ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ.ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಎಸ್‌ಐಟಿ ಈವರೆಗೂ ಲಿಖಿತ ವಾದ ಹಾಗೂ ಪ್ರಕರಣದ ಸಂಕ್ಷಿಪ್ತ ಸಾರಾಂಶ (ಸಿನಾಪ್ಸಿಸ್‌) ಸಲ್ಲಿಸದೆ ಇರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್‌, ಲಿಖಿತ ವಾದ ಹಾಗೂ ಸಿನಾಪ್ಸಿಸ್‌ ಸಲ್ಲಿಸುವವರೆಗೂ ವಾದ-ಪ್ರತಿವಾದ ಆಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು (ಸೆ.27): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಎಸ್‌ಐಟಿ ಈವರೆಗೂ ಲಿಖಿತ ವಾದ ಹಾಗೂ ಪ್ರಕರಣದ ಸಂಕ್ಷಿಪ್ತ ಸಾರಾಂಶ (ಸಿನಾಪ್ಸಿಸ್‌) ಸಲ್ಲಿಸದೆ ಇರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್‌, ಲಿಖಿತ ವಾದ ಹಾಗೂ ಸಿನಾಪ್ಸಿಸ್‌ ಸಲ್ಲಿಸುವವರೆಗೂ ವಾದ-ಪ್ರತಿವಾದ ಆಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಜಾರಕಿಹೊಳಿ ಸಿ.ಡಿ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದನ್ನು ಪ್ರಶ್ನಿಸಿ ಹಾಗೂ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಪ್ರಕರಣದ ಎಫ್‌ಐಆರ್‌ ರದ್ದು ಕೋರಿ ಸಂತ್ರಸ್ತೆ, ಆರೋಪಿಗಳಾದ ಎಸ್‌. ಶ್ರವಣ್‌ ಕುಮಾರ್‌ ಹಾಗೂ ಬಿ.ಎಂ. ನರೇಶ್‌ ಸಲ್ಲಿಸಿರುವ ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಸುನೀಲ್‌ದತ್‌ ಯಾದವ್‌ ಅವರ ಪೀಠ ಬೇಸರ ವ್ಯಕ್ತಪಡಿಸಿತು.

ಪರಿವರ್ತಿತ ಭೂಮಿ ಷರತ್ತು ಉಲ್ಲಂಘನೆ ವಿರುದ್ಧ ಕ್ರಮದ ಅಧಿಕಾರ ಡಿಸಿಗೆ ಮಾತ್ರ: ಹೈಕೋರ್ಟ್

ವಿಚಾರಣೆ ವೇಳೆ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಹಾಜರಾಗಿ, ಲಿಖಿತ ವಾದ ಮತ್ತು ಸಿನಾಪ್ಸಿಸ್‌ ಸಲ್ಲಿಸುವಂತೆ ಪಕ್ಷಕಾರರಿಗೆ (ಅರ್ಜಿದಾರರು ಮತ್ತು ಪ್ರತಿವಾದಿಗಳು) ಸೆ.5ರಂದು ನ್ಯಾಯಾಲಯ ಸೂಚಿಸಿದಂತೆ ತಮ್ಮ ಲಿಖಿತ ವಾದವನ್ನು ಸಲ್ಲಿಸಲಾಗಿದೆ. ಆದರೆ, ಸರ್ಕಾರ, ಎಸ್‌ಐಟಿ, ಅಮೈಕಸ್‌ ಕ್ಯೂರಿ ಸೇರಿದಂತೆ ಪ್ರತಿವಾದಿಗಳ್ಯಾರೂ ಲಿಖಿತ ವಾದ ಸಲ್ಲಿಸಿಲ್ಲ. ಹಾಗಾಗಿ, ಅವರು ಮಂಡಿಸಲಿರುವ ಕಾನೂನಾತ್ಮಕ ಅಂಶಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲವಾಗಿದೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈಗಾಗಲೇ ಹಲವು ಬಾರಿ ಕಾಲಾವಕಾಶ ನೀಡಿದ್ದರೂ ಪ್ರತಿವಾದಿಗಳು ತಮ್ಮ ಲಿಖಿತ ವಾದ ಸಲ್ಲಿಸಿಲ್ಲ. ಲಿಖಿತ ವಾದ ಸಲ್ಲಿಸದ ಹೊರತು ವಾದ-ಪ್ರತಿವಾದ ಆಲಿಸುವುದಿಲ್ಲ. ಹಾಗಾಗಿ ಮತ್ತೊಮ್ಮೆ 10 ದಿನದೊಳಗೆ ಎಲ್ಲರೂ ತಮ್ಮ ಲಿಖಿತ ವಾದ ಸಲ್ಲಿಸಬೇಕು. ಲಿಖಿತ ವಾದ ಸಲ್ಲಿಸಿದರೆ, ದಿನಗಟ್ಟಲೆ-ಗಂಟೆಗಟ್ಟಲೆ ವಾದ ಮಂಡಿಸುವುದನ್ನು ತಪ್ಪಿಸಬಹುದು. ವಾದ ಮಂಡನೆಗೆ ಸಮಯದ ಮಿತಿ ನಿಗದಿಪಡಿಸಬಹುದು. ಹಾಗಾಗಿ, ಎಸ್‌ಐಟಿ ಮತ್ತು ಸರ್ಕಾರ ಸೇರಿದಂತೆ ಇತರೆ ಪಕ್ಷಗಾರರು ಲಿಖಿತ ವಾದ ಹಾಗೂ ಸಿನಾಪ್ಸಿಸ್‌ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಪೀಠ ಅಕ್ಟೋಬರ್‌ ಮೂರನೇ ವಾರದಲ್ಲಿ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.

ಮಹಿಷ ಪ್ರತಿಮೆಗೆ ಪೂಜೆ ಮನವಿ ತಿರಸ್ಕರಿಸಿದ ಹೈಕೋರ್ಟ್‌: ಮೈಸೂರಿನಲ್ಲಿ ಮಹಿಷ ಪ್ರತಿಮೆಯ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಮೈಸೂರಿನ ಅಶೋಕಪುರಂನ ವಕೀಲ ಪಿ.ಚಂದ್ರಶೇಖರ್‌ ಮಾಡಿಕೊಂಡ ಮಧ್ಯಂತರ ಮನವಿಯನ್ನು ರಾಜ್ಯ ಹೈಕೋರ್ಟ್‌ ತಳ್ಳಿ ಹಾಕಿದೆ. ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಅಗ್ರಪೂಜೆ ಸಲ್ಲಿಸಲು ಅಡ್ಡಿಪಡಿಸಲಾಗುತ್ತಿದೆ. ದಸರಾ ಸಂದರ್ಭದಲ್ಲಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಮೈಸೂರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದರು.

ಕರ್ತವ್ಯನಿರತ ಚಾಲಕ ವಿಶ್ರಾಂತಿಯಲ್ಲಿ ಮೃತಪಟ್ಟರೂ ವಿಮೆ: ಹೈಕೋರ್ಟ್

ಆದರೆ ಮಹಿಷಾಸುರನ ಪೂಜೆ ನಡೆಸುತ್ತಿರುವ ಬಗ್ಗೆ ಅರ್ಜಿದಾರರು ಯಾವುದೇ ಅಧಿಕೃತ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಹೈಕೋರ್ಟ್‌ ನ್ಯಾ. ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮನವಿಯನ್ನು ತಿರಸ್ಕರಿಸಿದೆ. ಆದರೆ ಈ ಸಂಬಂಧ ಹೆಚ್ಚಿನ ವಿವರಣೆಗಾಗಿ ಪರಿಶಿಷ್ಟಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ನ್ಯಾಯಾಲಯ ತುರ್ತು ನೋಟಿಸ್‌ ನೀಡಿದೆ. ಮಹಿಷ ಪ್ರತಿಮೆಗೆ ಪೂಜೆ ಮಾಡಿದ ನಂತರ ಚಾಮುಂಡಿಗೆ ಪೂಜೆ ಸಲ್ಲಿಸಿರುವ ಅಧಿಕೃತ ಮತ್ತು ಪರಿಗಣನಾರ್ಹ ವಿವರಗಳು ಲಭ್ಯವಿದ್ದರೆ ಅವುಗಳನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ನ್ಯಾಯಪೀಠ ಸೂಚನೆ ನೀಡಿದೆ.