ಬಾಗಲಕೋಟೆ ಜಿಲ್ಲೆಯ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಮಕ್ಕಳು ಬಿಸಿಯೂಟದ ನಂತರ ಚರಂಡಿ ಪಕ್ಕದಲ್ಲಿ ತಟ್ಟೆ ತೊಳೆಯುತ್ತಿರುವ ದೃಶ್ಯ ವೈರಲ್ ಆಗಿದೆ. ಶಾಲೆಯಲ್ಲಿ ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದು ಈ ದುಸ್ಥಿತಿಗೆ ಕಾರಣವಾಗಿದ್ದು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಕಿಡಿ
ಬಾಗಲಕೋಟೆ (ಜ.28): ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಫೋಟೋವೊಂದು ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಬಿಸಿಯೂಟದ ನಂತರ ಮಕ್ಕಳು ಚರಂಡಿಯ ಪಕ್ಕದಲ್ಲಿರುವ ಪೈಪ್ ನೀರಿಗೆ ತಮ್ಮ ಊಟದ ತಟ್ಟೆಗಳನ್ನು ತೊಳೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರ್ಕಾರದ ಶಾಲಾ ಸುಧಾರಣಾ ಯೋಜನೆಗಳ ನಡುವೆಯೂ, ಪುಟ್ಟ ಮಕ್ಕಳು ಗಬ್ಬು ನಾರುವ ಚರಂಡಿ ಹತ್ತಿರವೇ ನಿಂತು ತಟ್ಟೆ ಸ್ವಚ್ಛಗೊಳಿಸುವ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ.
ಶಿಕ್ಷಣ ಇಲಾಖೆಯ 'ಬೇಜವಾಬ್ದಾರಿ' ಅನಾವರಣ
ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಮತ್ತು ಕೈ ತೊಳೆಯಲು ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಬಿಸಿಯೂಟದ ನಂತರ ಪ್ಲೇಟ್ ತೊಳೆಯಲು ಸೂಕ್ತ ಸ್ಥಳ ಅಥವಾ ನೀರಿನ ಸೌಲಭ್ಯ ಕಲ್ಪಿಸದೆ ಶಾಲಾ ಸುಧಾರಣಾ ಸಮಿತಿ (SDMC) ಹಾಗೂ ಶಿಕ್ಷಕರು ತೋರುತ್ತಿರುವ ಅತಿಯಾದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. 'ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡಲು ಹೇಗೆ ಸಾಧ್ಯ?' ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋ
ಈ ಆಘಾತಕಾರಿ ದೃಶ್ಯವನ್ನು ಶಿವಲಿಂಗ ನಿಂಗನೂರ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಶಿಕ್ಷಣ ಇಲಾಖೆಯ ಬಣ್ಣ ಬಯಲು ಮಾಡಿದ್ದಾರೆ. ಈ ಫೋಟೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ನೂರಾರು ಜನ ಶಿಕ್ಷಣ ಇಲಾಖೆಗೆ ಛೀಮಾರಿ ಹಾಕಿದ್ದಾರೆ. ಮಕ್ಕಳು ಕೊಳಚೆ ನೀರಿನ ಪಕ್ಕದಲ್ಲೇ ನಿಂತಿರುವುದು ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.
ಗ್ರಾಮಸ್ಥರ ಆಕ್ರೋಶ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ
ಶಾಲೆಯ ಈ ಅವ್ಯವಸ್ಥೆ ಕಂಡು ಆಲಬಾಳ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಶಾಲೆಯ ಆವರಣದಲ್ಲಿ ಮೂಲಭೂತ ಸೌಕರ್ಯ ಒದಗಿಸದ ಶಿಕ್ಷಕರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ದೊಡ್ಡ ಭಾಷಣ ಮಾಡುವ ಅಧಿಕಾರಿಗಳು, ಕನಿಷ್ಠ ಪ್ಲೇಟ್ ತೊಳೆಯಲು ಶುದ್ಧ ನೀರಿನ ವ್ಯವಸ್ಥೆ ಮಾಡದಿರುವುದು ಸರ್ಕಾರದ 'ನಿರ್ಲಕ್ಷ್ಯ'ಕ್ಕೆ ಸಾಕ್ಷಿಯಾಗಿದೆ.


