ಬೆಂಗಳೂರಿನಲ್ಲಿ ನೀರು ಬಳಕೆ ಶುಲ್ಕ ಶೀಘ್ರ ಏರಿಕೆ?: ಡಿ.ಕೆ.ಶಿವಕುಮಾರ್
ನಗರದಲ್ಲಿ ನೀರು ಬಳಕೆ ಶುಲ್ಕ ಏರಿಕೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದು, ಶೀಘ್ರದಲ್ಲಿ ಈ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು (ಜೂ.07): ನಗರದಲ್ಲಿ ನೀರು ಬಳಕೆ ಶುಲ್ಕ ಏರಿಕೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದು, ಶೀಘ್ರದಲ್ಲಿ ಈ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರು ಜಲಮಂಡಳಿ ಅಧಿಕಾರಿಗಳೊಂದಿಗೆ ಮಂಗಳವಾರ ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ಬೆಂಗಳೂರು ಜಲಮಂಡಳಿಯ ಸ್ಥಿತಿ ಚಿಂತಾಜನಕವಾಗಿದೆ. 2014ರಿಂದ ಈವರೆಗೆ ನೀರು ಬಳಕೆ ಶುಲ್ಕ ಹೆಚ್ಚಳ ಮಾಡಿಲ್ಲ. ಹೀಗಾಗಿ ಜಲಮಂಡಳಿ ಆದಾಯ ತೀರಾ ಕಡಿಮೆಯಿದ್ದು, ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಹೀಗಾಗಿ ನೀರಿನ ಶುಲ್ಕ ಹೆಚ್ಚಳ ಸೇರಿ ಜಲಮಂಡಳಿಯನ್ನು ಆರ್ಥಿಕವಾಗಿ ಸಬಲಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಜಲಮಂಡಳಿ ಬಳಿ ಸಿಬ್ಬಂದಿ, ಅಧಿಕಾರಿಗಳಿಗೆ ವೇತನ ನೀಡಲೂ ಹಣವಿಲ್ಲದಂತಾಗಿದೆ. ಜಲಮಂಡಳಿ ಕಾರ್ಯದ ಬಗ್ಗೆ ಸೂಚನೆ ನೀಡಲು ಬಂದಿದ್ದ ನನಗೆ ಅವರ ಗೋಳು ಕೇಳುವಂತಾಯಿತು. ಬೆಸ್ಕಾಂನಿಂದ ರಿಯಾಯಿತಿ ದರದಲ್ಲಿ ಜಲಮಂಡಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಜಲಮಂಡಳಿಗೆ ವಾರ್ಷಿಕ 104 ಕೋಟಿ ಆದಾಯ ಬಂದರೆ 95 ಕೋಟಿ ವಿದ್ಯುತ್ ಬಿಲ್ ಪಾವತಿಗೇ ವ್ಯಯಿಸಬೇಕಾದ ಪರಿಸ್ಥಿತಿಯಿದೆ.
ವಿವಾದಿತ ಪಠ್ಯ ಕೈಬಿಡಲು ರಾಜ್ಯ ಸರ್ಕಾರ ನಿರ್ಧಾರ: ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಆದೇಶ
ಇದರಿಂದಾಗಿ ಬೃಹತ್ ಯೋಜನೆಗಳೆಲ್ಲವನ್ನೂ ಸಾಲ ಪಡೆದೇ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಕಾವೇರಿ 5ನೇ ಹಂತದ ಯೋಜನೆ ಚಾಲ್ತಿಯಲ್ಲಿದ್ದು, ಅದಕ್ಕೆ ವೇಗ ನೀಡುವಂತೆ ಸೂಚಿಸಿದ್ದೇನೆ. ಅನಧಿಕೃತ ನೀರಿನ ಸಂಪರ್ಕವನ್ನು ಶೇ.48ರಿಂದ ಶೇ.28ಕ್ಕೆ ಇಳಿಕೆ ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕೆಲವರು ನೀರು ಪುರೈಕೆ ಕೊಳವೆಗೆ ನೇರವಾಗಿ ಡ್ರಿಲ್ ಮಾಡಿ ನೀರನ್ನು ಕದಿಯುತ್ತಿರುವ ಬಗ್ಗೆ ದೂರುಗಳಿವೆ. ಹೀಗೆ ಅನಧಿಕೃತ ಸಂಪರ್ಕ ಪಡೆದ ಮತ್ತು ಜಲಮಂಡಳಿಗೆ ನಷ್ಟವನ್ನುಂಟು ಮಾಡುತ್ತಿರುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ.
ಸರ್ಕಾರಿ ವಕೀಲರ ನೇಮಕ ಹಗರಣ: ಇಲಾಖಾ ತನಿಖೆಗೆ ಸಿಎಂ ಸಿದ್ದು ನಿರ್ದೇಶನ
ಸದ್ಯ ಇರುವ ಹಳೇ ಕೊಳವೆಗಳನ್ನು ತೆಗೆದು ನೀರು ಪೋಲಾಗುವುದನ್ನು ತಡೆಯಲು ಯೋಜನೆ ರೂಪಿಸಬೇಕು ಎಂದು ಹೇಳಿದರು. ಕುಡಿಯುವ ನೀರಿನ ಕೊಳವೆಯೊಳಗೆ ಕೊಳಚೆ ನೀರು ಹರಿಯುತ್ತಿರುವುದರಿಂದ ಶುದ್ಧ ಕುಡಿಯುವ ನೀರು ಪೂರೈಕೆ ಕಷ್ಟವಾಗುತ್ತಿದೆ. ಹೀಗಾಗಿ ಕೆಲವು ಕಡೆಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿ, ನೀರಿನ ಗುಣಮಟ್ಟತಿಳಿಯುವಂತೆ ಹೇಳಿದ್ದೇನೆ. ಎಲ್ಲೆಲ್ಲಿ ಕಡಿಮೆ ಗುಣಮಟ್ಟದ ನೀರು ಪೂರೈಕೆಯಾಗುತ್ತಿದೆ ಎಂಬುದು ತಿಳಿದು, ಅಲ್ಲಿ ಶುದ್ಧ ನೀರು ಪೂರೈಕೆಗೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಂತರ ಚಿಂತನೆ ನಡೆಸಲಾಗುವುದು ಎಂದರು.