Asianet Suvarna News Asianet Suvarna News

ಮಳೆ ಹಾನಿ ಪ್ರದೇಶಗಳಲ್ಲಿ ಡಿ.ಕೆ.ಶಿವಕುಮಾರ್‌ ರೌಂಡ್ಸ್‌: ಬೇಜವಾಬ್ದಾರಿ ಅಧಿಕಾರಿಗಳಿಗೆ ಎಚ್ಚರಿಕೆ

ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅವರು, ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿದ್ದು, ಮಳೆಗಾಲದಲ್ಲಿ ಹಾನಿಯಾಗುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. 

DCM DK Shivakumar Rounds in Rain Damaged Areas at Bengaluru gvd
Author
First Published Jun 9, 2023, 6:43 AM IST

ಬೆಂಗಳೂರು (ಜೂ.09): ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅವರು, ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿದ್ದು, ಮಳೆಗಾಲದಲ್ಲಿ ಹಾನಿಯಾಗುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೆಯೇ ಒತ್ತುವರಿದಾರರು ಮತ್ತು ಕೆಲ ಬೇಜವಾಬ್ದಾರಿ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ. ಗುರುವಾರ ಬೆಳಗ್ಗೆ ಬಿಡಿಎ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸಚಿವ ಡಿ.ಕೆ.ಶಿವಕುಮಾರ್‌, ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಬೆಂಗಳೂರು ನಗರ ಪ್ರದಕ್ಷಿಣೆ ಹೊರಟರು. 

ಅವರೊಂದಿಗೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌, ಬಿಡಿಎ ಆಯುಕ್ತ ಕುಮಾರನಾಯಕ್‌, ಬಿಬಿಎಂಪಿ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಸೇರಿದಂತೆ ಬಿಡಿಎ ಮತ್ತು ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು. ಕಳೆದ ಬಾರಿ ಮಳೆಯಿಂದ ಹಾನಿಗೊಳಗಾಗಿದ್ದ ಪ್ರದೇಶಗಳಾದ ಮಹದೇವಪುರ ವ್ಯಾಪ್ತಿಯ ಯಮಲೂರು ಕೆರೆ, ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆ ಸೇರಿದಂತೆ ಬೆಂಗಳೂರಿನ ನಾನಾ ಭಾಗಗಳಲ್ಲಿ ರಾಜಕಾಲುವೆ, ಕೆರೆಗಳ ತ್ಯಾಜ್ಯ ತಡೆಗೋಡೆ, ಒಳಚರಂಡಿ ಸ್ಥಿತಿಗತಿ ಪರಿಶೀಲನೆ ನಡೆಸಿದರು.

ರಾಜ್ಯದ ಡ್ಯಾಂಗಳು ಖಾಲಿ: 10 ಜಲಾಶಯಗಳಲ್ಲಿ ನೀರು ಬರಿದು!

ಒತ್ತುವರಿ ತೆರವಿಗೆ ಸೂಚನೆ: ಯಮಲೂರಿನ ದಿವ್ಯಶ್ರೀ ಅಪಾರ್ಟ್‌ಮೆಂಟ್‌ ಸಮೀಪ ರಾಜಕಾಲುವೆ ಒತ್ತುವರಿ ಆಗಿರುವುದನ್ನು ಕಂಡ ಸಚಿವರು, ಅಧಿಕಾರಿಗಳ ವಿರುದ್ಧ ಗರಂ ಆದರು. 12 ಮೀಟರ್‌ ಇರುವ ರಾಜಕಾಲುವೆ 7 ಮೀಟರ್‌ ಕಡಿಮೆ ಮಾಡಲಾಗಿದೆ. ನಿಮ್ಮ ಅನುಕೂಲಕ್ಕೆ ರಾಜಕಾಲುವೆ ಜಾಗ ಚಿಕ್ಕದು ಮಾಡುವುದಕ್ಕೆ ಆಗುವುದಿಲ್ಲ. ಕೂಡಲೇ ಒತ್ತುವರಿ ತೆರವುಗೊಳಿಸಿ ಕಚ್ಚಾ ಕಾಲುವೆ ನಿರ್ಮಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೆಳ್ಳಂದೂರು ಕೆರೆ ತ್ಯಾಜ್ಯ ಗೇಟ್‌ ಸರಿ ಇಲ್ಲ, ದೂರು: ಬೆಳ್ಳಂದೂರು ಕೆರೆ ಪ್ರದೇಶಕ್ಕೆ ಸಚಿವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಲೂಯಿಸ್‌ ಗೇಟ್‌ (ತ್ಯಾಜ್ಯ ತಡೆಯುವ ಗೇಟ್‌) ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಇದನ್ನು ಕಂಡ ಸಚಿವರು, ಮಳೆಗಾಲ ಆರಂಭವಾಗುತ್ತಿದೆ. ಇಷ್ಟುಹೊತ್ತಿಗೆ ಇದೆಲ್ಲವನ್ನೂ ಸಿದ್ಧಪಡಿಸಿಕೊಳ್ಳಬೇಕಿತ್ತು. ತುರ್ತು ಸಂದರ್ಭದಲ್ಲಿ ಇದನ್ನು ಹೇಗೆ ನಿಭಾಯಿಸುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಆದಷ್ಟುಬೇಗ ಸ್ಲೂಯಿಸ್‌ ಗೇಟ್‌ ಸರಿಪಡಿಸುವಂತೆ ಸೂಚಿಸಿದರು.

ಕಳೆದ ವರ್ಷ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಿಸಿದ್ದ ವರ್ತೂರಿನ ದೊಡ್ಡಕನ್ನಹಳ್ಳಿಯ ರೈನ್‌ಬೋ ಡ್ರೈವ್‌ ಅಪಾರ್ಟ್‌ಮೆಂಟ್‌ ಎದುರಿನ ರಾಜಕಾಲುವೆ, ವರ್ತೂರು ಕೆರೆಕೋಡಿ ಬಳಿಯ ಸ್ಥಿತಿಗತಿ ಪರಿಶೀಲಿಸಿದರು. ಸ್ಥಳೀಯ ನಾಗರಿಕರು ಮಳೆಗಾಲದಲ್ಲಿ ಸೃಷ್ಟಿಯಾಗುವ ಅವಾಂತರದ ಕುರಿತು ಸಚಿವರಿಗೆ ದೂರು ನೀಡಿದರು.

ರಾಜಕಾಲುವೆ ಒತ್ತುವರಿ ತೆರವು ಖಚಿತ: ಖಾಸಗಿ ಬಿಲ್ಡರ್‌ಗಳು, ಡೆವಲಪರ್‌ಗಳು ಮಾಡಿಕೊಂಡಿರುವ ರಾಜಕಾಲುವೆ ಒತ್ತುವರಿ ತೆರವುಗೊಳಿಸದಂತೆ ಎಷ್ಟೇ ಒತ್ತಡ ತಂದರೂ ನಮಗಿರುವ ಕಾನೂನು ಬಳಸಿಕೊಂಡು ತೆರವುಗೊಳಿಸದೇ ಬಿಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದರು. ಗುರುವಾರ ಬೆಂಗಳೂರು ನಗರ ಪ್ರದಕ್ಷಿಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಬೆಂಗಳೂರು ನಗರ ಪಾಲಿಕೆ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಆಗಿದ್ದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಲ್ಲಿನ ಸಮಸ್ಯೆ ಅರಿತಿದ್ದೇನೆ. ಖಾಸಗಿಯವರ ರಾಜಕಾಲುವೆ ಒತ್ತುವರಿಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಬಿಲ್ಡರ್‌ಗಳು, ಡೆವಲಪರ್‌ಗಳು ಮಾಡಿಕೊಂಡಿರುವ ಒತ್ತುವರಿಗೆ ತೆರವಿಗೆ ಸ್ವಯಂ ಪ್ರೇರಿತವಾಗಿ ಅವಕಾಶ ಮಾಡಿಕೊಡಬೇಕೆಂದರು.

ಬೆಂಗಳೂರಿನಲ್ಲಿ ನೀರು ಬಳಕೆ ಶುಲ್ಕ ಶೀಘ್ರ ಏರಿಕೆ?: ಡಿ.ಕೆ.ಶಿವಕುಮಾರ್‌

ಕೆಲವು ಒತ್ತುವರಿದಾರರು ನ್ಯಾಯಾಲಯ, ಕಾನೂನು ಹೋರಾಟದ ಮೂಲಕ ಒತ್ತುವರಿ ತೆರವು ಕಾಮಗಾರಿ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ. ಅಂತಹ ಬಿಲ್ಡರ್‌ಗಳು ತಾವೇ ಅರಿತು ರಾಜಕಾಲುವೆ ತೆರವಿಗೆ ಸಹಕಾರ ನೀಡಿದರೆ ಒಳ್ಳೆಯದು. ಇಲ್ಲದಿದ್ದರೆ ನಮ್ಮ ಬಳಿ ಬೇರೆ ರೀತಿಯ ಕಾನೂನು ಅವಕಾಶಗಳಿದ್ದು, ಅವುಗಳನ್ನು ಬಳಸಬೇಕಾಗುತ್ತದೆ. ನಿಮ್ಮ ಕೆಲಸದಿಂದ ಮೇಲ್ಸೇತುವೆ, ರಾಜಕಾಲುವೆ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸುವಂತಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

Follow Us:
Download App:
  • android
  • ios