ತಮಿಳುನಾಡಿಗೆ ನೀರು: ಕಾವೇರಿಗಾಗಿ ಇಂದು ಮಂಡ್ಯ ಸಂಪೂರ್ಣ ಬಂದ್
ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳಿಂದ ಮಂಡ್ಯ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಬಹುತೇಕ ಎಲ್ಲ ಸಂಘ ಸಂಸ್ಥೆಗಳು ರೈತರ ಹೋರಾಟಕ್ಕೆ ಸಾಥ್ ನೀಡಲಿದ್ದು, ಬೆಳಗ್ಗೆ ೯ ಗಂಟೆಯಿಂದ ಮಂಡ್ಯ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳಲಿದೆ.
ಮಂಡ್ಯ(ಸೆ.23): ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಇಂದು(ಶನಿವಾರ) ಮಂಡ್ಯ ನಗರ ಸಂಪೂರ್ಣ ಬಂದ್ ಮಾಡಲು ಕರೆ ನೀಡಿದೆ.
ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಹೋಟೆಲ್, ಅಂಗಡಿ ಮುಂಗಟ್ಟುಗಳು, ಶಾಲಾ-ಕಾಲೇಜುಗಳು, ಪೆಟ್ರೋಲ್ ಬಂಕ್, ಬಸ್ ಸಂಚಾರ, ಸಿನಿಮಾ ಮಂದಿರಗಳು, ಆಟೋ ಸಂಚಾರ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆ ಬಂದ್ ಮಾಡಲು ನಿರ್ಧರಿಸಲಾಗಿದೆ. ಈ ಬಂದ್‌ಗೆ ಹೋಟೆಲ್ ಮಾಲೀಕರು, ವರ್ತಕರು, ಆಟೋ ಚಾಲಕರ ಸಂಘ, ವಾಣಿಜ್ಯೋದ್ಯಮಿಗಳು, ಖಾಸಗಿ ಬಸ್ ಮಾಲೀಕರು ಸೇರಿದಂತೆ ವಿವಿಧ ಸಂಘ-ಸಂಸ್ಥೆಯವರಿಂದ ಬೆಂಬಲ ಸಿಗುವ ನಿರೀಕ್ಷೆ ಇದೆ.
ಕಾವೇರಿ ವಿವಾದ: ಮಂಡ್ಯದಲ್ಲಿ ಮುಂದುವರಿದ ರೈತರ ಕಿಚ್ಚು; ಹೋರಾಟಕ್ಕೆ ನಿರ್ಮಾಲಾನಂದ ಸ್ವಾಮೀಜಿ ಸಾಥ್
ಬಂದ್ ಹೇಗಿರಬೇಕೆಂಬ ಬಗ್ಗೆ ಈಗಾಗಲೇ ಸಭೆ ನಡೆಸಿ ರೂಪು-ರೇಷೆಗಳನ್ನು ಸಿದ್ಧಪಡಿಸಲಾಗಿದೆ. ಸಂಜೆ ಇನ್ನೂ ಹಲವು ಸಂಘ- ಸಂಸ್ಥೆಯವರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಸಂಪೂರ್ಣ ಬಂದ್ ಯಶಸ್ವಿಯಾಗಲು ಸಹಕರಿಸುವಂತೆ ಸಮಿತಿಯವರು ಮನವಿ ಮಾಡಲಿದ್ದಾರೆ.
ನಾಲ್ಕನೇ ಶನಿವಾರವಾಗಿರುವುದರಿಂದ ಸರ್ಕಾರಿ ಕಚೇರಿಗಳಿಗೆ ರಜೆ ಇದೆ. ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ ಮಾಡುವಂತೆ ಸಮಿತಿ ಸದಸ್ಯರು ಜಿಲ್ಲಾಧಿಕಾರಿ, ಡಿಡಿಪಿಐ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಕೋರಿದ್ದಾರೆ.
ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳಿಂದ ಮಂಡ್ಯ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಬಹುತೇಕ ಎಲ್ಲ ಸಂಘ ಸಂಸ್ಥೆಗಳು ರೈತರ ಹೋರಾಟಕ್ಕೆ ಸಾಥ್ ನೀಡಲಿದ್ದು, ಬೆಳಗ್ಗೆ ೯ ಗಂಟೆಯಿಂದ ಮಂಡ್ಯ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳಲಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಮಹಾವೀರ ವೃತ್ತ, ವಿಶ್ವೇಶ್ವರಯ್ಯ ರಸ್ತೆ, ವಿವೇಕಾನಂದ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುವುದು. ನಗರದಾದ್ಯಂತ ಬೃಹತ್ ಬೈಕ್ ರ್ಯಾಲಿ ನಡೆಸುವುದಕ್ಕೂ ಸಿದ್ಧತೆ ನಡೆಸಿದ್ದಾರೆ.