2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಸಿಬಿ ಪಾರ್ಟಿ ಮೂಲಕ ಚುನಾವಣೆಗೆ ಸ್ಪರ್ಧಿಸಿ 143 ಸ್ಥಾನಗಳ ಬಹುಮತದೊಂದಿಗೆ ನಾನೇ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.

ಅಥಣಿ (ಡಿ.15): 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಸಿಬಿ ಪಾರ್ಟಿ ಮೂಲಕ ಚುನಾವಣೆಗೆ ಸ್ಪರ್ಧಿಸಿ 143 ಸ್ಥಾನಗಳ ಬಹುಮತದೊಂದಿಗೆ ನಾನೇ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು. ಅಥಣಿಯ ಭೋಜರಾಜ ಕ್ರೀಡಾಂಗಣದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಬೇಕಾದರೆ ಛತ್ರಪತಿ ಶಿವಾಜಿ ಮಹಾರಾಜ ಮತ್ತು ರಾಣಾ ಪ್ರತಾಪ್ ಸಿಂಹರಂತಹ ಆಡಳಿತ ಅನಿವಾರ್ಯವಾಗಿದೆ.

ಇರುವ ಆಡಳಿತ ಪಕ್ಷವೇ ಇರಲಿ, ವಿರೋಧ ಪಕ್ಷವೇ ಇರಲಿ, ನಾನು ಇರುವುದನ್ನು ಸತ್ಯ ಹೇಳುತ್ತೇನೆ. ಹೀಗಾಗಿ ನಾನು ವಿವಾದಾತ್ಮಕ ಹೇಳಿಕೆ ನೀಡುತ್ತೇನೆಂದು ಬಿಜೆಪಿಯವರು ಉಚ್ಛಾಟನೆ ಮಾಡಿದ್ದಾರೆ. ಹೀಗಾಗಿ ನಾನು ಬರುವ 2028ರ ವಿಧಾನಸಭಾ ಚುನಾವಣೆಗೆ ಜೆಸಿಬಿ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ. 143 ಸ್ಥಾನಗಳ ಬೆಂಬಲದೊಂದಿಗೆ 11 ಜೆಸಿಬಿಗಳನ್ನು ವಿಧಾನಸೌಧದ ಮುಂದೆ ನಿಲ್ಲಿಸಿ ನಾನೇ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದರು.

ಪುತ್ಥಳಿ ಅನಾವರಣ ಐತಿಹಾಸಿಕ ಕಾರ್ಯಕ್ರಮ. ಶಿವಾಜಿ ಪುತ್ಥಳಿ ಅನಾವರಣಗೊಳಿಸಿದರೆ ಸಾಲದು ಶಿವಾಜಿಯವರ ಆದರ್ಶಗಳನ್ನ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ನಾನು ಕೂಡ ವಿಜಯಪುರದಲ್ಲಿ ಶಿವಾಜಿ ಮೂರ್ತಿ, ಮಹಾರಾಣಾ ಪ್ರತಾಪ್ ಸಿಂಗ್ ಸೇರಿದಂತೆ ಅನೇಕ ಮಹಾನ್ ನಾಯಕರ ಪುತ್ತಳಿಗಳನ್ನು ಪ್ರತಿಷ್ಠಾಪಿಸಿ ಅನೇಕ ರಸ್ತೆಗಳಿಗೆ ಮಹಾತ್ಮರ ಹೆಸರು ನಾಮಕರಣ ಮಾಡಿದ್ದೇನೆ ಎಂದು ಹೇಳಿದರು.

ಜಾರಕಿಹೊಳಿ ಭೇಟಿಯಾದ ಯತ್ನಾಳ

ಬಿಜೆಪಿ ಪಕ್ಷದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಶಾಸಕ ಕುಮಾರ ಬಂಗಾರಪ್ಪ ಇಬ್ಬರು ಗೋಕಾಕದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾದರು. ಮಾಜಿ ಶಾಸಕ ಕುಮಾರ ಬಂಗಾರಪ್ಪ ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರು ತಾಲೂಕಿನ ಅಂಕಲಗಿ ಪಟ್ಟಣಕ್ಕೆ ತೆರಳಿದ್ದರು. ನಂತರ ಗೋಕಾಕನ ಶಾಸಕ ರಮೇಶ ಜಾರಕಿಹೊಳಿ ಅವರ ಕಚೇರಿಗೆ ಭೇಟಿದ್ದರು. ಈ ವೇಳೆ ಅವರನ್ನು ಶಾಸಕ ರಮೇಶ ಜಾರಕಿಹೊಳಿ, ಡಿಸಿಸಿ ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಸತ್ಕರಿಸಿದರು. ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ಇಬ್ಬರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದು, ನಂತರ ಒಂದೇ ವಾಹನದಲ್ಲಿ ಗೋಕಾಕನಿಂದ ಮೂವರು ಅಥಣಿಗೆ ತೆರಳಿರುವ ಮಾಹಿತಿ ಲಭ್ಯವಾಗಿದೆ.