ತಮಿಳುನಾಡಿಗೆ ನೀರು ಹಸಿರುವುದು ಸಿದ್ದು, ಡಿಕೆಶಿ ಸೂತ್ರವಾ?: ಕೋಡಿಹಳ್ಳಿ ಚಂದ್ರಶೇಖರ್
ಕಾವೇರಿ ನೀರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರ 1985ರಿಂದಲೂ ವಿಫಲವಾಗುತ್ತಲೇ ಬಂದಿದೆ. ನಮ್ಮ ರಾಜ್ಯ ನೀರು ಉಳಿಸಿಕೊಳ್ಳುವ ಕನಿಷ್ಠ ಪ್ರಯತ್ನವನ್ನೂ ಮಾಡದೆ ನೀರನ್ನು ಬಿಡುತ್ತಿರುವುದು ನಾಡಿನ ರೈತರಿಗೆ ಮಾಡುತ್ತಿರುವ ಅನ್ಯಾಯ: ರೈತಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್
ರಾಮನಗರ(ಆ.27): ಸಂಕಷ್ಟ ಸೂತ್ರದ ಹೆಸರಿನಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಿಂದ ಅಳಿದುಳಿದ ನೀರನ್ನು ಪಡೆದುಕೊಳ್ಳುವುದು ತಮಿಳುನಾಡಿನ ಸೂತ್ರವಾದರೆ, ನೀರು ಹರಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಸೂತ್ರವಾ ಎಂದು ರೈತಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರ 1985ರಿಂದಲೂ ವಿಫಲವಾಗುತ್ತಲೇ ಬಂದಿದೆ. ನಮ್ಮ ರಾಜ್ಯ ನೀರು ಉಳಿಸಿಕೊಳ್ಳುವ ಕನಿಷ್ಠ ಪ್ರಯತ್ನವನ್ನೂ ಮಾಡದೆ ನೀರನ್ನು ಬಿಡುತ್ತಿರುವುದು ನಾಡಿನ ರೈತರಿಗೆ ಮಾಡುತ್ತಿರುವ ಅನ್ಯಾಯ. ತಮಿಳುನಾಡಿನ ಪಾಲಾರ್, ಮೆಟ್ಟೂರು, ಭವಾನಿ, ಗ್ರಾಂಡ್ ಅಣ್ಣೈ ಅಣೆಕಟ್ಟೆಗಳಲ್ಲಿ ಸಾಕಷ್ಟು ನೀರಿದೆ. ಹವಾಮಾನ ಇಲಾಖೆ ಹೇಳಿದಂತೆ ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆಯಾಗಿದೆ. ಈ ಸಂದರ್ಭದಲ್ಲಿ ನೀರು ಸಂಗ್ರಹಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಆದರೂ, ನೀರು ಬಿಡುವಂತೆ ತಮಿಳುನಾಡು ಒತ್ತಡ ತರುತ್ತಿದೆ. ಸಂಕಷ್ಟದ ಸೂತ್ರ ಎಂಬುದು ಬೆಳೆ ಒಣಗುವ ಪರಿಸ್ಥಿತಿ ನಿರ್ಮಾಣವಾದಾಗ ನೀರು ಬಿಡಬೇಕು. ಆದರೆ, ತಮಿಳುನಾಡಿನಲ್ಲಿ ಬೆಳೆ ಒಣಗುತ್ತಿಲ್ಲ. ಅವರ ರಾಜ್ಯದ ಅಣೆಕಟ್ಟೆಯಲ್ಲಿ ಬೆಳೆ ಉಳಿಸಿಕೊಳ್ಳಲು ಬೇಕಾದಷ್ಟುನೀರಿದೆ. ಆದರೆ, ನಮ್ಮ ರಾಜ್ಯದಲ್ಲಿ ಬೆಳೆಗಳಿಗೆ ಇರಲಿ, ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸ್ಥಿತಿ ನಿರ್ಮಾಣಗೊಂಡಿದೆ. ಬೆಂಗಳೂರು ಸೇರಿದಂತೆ ಕೆಲ ನಗರಗಳು ಹಾಗೂ ಹಲವು ಸಣ್ಣಪುಟ್ಟಪಟ್ಟಣಗಳಿಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ. ಆದರೆ, ರಾಜ್ಯ ಸರ್ಕಾರ ಇದ್ಯಾವುದರ ಪರಿವಿಲ್ಲದ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರ: ಮಾಗಡೀಲಿ ಒಂಟಿ ಸಲಗ ಓಡಾಟ , ಜನರ ಪೇಚಾಟ..!
ವಾಸ್ತವ ಸ್ಥಿತಿ ಮನವರಿಕೆ ಮಾಡುವಲ್ಲಿ ವಿಫಲ:
ತಮಿಳುನಾಡು ಕಾವೇರಿ ನೀರಿನ ವಿಚಾರದಲ್ಲಿ ವ್ಯವಸ್ಥಿತವಾಗಿ ಕಾನೂನು ಹೋರಾಟ ಮಾಡುತ್ತಿದೆ. ಆದರೆ ನಮ್ಮ ರಾಜ್ಯ ವಾಸ್ತವಾಂಶಗಳನ್ನು ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಸುಪ್ರೀಂ ಕೋರ್ಚ್‌ನಲ್ಲಿ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ. ವಾಸ್ತವ ಸಂಗತಿಗಳನ್ನು ನ್ಯಾಯಾಲಯಕ್ಕೆ ಮನದಟ್ಟುಮಾಡಿಕೊಡುವಲ್ಲಿ ನಮ್ಮ ರಾಜ್ಯದ ಕಾನೂನು ಇಲಾಖೆ ಹಾಗೂ ಸರ್ಕಾರ ವಿಫಲಗೊಂಡಿದೆ ಎಂದು ಟೀಕಿಸಿದರು.
ಕಾವೇರಿ ವಿಚಾರದಲ್ಲಿ ರಾಜ್ಯದ ಎಲ್ಲಾ ಪಕ್ಷಗಳು ಅಧಿಕಾರದಲ್ಲಿದ್ದಾಗಲೂ ಇದೇ ರೀತಿ ಸಮಸ್ಯೆ ಎದುರಾಗಿದೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ದಿಟ್ಟನಿರ್ಧಾರ ತೆಗೆದುಕೊಂಡಿದ್ದನ್ನು ಹೊರತು ಪಡಿಸಿದರೆ, ಉಳಿದೆಲ್ಲಾ ಮುಖ್ಯಮಂತ್ರಿಗಳು ಜಾರಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಿರ್ವಹಣಾ ಮಂಡಳಿ 10 ಸಾವಿರ ಕ್ಯುಸೆಕ್ ಬಿಡಿ ಎಂದರೆ ರಾಜ್ಯ ಸರ್ಕಾರ ಟಿಎಂಸಿ ಗಟ್ಟಲೆ ನೀರು ಬಿಡುತ್ತಿದೆ. ಇವರು ನೀರು ಬಿಟ್ಟು ಸರ್ವಪಕ್ಷ ಸಭೆ ಕರೆಯುವುದು ಯಾವ ಪುರುಷಾರ್ಥಕ್ಕೆ? ಸರ್ವಪಕ್ಷದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವಾದರೂ ಏನು? ಇಂತಹ ಕ್ಷುಲ್ಲಕ ನಿರ್ಣಯಕ್ಕೆ ಸರ್ವಪಕ್ಷ ಸಭೆ ಕರೆಯುವ ಅಗತ್ಯಇತ್ತಾ ಎಂದು ಪ್ರಶ್ನಿಸಿದರು.
ಇ-ಕೆವೈಸಿ ಮಾಡಿಸದಿದ್ದರೆ ರೆಷನ್ ಕಾರ್ಡ್ ರದ್ದು
ರಾಜಕೀಯ ಹಿತಾಸಕ್ತಿ ಕಾಣುತ್ತಿದೆ:
ತಮಿಳುನಾಡಿಗೆ ಏಕಾಏಕಿ ನೀರು ಬಿಟ್ಟಿರುವುದರ ಹಿಂದೆ ಕಾಂಗ್ರೆಸ್ ಪಕ್ಷದ ನೇತೃತ್ವದ ಐಎನ್‌ಡಿಐಎ ಒಕ್ಕೂಟದ ಹಿತಕಾಯುವ ಕೆಲಸ ನಡೆದಿರಲೂ ಬಹುದು. ರಾಜಕಾರಣಿಗಳು ರಾಜಕೀಯ ಹಿತಾಸಕ್ತಿಗಾಗಿ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರನ್ನು ಬಲಿಕೊಟ್ಟಿದ್ದಾರೆ. ರೈತಸಂಘದಿಂದ ತಮಿಳುನಾಡು ಮತ್ತು ರಾಜ್ಯದ ರೈತರು ಸೌಹಾದÜರ್‍ಯುತವಾಗಿ ಕಾವೇರಿ ವಿವಾದ ಬಗೆಹರಿಸಿಕೊಳ್ಳಲು ಮುಂದಾಗಿದ್ದೆವು. ಆದರೆ, ತಮಿಳುನಾಡು ಸರ್ಕಾರ ಇದಕ್ಕೆ ಅವಕಾಶ ನೀಡಲಿಲ್ಲ. ರಾಜ್ಯ ಸರ್ಕಾರ ಈ ವೇಳೆಗಾಗಲೇ ಬರಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಬೇಕಿತ್ತು. ಇದೀಗ ಬರಘೋಷಣೆ ಎನ್ನುತ್ತಿದ್ದಾರೆ. ಇನ್ನು ಕೇಂದ್ರದ ವಿಪತ್ತು ಪರಿಹಾರ ಕಾರ್ಯಕ್ರಮದ ಮಾನದಂಡಗಳೇ ಸರಿಯಿಲ್ಲ. 1970ರ ಮಾನದಂಡವನ್ನು ಮುಂದಿಟ್ಟುಕೊಂಡು ಪರಿಹಾರ ನೀಡುತ್ತಿದ್ದಾರೆ. ಇದು ಸರಿಯಲ್ಲ, ರೈತರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿಗಳು ಕೃಷಿ ಕಾಯಿದೆಯನ್ನು ಹಿಂದಕ್ಕೆ ಪಡೆದಾಗ ಎಂಎಸ್‌ಪಿ ಜಾರಿಗೊಳಿಸುವುದಾಗಿ ಹೇಳಿದ್ದರು. ಆದರೆ ಇನ್ನೂ ಅದು ಜಾರಿಯಾಗಿಲ್ಲ. ಕೊಬ್ಬರಿ ಬೆಲೆ ಕುಸಿತಗೊಂಡಿದ್ದು, ಕೂಡಲೇ ಕೊಬ್ಬರಿಗೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ತಿಳಿಸಿರುವಂತೆ ಸಿ2+50%( ಕ್ಯಾಪ್‌್ಟಅಂಡ್ ಕಲ್ಟಿವೇಷನ್ ಕಾಸ್ಟ್) ಸೂತ್ರದನ್ವಯ ರೈತರಿಗೆ ಬೆಂಬಲ ಬೆಲೆ ನಿಗದಿಯಾಗಬೇಕು ಎಂದು ಚಂದ್ರಶೇಖರ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ, ಕಾರ್ಯಾಧ್ಯಕ್ಷ ಮಾದೇಗೌಡ, ಕಾರ್ಯದರ್ಶಿ ಕೃಷ್ಣಪ್ಪ, ಪದಾಧಿಕಾರಿಗಳಾದ ಜಯಮ್ಮ, ಲೋಕೇಶ್, ಮಂಜುನಾಥ್ ಇತರರಿದ್ದರು.