ಆತ್ಮೀಯ ಬಂಧುಗಳೇ,

ದಿನಾಂಕ-19.2.2019ರ ಬೆಳಗಿನ ಜಾವ ಸುಮಾರು 1.15ರ ಸುಮಾರಿಗೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್. ಎಚ್. 48ರ ಯಡಿಯೂರು-ಕುಣಿಗಲ್ ನಡುವೆ ನಡೆದ ಅಪಘಾತದಲ್ಲಿ ನಾನು ಪ್ರಯಾಣಿಸುತ್ತಿದ್ದ ಕಾರು ಫಾರ್ಚುನರ್ ಕೆ.ಎ-18 ಜೆಡ್ 7299 ಕಾರಿಗೆ ಸಿಲುಕಿ ರಾಮನಗರ ಜಿಲ್ಲೆ ಸೂರನಹಳ್ಳಿಗೆ ಸೇರಿದ ಸುನಿಲ್‌ಗೌಡ ಹಾಗೂ ಶಶಿಕುಮಾರ್ ಎಂಬ ಇಬ್ಬರು ಯುವಕರು ಮೃತಪಟ್ಟಿದ್ದು ದುರದೃಷ್ಟಕರ. ಈ ಘಟನೆ ನನಗೆ ತುಂಬಾ ದುಃಖ ಮತ್ತು ನೋವನ್ನು ಉಂಟುಮಾಡಿದೆ. ಮಕ್ಕಳನ್ನು ಕಳೆದುಕೊಂಡವರ, ತಂದೆ ತಾಯಿಗಳ ದುಃಖ, ಸಂಕಟ ನನಗೆ ಅರ್ಥವಾಗುತ್ತದೆ. ಆದರೆ ಇದೊಂದು ಆಕಸ್ಮಿಕವಾಗಿ ನಡೆದ ದುರ್ಘಟನೆ. ದುರುದ್ದೇಶಪೂರ್ವಕವಾಗಿ ನಡೆಸಿದ್ದಲ್ಲ. 

ಅಪಘಾತ ಪ್ರಕರಣ: ಶಾಸಕ ಸಿ.ಟಿ. ರವಿ ಕಾರು ಚಾಲಕ ಅರೆಸ್ಟ್

ಸಾರ್ವಜನಿಕ ಕ್ಷೇತ್ರದಲ್ಲಿ 1985ರ ಪೂರ್ವದಲ್ಲಿಯೇ ರೈತ ಹೋರಾಟ, ವಿದ್ಯಾರ್ಥಿ ಚಳುವಳಿಗಳನ್ನು ಕಟ್ಟಿ 1995ರಿಂದ ಬಿಜೆಪಿ ಸದಸ್ಯನಾಗಿ ನಿರಂತರ ಹೋರಾಟ, ಜನರ ನಡುವಿನ ಬದುಕಿನ ಕಾರಣದಿಂದ ಜನರ ಪ್ರೀತಿ ಸಂಪಾದಿಸಿ ನಾಲ್ಕು ಬಾರಿ ಶಾಸಕನಾಗಿ ಆರಿಸಿ ಬಂದವನು ನಾನು. ಸಾರ್ವಜನಿಕ ಜೀವನದಲ್ಲಿ ಹಣ ಬಲ. ರಾಜಕೀಯ ಬೆಂಬಲವಿಲ್ಲದೇ ಒಬ್ಬ ಮಧ್ಯಮ ವರ್ಗದ ರೈತ ಕುಟುಂಬದವರು ಮೇಲೆ ಬರುವುದು ಎಷ್ಟು ಕಷ್ಟವೆಂಬುಂದು ತಮಗೆ ತಿಳಿದೇ ಇದೆ.

ಕಾಫಿಯನ್ನೇ ಕುಡಿಯಲ್ಲ, ಇನ್ನು ಡ್ರಿಂಕ್ಸ್ ಹೇಗೆ ಮಾಡ್ತಾರೆ, ಸಿ.ಟಿ.ರವಿಗೆ ಪತ್ನಿ ಫುಲ್ ಮಾರ್ಕ್ಸ್

ದಿನಾಂಕ 18.2.2019ರಂದು ಸಂಜೆ ಶಿವಮೊಗ್ಗದಲ್ಲಿ ನಡೆದ ಯುವ ಸಮಾವೇಶದಲ್ಲಿ ಪಾಲ್ಗೊಂಡು ರಾತ್ರಿ 10 ರ ಸುಮಾರಿಗೆ ಚಿಕ್ಕಮಗಳೂರಿನ ನನ್ನ ಮನೆ ತಲುಪಿ ಮನೆಯಲ್ಲಿಯೇ 10 ಗಂಟೆಗೆ ಲೋಕೋಪಯೋಗಿ ಹಾಗೂ ಕರ್ನಾಟಕ ಒಳಚರಂಡಿ ಮಂಡಳಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ರಾತ್ರಿ ಊಟ ಮುಗಿಸಿ 11:30ಕ್ಕೆ ಚಿಕ್ಕಮಗಳೂರಿನ ನನ್ನ ಮನೆಯಿಂದ ಹೊರಟು ಬೆಳಗ್ಗೆ ಬೆಂಗಳೂರು ಮುಖಾಂತರ ವಿಮಾನದಲ್ಲಿ ಚೆನ್ನೈ ತಲುಪಲು ನನ್ನ ಡ್ರೈವರ್ ಆಕಾಶ್ ಹಾಗೂ ಗನ್‌ಮ್ಯಾನ್ ರಾಜಾನಾಯ್ಕನೊಂದಿಗೆ ಕಾರಿನಲ್ಲಿ ಕುಳಿತ ತಕ್ಷಣ ನಿಧಾನವಾಗಿ ಓಡಿಸು ಎಂದು ಹೇಳಿ ಕಣ್ಣು ಮುಚ್ಚುವಂತೆ ಟೋಪಿಯನ್ನು ಎಳೆದುಕೊಂಡು ಮಲಗಿದೆ. ಹಾಸನದಲ್ಲಿ ಮತ್ತೆ ಎಚ್ಚರವಾದಾಗ 100ಕ್ಕಿಂತ ಹೆಚ್ಚು ಸ್ಟೀಡ್ ಹೋಗಬೇಡ ನೂರರ ಒಳಗೆ ಓಡಿಸು ಎಂದು ಹೇಳಿ ಮತ್ತೆ ಮಲಗಿದವನಿಗ ಎಚ್ಚರವಾಗಿದ್ದೇ ದಡದಡ ಶಬ್ಧದೊಂದಿಗೆ ಕಾರು ನಿಂತಾಗ. ಆಗಲೇ ಏರ್‌ಬ್ಯಾಗ್ ಓಪನ್ ಆಗಿರುವುದು. ಅಪಘಾತವಾಗಿರುವುದು ನನ್ನ ಗಮನಕ್ಕೆ ಬಂತು. ಡೋರ್ ತೆರೆಯಲು ಪ್ರಯತ್ನಿಸಿದಾಗ ತೆಗೆಯಲು ಕಷ್ಟವಾಗಿದ್ದು, ಆನಂತರ ಬಲವಾಗಿ ತಳ್ಳಿದಾಗ ಡೋರ್ ಓಪನ್ ಆಗಿ ಮೈಯೆಲ್ಲಾ ಗುದ್ದಿದ ಅನುಭವ ಆಗಿ ಅಲ್ಲಿಯೇ ಸುಧಾರಿಸಿಕೊಂಡು ನೋಡಿದಾಗ ನನ್ನ ಡ್ರೈವರ್, ಗನ್ ಮ್ಯಾನ್ ನನ್ನನ್ನು ಅಣ್ಣ ಅಣ್ಣ ಏನಾದರೂ ತೊಂದರೆ ಆಗಿದ್ಯಾ ಎಂದು ನನ್ನ ವಿಚಾರಿಸಿದರು. ಅಷ್ಟರಲ್ಲಾಗಲೇ ರಸ್ತೆಯ ಮೇಲೆ ಚೀರಾಟ-ಕೂಗಾಟ ಕೇಳಿ ನೋಡಿದಾಗ ನಾವು ಪಕ್ಕದ ಸರ್ವಿಸ್ ರೋಡ್‌ನಲ್ಲಿ ಬಿದ್ದಿರುವುದು ನಮ್ಮ ಕಾರು ನುಜ್ಜುಗುಜ್ಜಾಗಿರುವುದು ಗಮನಕ್ಕೆ ಬಂತು. ಆ ಕ್ಷಣದವರೆಗೆ ಅಪಘಾತ ಎಲ್ಲಿ ಆಗಿದೆ? ಯಾವುದಕ್ಕೆ ಆಗಿದೆ? ಯಾರಿಗೆ ಆಗಿದೆ? ಎನ್ನುವ ವಿಷಯವೂ ಸಹ ನನಗೆ ಗೊತ್ತಿರಲಿಲ್ಲ. ಹಾಗೆಯೇ ಸಾವರಿಸಿಕೊಂಡು ಹೈವೇ ಮೇಲೆ ಹತ್ತಿದಾಗ ಒಬ್ಬರ ಶವ ನೋಡಿದೆ. ಸ್ವಲ್ಪ ಮೇಲೆ ಬಂದಾಗ ಒಬ್ಬರು ಹೆಸರು ಹಿಡಿದು ಕೂಗುತ್ತಿರುವುದು, ಅಲ್ಲಿಯೇ ಇನ್ನೊಂದು ಶವ ಮತ್ತು ಇನ್ನೊಬ್ಬರ ಕಾಲು ಫ್ರ್ಯಾಕ್ಚರ್ ಆಗಿರುವುದು ಗಮನಕ್ಕೆ ಬಂತು.

ಶಾಸಕ ಸಿ.ಟಿ. ರವಿ ಕಾರು ಅಪಘಾತ : ಇಬ್ಬರು ದುರ್ಮರಣ

ತಕ್ಷಣ ಫೋನ್ ಮಾಡಲು ಮೊಬೈಲ್ ಹುಡುಕಿದಾಗ ಮೊಬೈಲ್ ಜೇಬಿನಲ್ಲಿರಲಿಲ್ಲ, ಗನ್‌ಮ್ಯಾನ್‌ಗೆ ತಕ್ಷಣ ಮೊಬೈಲ್‌ನಿಂದ ಆಂಬ್ಯುಲೆನ್ಸ್‌ಗೆ ಫೋನ್‌ಮಾಡು, ಪೋಲಿಸ್‌ನವರಿಗೆ ವಿಷಯ ತಿಳಿಸಿ ಎಂದು ಹೇಳುತ್ತಾ ಉಳಿದವರನ್ನೆಲ್ಲಾ ಸಮಾಧಾನ ಮಾಡುತ್ತಿರುವಾಗ ಅವರಲ್ಲೇ ಒಬ್ಬನು ಯಾವನೋ ಡ್ರೈವಿಂಗ್ ಮಾಡುತ್ತಿದ್ದುದು? ಇಬ್ಬರನ್ನು ಕೊಂದುಬಿಟ್ಟಲ್ಲಾ? ಎಂದು ಕೂಗಿಕೊಂಡು ಬಂದ. ಆಗ ನನ್ನ ಡ್ರೈವರ್ ಸಮಜಾಯಿಷಿ ನೀಡಲು ಹೋದಾಗ ನಾನು ನನ್ನ ಡ್ರೈವರ್‌ನನ್ನು ಗದರಿಸಿ ಈಗ ಆಂಬ್ಯುಲೆನ್ಸ್ ತರಿಸುವ ಕೆಲಸ ಮಾಡೋಣ ನಂತರ ಉಳಿದದ್ದು. ಯಾರದು ತಪ್ಪು, ಯಾರದು ಸರಿ ಎಂದು ಆನಂತರ ಯೋಚನೆ ಮಾಡೋಣ, ಈಗ ಅದು ಮುಖ್ಯವಲ್ಲಾ ಒಂದು ಹೇಳಿ ತಕ್ಷಣ ಆಂಬ್ಯುಲೆನ್ಸ್‌ಗೆ ಹಾಗೂ ಪೊಲೀಸ್‌ನವರಿಗೆ ಫೋನ್ ಮಾಡಿ ಮಾತನಾಡಿದೆ.

ದೂರಿನಲ್ಲಿ ಸಿ.ಟಿ. ರವಿ ಹೆಸರಿಲ್ಲ; ಚಾಲಕನ ವಿರುದ್ಧ ಮಾತ್ರ FIR!

ಅನಂತರ ಒಬ್ಬರು ಪೊಲೀಸ್ ಬಂದರು. ನಂತರ ಸಬ್ ಇನ್‌ಪೆಕ್ಟರ್ ಪುಟ್ಟೇಗೌಡರು ಬಂದರು. ಅನಂತರ ಹೈವೇ ಪ್ಯಾಟ್ರೋಲ್, 2 ಆಂಬುಲೆನ್ಸ್ ಬಂದ ನಂತರ ನಾನು ಗಾಯಾಳುಗಳನ್ನು ಆ್ಯಂಬುಲೆನ್ಸ್‌ನಲ್ಲಿ ಕಳುಹಿಸಿ, ಶವಗಳನ್ನು ಶಿಫ್ಟ್ ಮಾಡಿದ ನಂತರ ಸಬ್‌ಇನ್ಸ್‌ಪೆಕ್ಟರ್ ಪುಟ್ಟೇಗೌಡರ ಹತ್ತಿರ ಮಾತನಾಡಿ ಆಂಬುಲೆನ್ಸ್‌ನ ಶಿವರಾಮ್‌ರವರ ಜೊತೆಗೆ ಮಾತನಾಡಿದ ನಂತರ ಸುಮಾರು 2.40ರ ನಂತರ ಮೂಡಿಗೆರೆಯಿಂದ ಬೆಂಗಳೂರಿಗೆ ಬರುತ್ತಿದ್ದವರ ಜೊತೆ ಅವರ ಕಾರಿನಲ್ಲಿ ನೆಲಮಂಗಲದವರೆಗೂ ಬಂದೆ. ನೆಲಮಂಗಲದ ಬಳಿ ನಾಗಮಂಗಲದ ಕಿಶನ್ ಕಾರ್ ತೆಗೆದುಕೊಂಡು ಬಂದರು. ಅವರ ಜೊತೆಯಲ್ಲಿ ವಿಕ್ರಮ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ರೆ ಪಡೆದು. ಗನ್‌ಮ್ಯಾನ್ ಹಾಗೂ ಡ್ರೈವರ್ ಅವರಿಗೂ ಚಿಕಿತ್ಸೆ ಕೊಡಿಸಿ ನಂತರ ನನ್ನ ಫ್ಲಾಟಿಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ.

ಬೆಳಗ್ಗೆ 9 ಗಂಟೆಯ ಸಮಯದಲ್ಲಿ ಟಿ.ವಿ.ಯಲ್ಲಿ ಸಿ.ಟಿ.ರವಿ ಕುಡಿದಿದ್ದ. ಅವನೇ ಗಾಡಿ ಓಡಿಸುತ್ತಿದ್ದ. ಚೆನ್ನೈಗೆ ಪರಾರಿ. ಸಿ.ಟಿ.ರವಿ ಬಂಧಿಸಿ, ಜೊತೆಗೆ ಆಂಟಿ ಹಾಲ್ಕೋಹಾಲಿಕ್ ಟ್ಯಾಬ್ಲೆಟ್ ಸಿಟಿ ರವಿಯ ಗಾಡಿಯಲ್ಲಿ ಪತ್ತೆ. ಆಸ್ಪತ್ರೆಗೆ ಸೇರಿಸಲಿಲ್ಲ. ಐದು ನಿಮಿಷದಲ್ಲಿ ನಾಪತ್ತೆ, ನಾಚಿಕೆಗೇಡಿನ ಸಿ.ಟಿ.ರವಿ, ಇಂತಹ ನಾಯಕರು ಬೇಕೆ, ಇವನೆಂಥಾ ಜನ ನಾಯಕ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸುತ್ತಿದ್ದುದು ನೋಡಿ ತುಂಬಾ ಬೇಸರವಾಯಿತು. ನಾನಿದ್ದ ವಾಹನಕ್ಕೆ ಆದ ಹಾನಿ ಗಮನಿಸಿದಾಗ ನಾವು ಬದುಕಿದ್ದೇ ಒಂದು ಪುಣ್ಯ, ಇಂತಹ ಆಘಾತದ ನಡುವೆಯೂ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಯಾರು ಕುಡಿದಿದ್ದರು? ಯಾಕೆ ಸೇತುವೆ ಮೇಲೆ ಗಾಡಿ ನಿಲ್ಲಿಸಿದ್ದರು? ಯಾರದ್ದು ತಪ್ಪು ಈ ಯೋಚನೆಯನ್ನೇ ನಾನು ಮಾಡಲಿಲ್ಲ, ಅದು ನನ್ನ ಕೆಲಸವೂ ಅಲ್ಲ. ಆದರೆ ಕೆಲವು ಮಾಧ್ಯಮಗಳು ಜರ್ನಲಿಸಂಗಿಂತ ಪೊಲೀಸಿಂಗ್ ಮಾಡಿ ದವು. ಅದೂ ಪೂರ್ವಾಗ್ರಹ ಪೀಡಿತರಾಗಿ. ಇದು ನನಗೆ ಬೇಸರ ಹಾಗೂ ನೋವುಂಟು ಮಾಡಿತು.

ನನ್ನ ಸಾರ್ವಜನಿಕ ಜೀವನದಲ್ಲಿ ಏಂದಾದರೂ ಕುಡಿದು ಗಲಾಟೆ ಮಾಡಿದ ಯಾವುದಾದರೂ ಪ್ರಕರಣ ಇದೆಯಾ? ಅಥವಾ ಎಂದಾದರೂ ಹೊಣೆಗೇಡಿಯಾಗಿ ವರ್ತಿಸಿದ್ದೇನಾ? ಇಂದು ತಾಂತ್ರಿಕತೆ ಮುಂದುವರಿದಿದೆ. ಟೋಲ್‌ಗೇಟ್‌ಗಳಲ್ಲಿ ಸಿ.ಸಿ. ಟಿವಿ ಪುಟೆಜ್ ನೋಡಿದರೆ ಯಾರು ಡ್ರೈವಿಂಗ್ ಮಾಡುತ್ತಿದ್ದರೆಂದು ಗೊತ್ತಾಗುತ್ತದೆ. ಮೊಬೈಲ್ ಟವರ್ ಲೊಕೇಶನ್ ಹಾಗೂ ಕಾಲ್ ಡಿಟೇಲ್ಸ್ ತೆಗೆದುಕೊಂಡರೆ ಎಷ್ಟು ಸಮಯ ಆ ಜಾಗದಲ್ಲಿ ಇದ್ದೆ. ಯಾರು ಯಾರಿಗೆ ಕರೆ ಮಾಡಿದೆ ಎಂಬ ಮಾಹಿತಿ ಸಿಗುತ್ತದೆ. ಆದರೆ ಇದಾವುದನ್ನೂ ಮಾಡದೇ ಒಬ್ಬರ ವ್ಯಕ್ತಿತ್ವಕ್ಕೆ ಮಸಿ ಬಳಿಯುವದರಿಂದ ಸಿಗುವುದಾದರೂ ಏನು? ಮಕ್ಕಳನ್ನು ಕಳೆದುಕೊಂಡ ಮನೆಯವರ ಸಂಕಟ ಸಹಜವಾದದ್ದು. ಅವರು ಏನಾದರೂ ಮಾತನಾಡಿದರೆ ಅದರಲ್ಲಿ ತಪ್ಪು ಹುಡುಕುವ ಅವಶ್ಯಕತೆ ಇಲ್ಲ. ಆದರೆ ಕೆಲವು ಮಾಧ್ಯಮಗಳು ವರ್ತಿಸಿದ ರೀತಿಯಾವ ಬಗೆಯ ಸಂಕಟದ್ದೆಂದು ನನಗೆ ಅರ್ಥವಾಗುತ್ತಿಲ್ಲ.

ಮಾನವೀಯತೆ ಮರೆತ್ರಾ ಸಿ.ಟಿ. ರವಿ? ಗಾಯಾಳು ಆರೋಪವೇನು?

ಈ ಸ್ಥಾನಕ್ಕೆ ಬರಲು ನಿರಂತರವಾಗಿ ಹತ್ತಾರು ವರ್ಷ ತಪಸ್ವಿಯಂತೆ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಸುಳ್ಳು ಅಪಪ್ರಚಾರ ಮಾಡಲು ಮನಸ್ಸಾದರೂ ಹೇಗೆ ಬಂತು? ನನ್ನ ವೇದನೆ ನಿಮಗೆ ಅರ್ಥವಾಗದಿರಬಹುದು. ನನ್ನಂತೆ ಇನ್ಯಾರಿಗೂ ಅಪಪ್ರಚಾರ ಮಾಡಬೇಡಿ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದರಿಂದ ನಿಮಗೆ ಸಿಗುವುದಾದರೂ ಏನು? ಯಾವತ್ತೂ ನಾನು ಯಾರಿಗಾದರೂ ಅಸಭ್ಯವಾಗಿ ನಡೆದುಕೊಂಡಿರುವುದನ್ನು ನೀವು ಎಲ್ಲಿಯಾದರೂ ನೋಡಿದ್ದೀರಾ?

ಇಂತಹ ಸಮಯದಲ್ಲಿ ನನ್ನ ಕುರಿತು ಕೆಲವುಮಾಧ್ಯಮಗಳು ಸಾರ್ವಜನಿಕವಾಗಿ ವಾಸ್ತವಿಕತೆಯನ್ನು ಬಿಂಬಿಸುವ ಕೆಲಸ ಮಾಡಿದವು. ಬೇರೆ ಪಕ್ಷದಲ್ಲಿದ್ದರೂ ಸಹ ವೈಯಕ್ತಿಕವಾಗಿ ನನ್ನ ಬದುಕನ್ನು ಹತ್ತಿರದಿಂದ ನೋಡಿದ್ದಂತಹ ಆನಂದಸಿಂಗ್‌ರವರು, ಯು.ಟಿ. ಖಾದರ್‌ರವರು. ನಮ್ಮದೇ ಪಕ್ಷದ ಸುರೇಶ್‌ಕುಮಾರ್‌ರವರು ಮೊದಲಾದವರು ಸಾರ್ವಜನಿಕವಾಗಿಯೇ ಸಿ.ಟಿ. ರವಿ ಕುಡಿಯುವುದಿಲ್ಲ ಹಾಗೂ ಸಾರ್ವಜನಿಕವಾಗಿ ಡ್ರೈವಿಂಗ್ ಮಾಡಿದ್ದನ್ನು ನಾವು ನೋಡಿಲ್ಲವೆಂದು ಸಮರ್ಥಿಸಿದರು. ಇದಲ್ಲದೇ ನೂರಾರು ಜನ ವೈಯಕ್ತಿಕವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದರು. ಕೆಲವರು ಸುಳ್ಳು ಅಪಪ್ರಚಾರ ಮಾಡುತ್ತಿದ್ದರೆ, ಕೆಲವರು ಸತ್ಯ ಸಂಗತಿಯನ್ನು ತಿಳಿಸಿ ನನಗೆ ನೈತಿಕ ಬೆಂಬಲವನ್ನು ನೀಡಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ.

ನನಗೆ ಪ್ರಾಣ ವಾಪಾಸ್ ತರುವ ಶಕ್ತಿ ಇಲ್ಲ. ಪ್ರಾಣ ಹೋಗಿರುವ ಕುಟುಂಬಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳಿ ಬರುವ ಉದ್ದೇಶ ನನ್ನದು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ಪಾರ್ಥಿಸುವೆ. ಈಗಾಗಲೇ ಈ ಕುಟುಂಬಗಳ ಸಂಬಂಧಿಕರನ್ನು, ಸ್ನೇಹಿತರನ್ನು ಸಂಪರ್ಕಿಸಿದ್ದು. ನಾವು ತಿಳಿಸಿದ ನಂತರ ಭೇಟಿ ನೀಡುವಂತೆ ಅವರು ಹೇಳಿದ್ದಾರೆ. ಅದೇರೀತಿ ಭೇಟಿ ನೀಡಿ ಕುಟುಂಬಕ್ಕೆ ಸ್ಪಂದಿಸುತ್ತೇನೆ. ಆ ಮನ:ಸ್ಥಿತಿಯನ್ನು ಮುಂದುವರಿಸಿಕೊಂಡು ಇದೊಂದು ಪುನರ್ಜನ್ಮ, ಒಳ್ಳೆಯ ಕೆಲಸ ಮಾಡಲು ಭಗವಂತ ನನ್ನನ್ನು ಉಳಿಸಿದ್ದಾನೆಂದು ಭಾವಿಸಿ ಮುಂದಿನ ಜೀವನ ನಡೆಸುತ್ತೇನೆ. ನನ್ನ ಮೇಲೆ ಅಪಪ್ರಚಾರ ಮಾಡಿ ವ್ಯಕ್ತಿತ್ವಹರಣ ಮಾಡಿದಂತೆ ಇನ್ನೊಬ್ಬರಿಗೆ ಮಾಡಬಾರದೆಂದು ವಿನಂತಿಸುತ್ತೇನೆ. ಸತ್ಯ ವನ್ನು ತಿಳಿದು ಆ ಸತ್ಯದ ಆಧಾರದಲ್ಲಿ ಪೊಲೀಸಿಂಗ್ ಮಾಡಿ ಪ್ರಚಾರ ಮಾಡಿದರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಕಪೋಲಕಲ್ಪಿತ ಸುಳ್ಳು ಪ್ರಚಾರ ಮಾಡುವುದರಿಂದ ಹತ್ತಾರು ವರ್ಷಗಳ ಕಾಲ ಪರಿಶ್ರಮಪಟ್ಟು ಕಟ್ಟಿಕೊಂಡು ಬಂದ ವ್ಯಕ್ತಿತ್ವಕ್ಕೆ ಡ್ಯಾಮೇಜ್ ಆಗುತ್ತದೆ. ಇದರಿಂದ ಸಾರ್ವಜನಿಕವಾಗಿ ಆಗುವ ಲಾಭವಾದರೂ ಏನು? ಇದನ್ನು ಗಮನಿಸಿ ವ್ಯವಹರಿಸಬೇಕೆಂದು ವಿನಂತಿ. ಇಷ್ಟಾದರೂ ಸಹ ಅಪಘಾತ ವಾದಾಗ ಒಬ್ಬ ಮಾನವ ಸಹಜ ಸಂವೇದನೆಯೊಂದಿಗೆ ಸ್ಪಂದಿಸಿದ್ದೇನೆಂದು ನಿಮಗೆ ತಿಳಿಸಬಯಸುತ್ತೇನೆ.

‘ಆಗದವರು ಬಿದ್ದರೆ ಆಳಿಗೊಂದು ಕಲ್ಲು’ ಎಂಬ ನಮ್ಮ ಹಳ್ಳಿಗರ ನಾಣ್ನುಡಿಯನ್ನು ನಿಜ ಮಾಡಿದ ನಮ್ಮ ಕೆಲವು ಮಾಧ್ಯಮ ಮಿತ್ರರಿಗೊಂದು ಭಿನ್ನಹ. ಜನಪ್ರೀತಿ ಮತ್ತು ಪರಿಶ್ರಮದಿಂದ ಮೇಲೇರಿದವರನ್ನು ಸಮಯ ಸಂದರ್ಭ ಸಿಕ್ಕಾಗ ಪ್ರಪಾತಕ್ಕೆ ತಳ್ಳುತ್ತೇವೆಂಬ ಹುನ್ನಾರ ಯಾವತ್ತೂ ಫಲಿಸುವುದಿಲ್ಲ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕೆಂಬ ನಮ್ಮ ಜನಪದದ ಅನುಭವದ ಮಾತು ಮಾಧ್ಯಮ ಬಂಧುಗಳಿಗೆ ಕರ್ತವ್ಯದ ಮೂಲಸೂತ್ರವಾಗಲಿ ಎಂದು ಬಯಸುತ್ತೇನೆ.

ಧನ್ಯವಾದಗಳೊಂದಿಗೆ,

ಸಿ.ಟಿ.ರವಿ