ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು; ಶಾಸಕರ ಘರ್ ವಾಪ್ಸಿ ಬಗ್ಗೆ ಸುಳಿವು ಕೊಟ್ರಾ ಡಿಕೆಶಿ?
ಪಕ್ಷ ಬಿಟ್ಟು ಹೋದವರು ವಾಪಸು ಬಂದರೆ ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ‘ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ‘ಪಕ್ಷದ ಮತ ಪ್ರಮಾಣ ಹೆಚ್ಚಿಸಿಕೊಳ್ಳಿ ಎಂದು ನಮ್ಮ ಕಾರ್ಯಕರ್ತರಿಗೆ ಸಂದೇಶ ನೀಡಿದ್ದೇವೆ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಬೇರೆ ಪಕ್ಷದ ಕಾರ್ಯಕರ್ತರ ಸೇರ್ಪಡೆ ಮಾಡಿಕೊಳ್ಳಲು ತಿಳಿಸಿದ್ದೇನೆ’ ಎಂದಿದ್ದಾರೆ.
ಬೆಂಗಳೂರು (ಆ.19) : ಪಕ್ಷ ಬಿಟ್ಟು ಹೋದವರು ವಾಪಸು ಬಂದರೆ ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ‘ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ‘ಪಕ್ಷದ ಮತ ಪ್ರಮಾಣ ಹೆಚ್ಚಿಸಿಕೊಳ್ಳಿ ಎಂದು ನಮ್ಮ ಕಾರ್ಯಕರ್ತರಿಗೆ ಸಂದೇಶ ನೀಡಿದ್ದೇವೆ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಬೇರೆ ಪಕ್ಷದ ಕಾರ್ಯಕರ್ತರ ಸೇರ್ಪಡೆ ಮಾಡಿಕೊಳ್ಳಲು ತಿಳಿಸಿದ್ದೇನೆ’ ಎಂದಿದ್ದಾರೆ.
- ತನ್ಮೂಲಕ ಪಕ್ಷ ಬಿಟ್ಟು ಹೋಗಿರುವವರ ಘರ್ ವಾಪಸಿಯ ಸುಳಿವು ನೀಡಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಪಕ್ಷದ ಮತ ಪ್ರಮಾಣ ಹೆಚ್ಚಿಸಿಕೊಳ್ಳಲು ಬೇರೆ ಪಕ್ಷದ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳಲು ತಿಳಿಸಿದ್ದೇನೆ. ಉಳಿದಂತೆ ಯಾವುದೇ ಪಕ್ಷದ ಶಾಸಕರ ಸೇರ್ಪಡೆ ನನ್ನವರೆಗೂ ಬಂದಿಲ್ಲ’ ಎಂದು ಹೇಳಿದರು.
Karnataka Politics: ಆಪರೇಶನ್ ಹಸ್ತ ಟಾಸ್ಕ್ ಯಾರಿಗೂ ಕೊಟ್ಟಿಲ್ಲ: ಎನ್.ಎಸ್.ಬೋಸರಾಜ್
ಎಲ್ಲರ ಜತೆಯೂ ವೈಯಕ್ತಿಕ ಸಂಬಂಧವಿದೆ:
ಜೆಡಿಎಸ್‌ನ 13 ಶಾಸಕರು ನಿಮ್ಮ ಸಂಪರ್ಕದಲ್ಲಿದ್ದಾರಂತೆ ಎಂಬ ಪ್ರಶ್ನೆಗೆ, ‘ಈ ವಿಚಾರ ನನಗೆ ಗೊತ್ತಿಲ್ಲ. ನಿಮ್ಮಿಂದಲೇ ಈಗ ಮಾಹಿತಿ ಕೇಳುತ್ತಿದ್ದೇನೆ. ನನಗೆ 224 ಶಾಸಕರು ಪರಿಚಯಸ್ಥರು. ಎಲ್ಲರ ಜತೆ ರಾಜಕೀಯವಾಗಿ ಅಲ್ಲದಿದ್ದರೂ ವೈಯಕ್ತಿಕ ಸಂಬಂಧ ಇದೆ. ಅವರ ಹೆಸರಿಗೆ ನಾವು ಯಾಕೆ ಧಕ್ಕೆ ತರೋಣ’ ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರು ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿ, ‘ತಾವು ರಾಜಕೀಯವಾಗಿ ಬದುಕಿದ್ದೇವೆ ಎಂದು ಸಾಬೀತುಪಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.
ಜನ ನಮಗೆ 135 ಸ್ಥಾನಗಳ ಸಂಖ್ಯಾಬಲ ನೀಡಿದ್ದಾರೆ. ನಾವು ಜನರಿಗೆ ಕೊಟ್ಟಮಾತು ಉಳಿಸಿಕೊಳ್ಳಬೇಕು. ನಮಗೆ ಬಂದಿರುವ ಬಹುಮತ ನೋಡಿ ಬಿಜೆಪಿ ಹಾಗೂ ದಳದವರಿಗೆ ನೆಮ್ಮದಿ ಇಲ್ಲ. ಅದಕ್ಕೆ ಅವರೇ ಔಷಧಿ ಕಂಡುಕೊಳ್ಳಬೇಕು. ನಮ್ಮ ವಿರುದ್ಧ ಪ್ರತಿಪಕ್ಷದಲ್ಲಿನ ಗೆದ್ದಿರುವವರು, ಸೋತಿರುವವರು ಇಬ್ಬರೂ ಮಾತನಾಡುತ್ತಿದ್ದಾರೆ. ಯಾರು ಏನು ಮಾತನಾಡುತ್ತಿದ್ದಾರೆ ಎಂದು ನಾವು ಗಮನಿಸುತ್ತಿದ್ದೇವೆ. ನಾವು ಯಾರ ಮಾತಿಗೂ ಬೀಗ ಹಾಕುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.
ಇನ್ನು ಬೇರೆ ಪಕ್ಷದ ಶಾಸಕರ ಜತೆ ನಾನು ಮಾತನಾಡಿದ್ದೇನೆ ಎಂಬುದು ಸಂಪೂರ್ಣ ಸುಳ್ಳು. ಬಿಜೆಪಿಯವರು ಯಾರ ಜತೆ ಮಾತನಾಡಿದ್ದಾರೆ ಎಂಬುದರ ಬಗ್ಗೆ ಮಾಧ್ಯಮಗಳು ಚರ್ಚೆ ಮಾಡುತ್ತಿಲ್ಲ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಬಿಜೆಪಿಯವರು ಭಾವಿಸಿದ್ದಾರೆ. ಅವರು ಕಲಿಸಿಕೊಟ್ಟಿರುವ ಪಾಠ ನಮಗೆ ನೆನಪಿದೆ’ ಎಂದರು.
ಮುಜರಾಯಿ ದೇಗುಲಗಳಿಗೆ ಹಣ ಬಿಡುಗಡೆಗೆ ಸರ್ಕಾರ ಅಸ್ತು; ಅನುದಾನಕ್ಕೆ ತಡೆ ನೀಡಿದ್ದ ಆದೇಶ ವಾಪಸ್
ಶೇ.40 ಕಮಿಷನ್ ವಿಚಾರ ತನಿಖೆಗೆ ನಾಗಮೋಹನ್‌ದಾಸ್ ಅವರ ನೇತೃತ್ವದ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಉತ್ತರ ನೀಡಲಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ತನಿಖೆಗೆ ಸಮಿತಿ ರಚನೆ ಮಾಡಿದ್ದು, ಅವರು ತನಿಖೆ ಮಾಡುತ್ತಿದ್ದಾರೆ ಎಂದಷ್ಟೇ ಹೇಳಿದರು.