ದಾವಣಗೆರೆಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿಗಳು, ತಮ್ಮ ತಿಂಡಿಯಲ್ಲಿ ಹುಳುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟಿಸಿದರು. ಹುಳು ಬಿದ್ದಿದ್ದ ಇಡ್ಲಿ ತಟ್ಟೆಯ ಸಮೇತ ಅಪರ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಅಧಿಕಾರಿಗಳು ತನಿಖೆಯ ಭರವಸೆ ನೀಡಿದ್ದಾರೆ.
ದಾವಣಗೆರೆ(ಜ.29): ಹುಳು ಬಿದ್ದ ಸಾಂಬಾರ್, ಇಡ್ಲಿ ತಟ್ಟೆಯ ಸಮೇತವೇ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳು ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಅಪರ ಜಿಲ್ಲಾಧಿಕಾರಿಗೆ ಅಳಲು ತೋಡಿಕೊಂಡ ಘಟನೆ ನಗರದಲ್ಲಿ ಬುಧವಾರ ನಡೆದಿದೆ.
ನಗರದ ಬೂದಾಳ್ ರಸ್ತೆಯ ಎಸ್‌ಪಿಎಸ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯ(ಡಿ)ದಲ್ಲಿ ನಿತ್ಯವೂ ತಿಂಡಿ, ಮಧ್ಯಾಹ್ನ-ರಾತ್ರಿ ಊಟದಲ್ಲಿ ಕೂದಲು, ಹರಳು, ಸಣ್ಣ ಕಲ್ಲು, ಕಡ್ಡಿಗಳು, ಹುಳುಗಳು ಪತ್ತೆಯಾಗುತ್ತಿವೆ. ಆದರೆ, ಅಡುಗೆ ಸಿಬ್ಬಂದಿಯಾಗಲಿ, ವಾರ್ಡನ್ ಆಗಲಿ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಮಕ್ಕಳ ಆರೋಪ.
ಬುಧವಾರ ವಿದ್ಯಾರ್ಥಿಯೊಬ್ಬನ ತಟ್ಟೆಯಲ್ಲಿ ಸತ್ತು ಬಿದ್ದಿದ್ದ ಹುಳುವಿನ ಸಮೇತ ಅಪರ ಡಿಸಿ ಶೀಲವಂತ ಶಿವಕುಮಾರ ಬಳಿ ವಿದ್ಯಾರ್ಥಿಗಳು ಆಗಮಿಸಿ, ಅವ್ಯವಸ್ಥೆ ಸರಿಪಡಿಸಲು ದೂರಿದರು. ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಮಾತನಾಡಿ, ವಾರ್ಡನ್, ಅಡುಗೆ ಸಿಬ್ಬಂದಿಯ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನಾನೇ ಶೀಘ್ರ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಮೆನು ಚಾರ್ಟ್ ಪ್ರಕಾರ ಊಟ ನೀಡುತ್ತಿದ್ದಾರೋ ಇಲ್ಲವೋ, ನೋಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಮಕ್ಕಳಿಗೆ ಭರವಸೆ ನೀಡಿದರು.
ಹಾಸ್ಟೆಲ್ ವಾರ್ಡನ್ ಮಾತನಾಡಿ, ಹಾಸ್ಟೆಲ್‌ನಲ್ಲಿ ಎಲ್ಲವನ್ನೂ ಸರಿ ಮಾಡಿದ್ದೇವೆ. ಆದರೆ, ಇಡ್ಲಿ ಸಾಂಬಾರಲ್ಲಿ ಹುಳು ಬಿದ್ದಿದ್ದು, ಅಡುಗೆ ಸಿಬ್ಬಂದಿ ತಪ್ಪಿನಿಂದ. 4 ತಿಂಗಳಿನಿಂದ ಮಕ್ಕಳು ಇದೇ ಆರೋಪ ಮಾಡುತ್ತಿದ್ದಾರೆ. ನಾನು ಒಂದೂವರೆ ತಿಂಗಳ ಹಿಂದಷ್ಟೇ ಇಲ್ಲಿಗೆ ವಾರ್ಡನ್ ಆಗಿದ್ದೇನೆ. ಸಿಬ್ಬಂದಿ ಬದಲಾವಣೆ ಮಾಡಿಲ್ಲವೆಂಬ ಅಸಮಾಧಾನ ವಿದ್ಯಾರ್ಥಿಗಳಲ್ಲಿದೆ. ಉಪ ಲೋಕಾಯುಕ್ತರು ಬಂದಿದ್ದ ವೇಳೆ ತಟ್ಟೆ, ಬೆಡ್ ಶೀಟ್ ಕೊಟ್ಟು ಸಹಿ ಪಡೆದಿದ್ದೇವೆ. ನಿತ್ಯವೂ ಹೀಗೆ ಹುಳು ಬರುತ್ತದೆಂಬ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.


