ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಅವರ ಪರ ವಕೀಲರು ಪ್ರಕರಣದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಬಲವಾಗಿ ವಾದಿಸಿದರು. ಸಂತ್ರಸ್ತೆಯ ಮೌನ, ಸಾಕ್ಷ್ಯಗಳ ಮೇಲಿನ ಸಂಶಯಗಳನ್ನು ಮುಂದಿಟ್ಟು ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಲು ಕೋರಿದ್ದಾರೆ.
ಬೆಂಗಳೂರು (ಡಿ.01): ಲೈಂಗಿಕ ದೌರ್ಜನ್ಯ ಮತ್ತು ಅತ್ಯಾ*ಚಾರ ಪ್ರಕರಣಗಳಲ್ಲಿ ಜೀವಿತಾವಧಿ ಸೆರೆವಾಸದ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಮತ್ತು ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯಿತು. ಪ್ರಜ್ವಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಪ್ರಕರಣಗಳ ಹಿಂದಿನ ರಾಜಕೀಯ ದುರುದ್ದೇಶವನ್ನು ಬಲವಾಗಿ ಪ್ರತಿಪಾದಿಸಿದರು.
ಬಲವಾದ ಜಾಮೀನು ವಾದ ಮಂಡನೆ
ಪ್ರಜ್ವಲ್ ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು, ಪ್ರಾಸಿಕ್ಯೂಷನ್‌ನ ವಾದದಲ್ಲಿನ ಹಲವಾರು ಲೋಪದೋಷಗಳನ್ನು ಮತ್ತು ಕಾಲಮಿತಿಯ ಸಂಶಯಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಲೂಥ್ರಾ ಅವರ ಪ್ರಮುಖ ವಾದಾಂಶಗಳು ಹೀಗಿವೆ:
ವಿದೇಶ ಪ್ರಯಾಣದ ಕುರಿತು: ಪ್ರಜ್ವಲ್ ರೇವಣ್ಣ ಅವರು 2024ರ ಏಪ್ರಿಲ್ ತಿಂಗಳಿನಲ್ಲಿ ವಿದೇಶಕ್ಕೆ ತೆರಳಿದಾಗ ಅವರ ಮೇಲೆ ಯಾವುದೇ ಕ್ರಿಮಿನಲ್ ಕೇಸುಗಳು ದಾಖಲಾಗಿರಲಿಲ್ಲ. ವಿದೇಶಕ್ಕೆ ತೆರಳಿದ ಬಳಿಕವಷ್ಟೇ ಪ್ರಕರಣಗಳು ದಾಖಲಾಗಿವೆ.
ಮೊಬೈಲ್ ಫೋನ್ ಕುರಿತು: 'ಪ್ರಾಸಿಕ್ಯೂಷನ್ ಪ್ರಜ್ವಲ್ ಆ್ಯಪಲ್ ಮೊಬೈಲ್ ಅನ್ನು ವಶಕ್ಕೆ ನೀಡಿಲ್ಲ ಎಂದು ಆರೋಪಿಸಿದೆ. ಆದರೆ, ಸಿಆರ್‌ಪಿಸಿ ಸೆಕ್ಷನ್ 91ರ ಅಡಿಯಲ್ಲಿ ಮೊಬೈಲ್ ನೀಡುವಂತೆ ನಮಗೆ ಯಾವುದೇ ನೋಟಿಸ್ ನೀಡಿಲ್ಲ. ಐಎಂಇಐ ನಂಬರ್ ಆಧರಿಸಿ ಮೊಬೈಲ್ ಕಂಪೆನಿಯಿಂದ ಮಾಹಿತಿ ಪಡೆಯಲು ಸಹ ಪೊಲೀಸರು ಯತ್ನಿಸಿಲ್ಲ' ಎಂದು ಲೂಥ್ರಾ ಪ್ರಶ್ನಿಸಿದರು.
ಸಂತ್ರಸ್ತೆಯ ಮೌನ ಮತ್ತು ರಾಜಕೀಯ ದುರುದ್ದೇಶ: ಅತ್ಯಾ*ಚಾರಕ್ಕೆ ಒಳಗಾಗಿದ್ದೇನೆ ಎಂದು ಹೇಳುವ ಸಂತ್ರಸ್ತೆ ಘಟನೆ ನಡೆದ ಬಳಿಕ (2019 ಮತ್ತು 2021) ಸುಮಾರು 3 ವರ್ಷಗಳ ಕಾಲ ಮೌನವಾಗಿ ಇದ್ದಿದ್ದೇಕೆ? 2023ರಲ್ಲಿ ಏಕೆ ದೂರು ದಾಖಲಿಸಿದರು? ರಾಜಕೀಯ ದುರುದ್ದೇಶದಿಂದ ಸಂತ್ರಸ್ತೆಯನ್ನು ಇಲ್ಲಿನ ಸರ್ಕಾರವು ಬಳಸಿಕೊಂಡು ಏಕಕಾಲಕ್ಕೆ 4 ಪ್ರತ್ಯೇಕ ಕ್ರಿಮಿನಲ್ ಕೇಸುಗಳನ್ನು ದಾಖಲಿಸಿದೆ ಎಂದು ಆರೋಪಿಸಿದರು.
ಎಫ್‌ಎಸ್‌ಎಲ್ ಸಾಕ್ಷಿ ಬಗ್ಗೆ ಸಂಶಯ
ಸಂತ್ರಸ್ತೆಯ ಬಟ್ಟೆಗಳನ್ನು ವಶಕ್ಕೆ ಪಡೆದಿರುವ ಕುರಿತು ವಾದ ಮಂಡಿಸಿದ ಲೂಥ್ರಾ, 'ಫಾರ್ಮ್ ಹೌಸ್ ಗೆ ಬಂದರೂ ಸಂತ್ರಸ್ತೆ ತಮ್ಮ ಬಟ್ಟೆಗಳನ್ನು ವಾಪಸ್ ಪಡೆಯಲಿಲ್ಲವೇಕೆ? ಪೊಲೀಸರು ಬಟ್ಟೆಯನ್ನು ವಶಕ್ಕೆ ಪಡೆದಿರುವುದೇ ಸಂಶಯಾಸ್ಪದವಾಗಿದೆ. ಡಿಎನ್‌ಎ ಪರೀಕ್ಷೆ ನಡೆಸಿದ ವ್ಯಕ್ತಿಯೇ ಮೃತಪಟ್ಟಿದ್ದಾರೆ. ಹೀಗಾಗಿ, ಪ್ರಸ್ತುತ ಎಫ್‌ಎಸ್‌ಎಲ್ (FSL) ಸಾಕ್ಷ್ಯವು ನ್ಯಾಯಾಲಯದಲ್ಲಿ ಒಪ್ಪತಕ್ಕದ್ದಲ್ಲ ಎಂದು ಸಿದ್ಧಾರ್ಥ್ ಲೂಥ್ರಾ ವಾದವನ್ನು ಮಂಡಿಸಿ, ಶಿಕ್ಷೆ ಅಮಾನತು ಮತ್ತು ಜಾಮೀನು ನೀಡುವಂತೆ ಕೋರಿದರು.
ಪ್ರಾಸಿಕ್ಯೂಷನ್ ವಾದ ಮಂಡನೆಯ ಬಳಿಕ ನ್ಯಾಯಾಲಯವು ಜಾಮೀನು ಅರ್ಜಿಯ ಕುರಿತು ತೀರ್ಪನ್ನು ಕಾಯ್ದಿರಿಸುವ ಅಥವಾ ಮುಂದಿನ ದಿನಾಂಕಕ್ಕೆ ವಿಚಾರಣೆ ಮುಂದುವರಿಸುವ ಸಾಧ್ಯತೆ ಇದೆ. ಪ್ರಕರಣದ ಮುಂದಿನ ಬೆಳವಣಿಗೆಯತ್ತ ಎಲ್ಲರ ಗಮನ ನೆಟ್ಟಿದೆ.


