Asianet Suvarna News Asianet Suvarna News

ಕೊರೋನಾ ಸಾವಿನ ಸರಿಯಾದ ಲೆಕ್ಕಕೊಡದಿದ್ದರೆ ತನಿಖೆ

  •  ಕೊರೋನಾದಿಂದ ಉಂಟಾದ ಸಾವಿನ ಲೆಕ್ಕವನ್ನು ರಾಜ್ಯ ಸರ್ಕಾರ ಸರಿಯಾಗಿ ನೀಡಿಲ್ಲ
  • ಸರಿಯಾದ ಮಾಹಿತಿ ದೊರೆಯಲಿಲ್ಲ ಎಂದರೆ ತನಿಖೆ ನಡೆಸುತ್ತೇವೆ
death toll from Corona has not been properly reported   says Ramalinga reddy snr
Author
Bengaluru, First Published Sep 12, 2021, 8:10 AM IST

 ಬೆಂಗಳೂರು (ಸೆ.12):  ಕೊರೋನಾದಿಂದ ಉಂಟಾದ ಸಾವಿನ ಲೆಕ್ಕವನ್ನು ರಾಜ್ಯ ಸರ್ಕಾರ ಸರಿಯಾಗಿ ನೀಡಿಲ್ಲ. ಈ ಬಗ್ಗೆ ಸರಿಯಾದ ಲೆಕ್ಕ ನೀಡುವಂತೆ ಸರ್ಕಾರವನ್ನು ಕೇಳಿದ್ದೇವೆ. ಸರಿಯಾದ ಮಾಹಿತಿ ದೊರೆಯಲಿಲ್ಲ ಎಂದರೆ ತನಿಖೆ ನಡೆಸುತ್ತೇವೆ ಎಂದು ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಯ ಅಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದರು.

ಕೋವಿಡ್‌ನಿಂದ ಕೇವಲ 50 ಸಾವಿರ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಆದರೆ ಸುಮಾರು 3 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿವೆ. ಸಾವಿನ ಲೆಕ್ಕದಲ್ಲಿ ಭಾರೀ ಅಂತರ ಇರುವುದರಿಂದ ಅನುಮಾನ ವ್ಯಕ್ತವಾಗುತ್ತಿದೆ. ಆರೋಗ್ಯ ಇಲಾಖೆ ಸಮರ್ಪಕ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಡೆತ್‌ ಆಡಿಟ್‌ ನಡೆದರೆ ಎಲ್ಲವೂ ಬಹಿರಂಗವಾಗಲಿದೆ ಎಂದು ಹೇಳಿದರು.

ಶೇ.100 ರಷ್ಟು ವ್ಯಾಕ್ಸಿನ್‌ ಹಾಕಿಸಿದರೆ 1 ಲಕ್ಷ ಬಹುಮಾನ

ಸಾವಿನ ಬಗ್ಗೆ ಸರ್ಕಾರ ಸರಿಯಾದ ಮಾಹಿತಿ ನೀಡಿಲ್ಲ. ಡೆತ್‌ ಆಡಿಟ್‌ ನಡೆಯಬೇಕು ಎಂದು ಸದಸ್ಯ ಈಶ್ವರ ಖಂಡ್ರೆ ಪ್ರಸ್ತಾಪ ಮಾಡಿದರು. ಕೊರೋನಾ 2ನೇ ಮತ್ತು 3ನೇ ಅಲೆಯ ಬಗ್ಗೆಯೂ ಪ್ರಸ್ತಾಪವಾಯಿತು. ಮುಂದಿನ ವಾರ ಅಥವಾ 15 ದಿನಗಳ ನಂತರ ಮತ್ತೆ ಸಭೆ ನಡೆಯಲಿದೆ. ಅಷ್ಟರೊಳಗೆ ಸಾವಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಸುಳ್ಳು ಲೆಕ್ಕ-ಕಳ್ಳ ಲೆಕ್ಕ: ಸಮಿತಿಯ ಸದಸ್ಯರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಒಂದೊಂದು ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 500 ರಿಂದ 600 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ, ಸರ್ಕಾರದ ದಾಖಲೆಯಲ್ಲಿ 150ರಿಂದ 200 ಎಂದಿದೆ. ಮನೆ, ಬೇರೆ ರಾಜ್ಯಗಳ ದೊಡ್ಡ ಆಸ್ಪತ್ರೆಗಳಲ್ಲಿ ಮೃತಪಟ್ಟವರ ಸಂಖ್ಯೆ ಪರಿಗಣಿಸಿಲ್ಲ. ಕೇವಲ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರ ಸುಳ್ಳು ಲೆಕ್ಕ ಕೊಟ್ಟಿದ್ದಾರೆ. ಇದು ಕಳ್ಳ ಲೆಕ್ಕವಾಗಿದೆ. ಆದ್ದರಿಂದ ದಾಖಲೆ ನೀಡುವಂತೆ ಸಮಿತಿಯಿಂದ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಸೋಂಕಿತರಿಗೆ ಕಳಪೆ ಔಷಧಿಗಳನ್ನು ನೀಡಲಾಗಿದೆ. ಹೀಗೆ ಮಾಡಿದ 16 ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕಿತ್ತು. ಆದರೆ ಕೇವಲ 2 ಎರಡು ಕಂಪನಿ ಮಾತ್ರ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಎಲ್ಲರ ವಿರುದ್ಧವೂ ಕ್ರಮ ಕೈಗೊಂಡು ನಷ್ಟವಸೂಲು ಮಾಡಬೇಕು ಎಂದು ಆಗ್ರಹಿಸಿದರು.

ಕೋವಿಡ್‌ 2ನೇ ಅಲೆಯ ನಂತರ ವಿಧಾನಸಭೆ ಸಮಿತಿಗಳ ಸಭೆಯನ್ನು ನಡೆಸಿರಲಿಲ್ಲ. ಇದೀಗ ಕೊರೋನಾ ತಹಬದಿಗೆ ಬಂದಿರುವ ಹಿನ್ನೆಲೆಯಲ್ಲಿ ಸಮಿತಿ ಸಭೆ ನಡೆಸಲಾಗಿದೆ. ವಿಧಾನ ಸಭೆ ಮಾಜಿ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌, ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಎನ್‌.ರವಿಕುಮಾರ್‌, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಖರೀದಿಯಲ್ಲಿ ಗೋಲ್‌ಮಾಲ್‌ ಆರೋಪ 

ಅನಗತ್ಯವಾಗಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ನಿರ್ಮಾಣ ಮಾಡಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಬರೋಬ್ಬರಿ 3 ಕೋಟಿ ರು. ಮೌಲ್ಯದ ವಸ್ತುಗಳನ್ನು ಕೊಂಡುಕೊಳ್ಳಲಾಗಿದೆ. ಇಷ್ಟುವೆಚ್ಚ ಮಾಡುವ ಅವಶ್ಯಕತೆ ಇರಲಿಲ್ಲ. ಇಷ್ಟೂಸಾಲದು ಎಂಬಂತೆ ಕಳಪೆ ಗುಣಮಟ್ಟದ ಔಷಧಿ ಖರೀದಿ ಮಾಡಲಾಗಿದೆ ಎಂದು ಕಾಂಗ್ರೆಸ್‌ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಮಹಾಲೆಕ್ಕ ಪರಿಶೋಧಕರ ಆಕ್ಷೇಪಣೆಗಳ ಬಗ್ಗೆಯೂ ಮಹತ್ವದ ಚರ್ಚೆ ನಡೆದಿದೆ. ಇದೆಲ್ಲದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ವರದಿ ನೀಡುವುದಾಗಿ ಅಪರ ಮುಖ್ಯ ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios