ರಾಜ್ಯದಲ್ಲಿ ಪದೇ ಪದೇ ನಡೆಯುತ್ತಿರುವ ಗೋಹತ್ಯೆ ಮತ್ತು ಕೆಚ್ಚಲು ಕತ್ತರಿಸುವ ಘಟನೆಗಳು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿವೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ. ನೆಲಮಂಗಲದಲ್ಲಿ ಎರಡು ಹಳ್ಳಿಕಾರ್ ಹೋರಿಗಳ ಕತ್ತು ಕೊಯ್ದ ಘಟನೆ ಬೆಳಕಿಗೆ ಬಂದಿದೆ.

ವಿಧಾನ ಪರಿಷತ್ತು: ರಾಜ್ಯದ ವಿವಿಧೆಡೆ ಗೋವುಗಳ ಹತ್ಯೆ, ಕೆಚ್ಚಲು ಕತ್ತರಿಸುವಂತಹ ಅಮಾನುಷ ಕೃತ್ಯಗಳು ನಡೆಯುತ್ತಿದ್ದು ಬಹುಸಂಖ್ಯಾತ ಹಿಂದುಗಳ ಭಾವನೆ ಕೆರಳಿಸುವ ಹುನ್ನಾರ ನಡೆಯುತ್ತಿದೆ. ರಾಜ್ಯ ಸರ್ಕಾರ ಇಂತಹ ಪ್ರಕರಣ ಗಂಭೀರವಾಗಿ ಪರಿಗಣಿಸಿ ವಿಕೃತಿ ಮೆರೆಯುವವರನ್ನು ಬಂಧಿಸಿ, ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.

ಸೋಮವಾರ (ಆ.11) ಕನ್ನಡಪ್ರಭದಲ್ಲಿ ‘ಮತ್ತೆ ಗೋವು ತಲೆ ಕತ್ತರಿಸಿ ದುಷ್ಕರ್ಮಿಗಳಿಂದ ವಿಕೃತಿ’ ಶೀರ್ಷಿಕೆಯಲ್ಲಿ ಪ್ರಕಟಗೊಂಡಿದ್ದ ವರದಿಯನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಅವರು, ಸರ್ಕಾರದ ಗಮನ ಸೆಳೆದರು.

ರಾಜ್ಯದ ವಿವಿಧೆಡೆ ಹಸುಗಳ ಹತ್ಯೆ, ಕತ್ತು ಕೊಯ್ಯುವುದು, ಕೆಚ್ಚಲು ಕತ್ತರಿಸುವಂಥ ಅಮಾನುಷ ಕೃತ್ಯಗಳು ಮುಂದುವರೆದಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದಲ್ಲಿ ಎರಡು ಹಳ್ಳಿಕಾರ್ ನಾಟಿ ಹೋರಿಗಳ ಕತ್ತು ಕೊಯ್ದಿರುವ ದುಷ್ಕೃತ್ಯ ಬೆಳಕಿಗೆ ಬಂದಿದೆ. ಅರಳಸಂದ್ರದ ಬಳಿ ನಿರ್ಮಿಸಿರುವ ಸೇತುವೆ ಮೇಲೆ ಕತ್ತು ಕೊಯ್ದ ಸ್ಥಿತಿಯಲ್ಲಿ ಎರಡು ಹಳ್ಳಿಕಾರ್ ಜಾತಿಯ ನಾಟಿ ಹೋರಿಗಳು ಪತ್ತೆಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪದೇ ಪದೆ ಈ ರೀತಿ ಗೋವುಗಳ ಮೇಲೆ ವಿಕೃತಿ ಮೆರೆಯುವ ಘಟನೆಗಳು ನಡೆಯುತ್ತಲೇ ಇವೆ. ಬೆಂಗಳೂರು, ಚಿಕ್ಕಮಗಳೂರು ಸೇರಿ ರಾಜ್ಯದ ಹಲವು ಕಡೆ ಹಸುವಿನ ಕೆಚ್ಚಲು ಕೊಯ್ದ ಘಟನೆಗಳು ಮಾಸುವ ಮುನ್ನವೇ ಮತ್ತೆ ಈ ಪ್ರಕರಣ ನಡೆದಿರುವುದು ಬಹುಸಂಖ್ಯಾತ ಹಿಂದುಗಳ ಭಾವನೆಗಳನ್ನು ಕೆರಳಿಸುವ ಹುನ್ನಾರವಾಗಿದೆ. ಗೋವುಗಳ ಮೇಲೆ ವಿಕೃತಿ ಮೆರೆಯುವವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಳಸಂದ್ರದಲ್ಲಿ ಹೋರಿಗಳ ರುಂಡ, ಶವ ಪತ್ತೆಯಾಗಿರುವ ಕುರಿತು ಸೋಮವಾರ ಕನ್ನಡಪ್ರಭ ಮುಖಪುಟದಲ್ಲಿ ವರದಿ ಪ್ರಕಟಿಸಿತ್ತು.

ಮತ್ತೆ ಗರ್ಭಿಣಿ ಹಸು ಕತ್ತು ಕಡಿದು ವಿಕೃತಿ

ತೀರ್ಥಹಳ್ಳಿ: ರಾಜ್ಯದ ಗೋವುಗಳ ಮೇಲಿನ ವಿಕೃತಿ ಮುಂದುವರೆದಿದ್ದು, ಇದೀಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಚಂದವಳ್ಳಿ ಗ್ರಾಮದಲ್ಲಿ ತೋಟಕ್ಕೆ ಮೇಯಲು ಬಂದಿದ್ದ ಗರ್ಭಿಣಿ ಹಸುವಿನ ಕುತ್ತಿಗೆಯನ್ನೇ ಕತ್ತಿಯಿಂದ ಕಡಿದ ದುಷ್ಕೃತ್ಯ ನಡೆದಿದೆ. ದಾಳಿಯ ಏಟಿಗೆ ಹಸುವಿನ ಕುತ್ತಿಗೆಯ ಮೇಲ್ಭಾಗದ ಸುಮಾರು ಮೂರು ಇಂಚು ಆಳದಲ್ಲಿ ಮಾಂಸದ ತುಂಡು ಹಾರಿ ಹೋಗಿದ್ದು ಕುತ್ತಿಗೆ ಎಲುಬು ಕಾಣುವಂತಿದೆ. ಇದನ್ನು ನೋಡಿದ ಗ್ರಾಮಸ್ಥರು ಹಸುವಿನ ಮಾಲೀಕರಿಗೆ ತಿಳಿಸಿದ್ದಾರೆ. ಕೂಡಲೇ ಪಶು ವೈದ್ಯರನ್ನು ಚಿಕಿತ್ಸೆ ಕೊಡಿಸಲಾಗಿದೆ.