ಬೆಂಗಳೂರು(ಜು.09): ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಆಟೋ ಚಾಲಕನ ಅಂತ್ಯಕ್ರಿಯೆನ್ನು ಆತನ ಮಗಳೇ ಪಿಪಿಇ ಕಿಟ್‌ ಧರಿಸಿ ನೆರವೇರಿಸಿದ್ದಾರೆ.

ಶಕ್ತಿ ಗಣಪತಿನಗರ ವಾರ್ಡ್‌ನಲ್ಲಿ ವಾಸವಾಗಿದ್ದ ಆಟೋ ಚಾಲಕನಿಗೆ ಇತ್ತೀಚೆಗೆ ಕೊರೋನಾ ಸೋಂಕು ತಗುಲಿರುವುದು ದೃಢ ಪಟ್ಟಿತ್ತು. ಬಳಿಕ ನಗರದ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತ ಪಟ್ಟಿದ್ದರು.

ಕೊರೋನಾ ಭೀತಿ: ಸಾಯುತ್ತಿದ್ದರೂ ಸುಮ್ಮನೇ ನೋಡ್ತಾ ನಿಂತ ಜನ!

ತಂದೆಯ ಸಂಪರ್ಕದಲ್ಲಿದ್ದು ಕ್ವಾರಂಟೈನ್‌ಗೆ ಒಳಗಾಗಿದ್ದ ಮೃತರ ಕುಟುಂಬಸ್ಥರು ಘಟನೆಯಿಂದ ಕಂಗಾಲಾಗಿದ್ದರು. ಮೃತರ ಹಿರಿಯ ಮಗಳು ತಕ್ಷಣ ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕ, ಪಾಲಿಕೆ ಸದಸ್ಯ ಎಂ.ಶಿವರಾಜು ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಳು. ಅಲ್ಲದೆ, ಅವರ ನೆರವು ಕೋರಿದ್ದರು.

ನಂತರ ಶಿವರಾಜ್‌ ಅವರ ಸೂಚನೆ ಮೇರೆಗೆ ಬಿಬಿಎಂಪಿ ಸಿಬ್ಬಂದಿ ಅಂತ್ಯ ಕ್ರಿಯೆಯಲ್ಲಿ ಹೆಣ್ಣು ಮಗಳು ಭಾಗಿಯಾಗಲು ಅವಕಾಶ ನೀಡಿದ್ದರು. ಬಳಿಕ ಜಯದೇವ ಆಸ್ಪತ್ರೆಯಿಂದ ಸುಮನಹಳ್ಳಿ ಚಿತಾಗಾರಕ್ಕೆ ಪಾರ್ಥಿವ ಶರೀರ ತಂದು ಪಿಪಿಇ ಧರಿಸಿ ಅಂತ್ಯಸಂಸ್ಕಾರ ನೆರವೇರಿಸಲು ಅವಕಾಶ ಮಾಡಿಕೊಟ್ಟಿದ್ದರು. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗು ಇದ್ದು, ಇತರೆ ಸಂಬಂಧಿಕರು ನೆರವಾಗದ ಹಿನ್ನೆಲೆಯಲ್ಲಿ ಮಗಳು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.