ತಮಿಳುನಾಡಿಗೆ ನಿತ್ಯ 3,500 ಕ್ಯು ನೀರು: ಸಚಿವ ಡಿ.ಕೆ.ಶಿವಕುಮಾರ್
ಪ್ರಸ್ತುತ ನಾವು ನೀರು ಬಿಡದಿದ್ದರೂ 3,000ದಿಂದ 3,500 ಕ್ಯೂಸೆಕ್ ನೀರು ಹೋಗುತ್ತಿರುತ್ತದೆ. ಇದನ್ನು ಸೆ.26 ರವರೆಗೆ ಮುಂದುವರೆಸುತ್ತೇವೆ. ಬಳಿಕ ರಾಜ್ಯದ ಪರ, ರೈತರ ಹಿತ ಕಾಯಲು ಯಾವುದೆಲ್ಲಾ ನಡೆ ಅನುಸರಿಸಬಹುದು ಎಂಬ ಬಗ್ಗೆ ರೂಪರೇಷೆ ಸಿದ್ಧಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು(ಸೆ.23): ಸುಪ್ರೀಂಕೋರ್ಟ್ ನಿತ್ಯ 5 ಸಾವಿರ ಕ್ಯೂಸೆಕ್‌ನಂತೆ ಕಾವೇರಿ ನೀರು ಹರಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದರೂ ಪ್ರಸ್ತುತ ಬಿಡುತ್ತಿರುವ ಮಾದರಿಯಲ್ಲೇ ಸೆ.26ರವರೆಗೆ ನಿತ್ಯ 3,500 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಅಲ್ಲದೆ, ಇದಕ್ಕೂ ಮೊದಲು ಕೇಂದ್ರ ಸರ್ಕಾರ ಎರಡೂ ರಾಜ್ಯಗಳನ್ನು ಕರೆದು ಮಾತುಕತೆ ನಡೆಸಬೇಕು. ನ್ಯಾಯಾಧೀಶನ ಪಾತ್ರ ವಹಿಸಿ ವಿವಾದವನ್ನು ಬಗೆಹರಿಸಬೇಕು ಎಂದು ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ತಮಿಳುನಾಡಿಗೆ ನೀರು: ಕಾವೇರಿಗಾಗಿ ಇಂದು ಮಂಡ್ಯ ಸಂಪೂರ್ಣ ಬಂದ್
ಶುಕ್ರವಾರ ಸಂಜೆ ಸುದೀರ್ಘವಾಗಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಅಭಾವದಿಂದ ಕಾವೇರಿಯಲ್ಲಿ ನೀರಿಗೆ ತೀವ್ರ ಅಭಾವ ಉಂಟಾಗಿದೆ. ಹೀಗಿದ್ದರೂ ತಮಿಳುನಾಡು ಪರ ವಕೀಲರು ಸುಪ್ರೀಂಕೋರ್ಟಿನಲ್ಲಿ ನಿತ್ಯ 7,200 ಕ್ಯೂಸೆಕ್ ನೀರು ಬಿಡುವಂತೆ ಮನವಿ ಮಾಡಿದ್ದರು. ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿರುವ 5,000 ಕ್ಯೂಸೆಕ್ ಕೂಡ ಬಿಡಲಾಗುವುದಿಲ್ಲ ಎಂದು ಮನವರಿಕೆ ಮಾಡಿದ್ದೆವು. ಆದರೆ ನ್ಯಾಯಾಲಯ ಇಬ್ಬರ ಮನವಿಯನ್ನೂ ತಿರಸ್ಕರಿಸಿ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ. ಪ್ರಸ್ತುತ ನಾವು ನೀರು ಬಿಡದಿದ್ದರೂ 3,000ದಿಂದ 3,500 ಕ್ಯೂಸೆಕ್ ನೀರು ಹೋಗುತ್ತಿರುತ್ತದೆ. ಇದನ್ನು ಸೆ.26 ರವರೆಗೆ ಮುಂದುವರೆಸುತ್ತೇವೆ. ಬಳಿಕ ರಾಜ್ಯದ ಪರ, ರೈತರ ಹಿತ ಕಾಯಲು ಯಾವುದೆಲ್ಲಾ ನಡೆ ಅನುಸರಿಸಬಹುದು ಎಂಬ ಬಗ್ಗೆ ರೂಪರೇಷೆ ಸಿದ್ಧಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ನೀರು ಬಿಟ್ಟು ರೈತರ ಹಿತ ಹೇಗೆ ಕಾಯುತ್ತೀರಿ ಎಂಬ ಪ್ರಶ್ನೆಗೆ, ನಾವು ಎಲ್ಲಾ ರೀತಿಯಲ್ಲೂ ರೈತರ ಹಿತ ಕಾಯಲು ಬದ್ಧವಾಗಿದ್ದೇವೆ. ಕುಡಿಯುವ ನೀರು ಹಾಗೂ ರೈತರ ಅಗತ್ಯಗಳಿಗೆ ನೀರು ಪೂರೈಸುತ್ತೇವೆ. ಪ್ರಸ್ತುತ 7 ಸಾವಿರ ಕ್ಯೂಸೆಕ್‌ನಷ್ಟು ಒಳ ಹರಿವು ಇದ್ದು, ನಾವು 3,500 ಕ್ಯೂಸೆಕ್ ಮಾತ್ರ ನೀರು ಬಿಡುತ್ತೇವೆ. ಈ ತಿಂಗಳು ತಮಿಳುನಾಡಿಗೆ ಬಿಡಬೇಕಾಗಿದ್ದ ಒಟ್ಟು ಪ್ರಮಾಣದಲ್ಲಿ ಶೇ.34 ರಷ್ಟು ಮಾತ್ರ ನಾವು ಬಿಟ್ಟಿದ್ದೇವೆ. ಹೀಗಾಗಿ ನ್ಯಾಯಾಲಯದ ಆದೇಶ ಪಾಲಿಸುತ್ತಲೇ ರೈತರ ಹಿತ ಕಾಯುತ್ತಿದ್ದೇವೆ ಎಂದು ಹೇಳಿದರು.
ಮೇಕೆದಾಟು ಯೋಜನೆಗೆ ಅನುಮತಿ ಕೋರಲು ನಿರ್ಧಾರ: ಡಿಕೆಶಿ
ಬೆಂಗಳೂರು: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ಅನುಮತಿ ಕೋರಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
‘ಸುಪ್ರೀಂ ಕೋರ್ಟ್ ಮೇಕೆದಾಟು ಯೋಜನೆ ಬಗ್ಗೆ ಕರ್ನಾಟಕದಲ್ಲಿ ಆಣೆಕಟ್ಟು ನಿರ್ಮಿಸಿದರೆ ತಮಿಳುನಾಡಿಗೆ ಏನು ತೊಂದರೆ ಎಂದು ಮೌಖಿಕವಾಗಿ ಯೋಜನೆ ಪರ ಅಭಿಪ್ರಾಯ ವ್ಯಕ್ತಪಡಿಸಿದೆ. ಇದರ ಆಧಾರದ ಮೇಲೆ ಯೋಜನೆಯ ಪೂರ್ಣ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕೇಂದ್ರಕ್ಕೆ ಅಗತ್ಯ ಅನುಮತಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದು ಶಿವಕುಮಾರ್ ಹೇಳಿದರು.
ಕಾವೇರಿ ನೀರಿನ ವಿಚಾರದಲ್ಲಿ ಸಿಟ್ಟಿದ್ರೆ ಎಷ್ಟಾದ್ರೂ ಬೈಯಿರಿ, ಬೈಸಿಕೊಳ್ತೀವಿ: ಡಿಸಿಎಂ ಡಿ.ಕೆ. ಶಿವಕುಮಾರ್
‘ಮೇಕೆದಾಟು ಯೋಜನೆಯಿಂದ ಕಾವೇರಿ ನೀರು ಸಮಸ್ಯೆಗೆ ಪರಿಹಾರ ಸಿಗಲಿದೆ. ಇದನ್ನು ನ್ಯಾಯಾಲಯ ಪರಿಗಣಿಸಿದೆ. ಆದರೆ ನ್ಯಾಯಾಲಯದಲ್ಲಿ ತಮಿಳುನಾಡು ತನ್ನ ಆಕ್ಷೇಪಣೆಯನ್ನು ಮುಂದುವರೆಸಿದ್ದು, ನ್ಯಾಯಾಲಯವು ಯೋಜನೆ ಜಾರಿಯಾದರೂ ವಾರ್ಷಿಕವಾಗಿ ನಿಮಗೆ ಬಿಡುವ 174 ಟಿಎಂಸಿ ನೀರು ಬಿಡುತ್ತಾರೆ. ಹೀಗಿದ್ದಾಗ ನಿಮ್ಮ ತೊಂದರೆಯೇನು ಎಂದು ಪ್ರಶ್ನಿಸಿದೆ. ಇದು ರಾಜ್ಯಕ್ಕೆ ಪೂರಕ ವಾತಾವರಣ ಸೃಷ್ಟಿಸಿದೆ’ ಎಂದು ಹೇಳಿದರು.
ಈಗಾಗಲೇ ಯೋಜನೆಗೆ 1 ಸಾವಿರ ಕೋಟಿ ರು. ಮೀಸಲಿಡಲಾಗಿದೆ. ಕೇಂದ್ರಕ್ಕೆ ಡಿಪಿಆರ್ ಹಾಗೂ ಪರಿಸರ ಅನುಮತಿಗಾಗಿ ಅರ್ಜಿ ಸಲ್ಲಿಸುತ್ತೇವೆ. ಜತೆಗೆ ಅನುಮೋದನೆ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ ಎಂದೂ ಹೇಳಿದರು.