ಕರ್ನಾಟಕಕ್ಕೆ ಮತ್ತೆ ಕಾವೇರಿ ಕಂಟಕ: ತಮಿಳುನಾಡಿಗೆ ನಿತ್ಯ ನೀರು ಬಿಡುಗಡೆಗೆ ಆದೇಶ
ಕರ್ನಾಟಕದಿಂದ ಪ್ರತಿನಿತ್ಯ 25 ಸಾವಿರ ಕ್ಯುಸೆಕ್ ನೀರು ಬಿಡಿಸುವಂತೆ ತಮಿಳುನಾಡು ಪಟ್ಟು, 15 ದಿನ ಪ್ರತಿನಿತ್ಯ 7500 ಕ್ಯುಸೆಕ್‌ನಂತೆ ಬಿಡುಗಡೆಗೆ ಕಾವೇರಿ ನಿಯಂತ್ರಣ ಸಮಿತಿ ಸೂಚನೆ, ಒಪ್ಪದ ಕರ್ನಾಟಕ. 5000 ಕ್ಯುಸೆಕ್ ಬಿಡುಗಡೆಗೆ ನಿಯಂತ್ರಣ ಸಮಿತಿಯಿಂದ ನಿರ್ದೇಶನ, ಅದಕ್ಕೂ ಒಪ್ಪದೆ ನಿತ್ಯ 3000 ಕ್ಯುಸೆಕ್ ನೀರು ಹರಿಸುವುದಾಗಿ ಕರ್ನಾಟಕದಿಂದ ಬಿಗಿಪಟ್ಟು.
ನವದೆಹಲಿ(ಆ.29): ರಾಜ್ಯದಲ್ಲಿ ಬರದ ಛಾಯೆ ಆವರಿಸಿರುವ ನಡುವೆಯೇ ಮತ್ತೆ ಕಾವೇರಿ ನೀರು ವಿಚಾರವಾಗಿ ಕಂಟಕ ಎದುರಾಗಿದೆ. ಈಗಾಗಲೇ ತಮಿಳುನಾಡಿಗೆ 10 ಟಿಎಂಸಿ ನೀರು ಬಿಟ್ಟಿರುವ ಕರ್ನಾಟಕಕ್ಕೆ ಇನ್ನೂ 15 ದಿನ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ) ಸೂಚಿಸಿದೆ. ಇದರ ಬೆನ್ನಲ್ಲೇ ಇಂದು(ಮಂಗಳವಾರ) ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು, ಅಲ್ಲಿ ಸಮಿತಿಯ ಈ ಸೂಚನೆಗೆ ವಿರೋಧ ವ್ಯಕ್ತಪಡಿಸಲು ಕರ್ನಾಟಕ ನಿರ್ಧರಿಸಿದೆ.
ದೆಹಲಿಯಲ್ಲಿ ಸೋಮವಾರ ನಡೆದ ಸಮಿತಿ ಸಭೆಯ ಆರಂಭದಲ್ಲೇ ತಮಿಳುನಾಡು 10 ದಿನ 25 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆಗ್ರಹಿಸಿತು. ಆಗ ಸಮಿತಿ ಮುಖ್ಯಸ್ಥರು ನಿತ್ಯ 7,500 ಕ್ಯುಸೆಕ್ ನೀರು ಬಿಡುವಂತೆ ಸೂಚಿಸಿದರು. ಆದರೆ, ಕರ್ನಾಟಕದ ಅಧಿಕಾರಿಗಳು ಮಾತ್ರ ಇದಕ್ಕೆ ಒಪ್ಪದಿದ್ದಾಗ 15 ದಿನ ಕಾಲ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡಲು ನಿರ್ದೇಶನ ನೀಡಲಾಯಿತು. ಅಂತಿಮವಾಗಿ 3 ಸಾವಿರ ಕ್ಯುಸೆಕ್ ನೀರು ಬಿಡುವುದಾಗಿ ಕರ್ನಾಟಕವು ಸಮಿತಿ ಮುಂದೆ ಹೇಳಿದೆ.
ತಮಿಳುನಾಡಿಗೆ ನೀರು ಹಸಿರುವುದು ಸಿದ್ದು, ಡಿಕೆಶಿ ಸೂತ್ರವಾ?: ಕೋಡಿಹಳ್ಳಿ ಚಂದ್ರಶೇಖರ್
ಮೇಲ್ಮನವಿ:
ಮಂಗಳವಾರ ದೆಹಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು, ಅಲ್ಲಿ ಸಮಿತಿ ಆದೇಶವನ್ನು ಪ್ರಶ್ನೆ ಮಾಡಲು ಕರ್ನಾಟಕ ಸಿದ್ಧತೆ ಮಾಡಿಕೊಂಡಿದೆ. ಮಳೆ ಕೊರತೆ ಇರುವ ಕಾರಣಕ್ಕೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಈಗಾಗಲೇ ವಾದಿಸಲು ನಿರ್ಧರಿಸಿದೆ. ಈ ಸಭೆಯಲ್ಲಿ ಮುಂದಿನ 15 ದಿನಗಳ ಪಾಲನೆ ಏನು ಎಂಬುದು ತಿಳಿಯಲಿದೆ.
ಈಗಾಗಲೇ ನಿತ್ಯ 25 ಸಾವಿರ ಕ್ಯುಸೆಕ್ ನೀರು ಬಿಡುಗಡೆಗೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಸುಪ್ರೀಂ ಕೋರ್ಚ್‌ನಲ್ಲಿ ಪ್ರಶ್ನಿಸಿದೆ. ಈ ಸಂಬಂಧ ನ್ಯಾಯಾಲಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯು ಎಂಎ)ದಿಂದ ವಾಸ್ತವ ಸ್ಥಿತಿ ವರದಿ ಕೇಳಿದೆ. ಅದನ್ನು ನೋಡಿಕೊಂಡು ಶುಕ್ರವಾರ ವಿಚಾರಣೆ ನಡೆಸಲಿದೆ.
ನೀರು ಬಿಟ್ಟು ಸರ್ವ ಪಕ್ಷ ಸಭೆ ಕರೆಯುವುದು ಸರಿಯಲ್ಲ: ಎಂಟಿಬಿ ನಾಗರಾಜ್
ನಮಗೇ ನೀರಿಲ್ಲ
ನಮ್ಮ ಬಳಿ ನೀರಿಲ್ಲ, ಬೆಳೆ ರಕ್ಷಣೆ ಜತೆಗೆ ಕುಡಿಯುವ ನೀರು ಕೂಡ ಕೊಡಬೇಕು. ಹೀಗಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ಕುರಿತು ಕಾನೂನು ತಜ್ಞರ ಅಭಿಪ್ರಾಯಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುಪ್ರೀಂನಲ್ಲಿ ವಾದ
ನಿತ್ಯ ನೀರು ಬಿಡುಗಡೆ ಮಾಡಬೇಕೆಂಬ ಕಾವೇರಿ ನೀರು ನಿಯಂತ್ರಣ ಮಂಡಳಿ ಸೂಚನೆ ಅಂತಿಮವಲ್ಲ. ನಮ್ಮ ನಿಲುವನ್ನು ಸುಪ್ರೀಂಕೋರ್ಟ್ ಮುಂದೆ ಮಂಡಿಸುತ್ತೇವೆ. ನಮ್ಮ ರೈತರ ನಮಗೆ ಮುಖ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.