

ಬಿಜೆಪಿ ಜಾರಿಗೊಳಿಸಿದ್ದ ತಿದ್ದುಪಡಿ ಕಾಯ್ದೆಯಿಂದ ಎಂಪಿಎಂಸಿ ಚೌಕಟ್ಟಿನಲ್ಲಿ ನಡೆಯಬೇಕಿದ್ದ ಉತ್ಪನ್ನ ಮಾರಾಟ ವ್ಯವಸ್ಥೆಯು ಮುಕ್ತಗೊಂಡಿತ್ತು. ಆದರೆ, ಅದರಿಂದ ವ್ಯಾಪಾರಿಗಳಿಗೆ ಅನುಕೂಲವಾಗಲಿಲ್ಲ. ಅಲ್ಲದೆ, ದೊಡ್ಡ ಸಂಖ್ಯೆಯಲ್ಲಿದ್ದ ಹಮಾಲಿ ಹಾಗೂ ತಳವಾರರು ಸಂಕಷ್ಟಕ್ಕೆ ಸಿಲುಕಿದರು. ಹಾಗಂತ ರೈತರ ಉತ್ಪನ್ನಗಳಿಗೆ ಹೆಚ್ಚಿನ ದರವೇನೂ ಸಿಗಲಿಲ್ಲ. ತಿದ್ದುಪಡಿಯಿಂದ ರೈತರ ಉತ್ಪನ್ನಗಳಿಗೆ ದ್ವಿಗುಣ ಆದಾಯ ಬರುತ್ತದೆ ಎಂಬುದು ಹುಸಿ ಆಯಿತು. ಇನ್ನು ತಿದ್ದುಪಡಿ ಕಾಯ್ದೆಗೂ ಮುನ್ನ ವಾರ್ಷಿಕ 650 ರಿಂದ 680 ಕೋಟಿ ರು. ಆದಾಯ ಗಳಿಸುತ್ತಿದ್ದ ಎಂಪಿಎಂಸಿಗಳ ಗಳಿಕೆ ತಿದ್ದುಪಡಿ ಕಾಯ್ದೆಯ ನಂತರ 200 ಕೋಟಿಗೆ ಇಳಿಕೆ ಕಂಡಿದೆ. ಹೀಗೆ ಇಡೀ ಕೃಷಿ ರಂಗಕ್ಕೆ ಮಾರಕವಾಗಿರುವ ಈ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂಬುದು ರೈತ ಸಮೂಹದ ಆಗ್ರವೂ ಆಗಿದ್ದು, ಇದಕ್ಕೆ ಪೂರಕವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಹೊಸ ಕಾಯ್ದೆ ಬಗ್ಗೆ 21ಕ್ಕೆ ಸಭೆ:

ನೂತನ ಸುಧಾರಿತ ಎಪಿಎಂಸಿ ಕಾಯ್ದೆ ಜಾರಿಗಾಗಿ ಬುಧವಾರ ನಡೆದ ಸಭೆಯೂ ಸೇರಿದಂತೆ ಇದುವರೆಗೂ ಎರಡು ಸಭೆ ನಡೆಸಲಾಗಿದೆ. ಕೆಲ ವಿಚಾರಗಳ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜೂ. 21ರಂದು ತಜ್ಞರೊಂದಿಗೆ ಸಭೆ ನಡೆಸಿ ಕಾಯ್ದೆ ಅಂತಿಮಗೊ​ಳಿಸಿ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು. ನೂತನ ಸುಧಾರಿತ ಎಪಿಎಂಸಿ ಕಾಯ್ದೆಯು ಹಾಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಖಾಸಗಿ ಮಾರುಕಟ್ಟೆಗಳನ್ನು ಒಳಗೊಂಡು ರೈತರ ಹಿತ ಕಾಯುವ ಅಂಶಗಳನ್ನು ಹೊಂದಿರುತ್ತದೆ ಎಂದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.