ಗ್ರಾಪಂ ಗುತ್ತಿಗೆ ನೌಕರರಿಗೂ ಕೋವಿಡ್ ಪರಿಹಾರ: ಸಚಿವ ಈಶ್ವರಪ್ಪ
* 30 ಲಕ್ಷ ರು. ಪರಿಹಾರ ನೀಡಲಾಗುತ್ತೆ
* ಈವರೆಗೆ 186 ಮೃತಪಟ್ಟಿರುವ ಪ್ರಕರಣಗಳು ವರದಿ
* ನರೇಗಾದಡಿ 13 ಕೋಟಿ ಮಾನವ ದಿನಗಳ ಸೃಜನೆ
ಬೆಂಗಳೂರು(ಜು.02): ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರನ್ನು ಕಾಯಂ ಮಾಡುವುದು ಕಷ್ಟ. ಆದರೆ, ಒಂದು ವೇಳೆ ಗುತ್ತಿಗೆ ನೌಕರರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದರೆ ಅವರ ಕುಟುಂಬದವರಿಗೆ 30 ಲಕ್ಷ ರು. ಪರಿಹಾರ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಇಲಾಖೆಯ ಯೋಜನೆಗಳಲ್ಲಿ ಸಾಧಿಸಿರುವ ಪ್ರಗತಿ, ಸ್ವಚ್ಛ ಭಾರತ್ ಅಭಿಯಾನಕ್ಕೆ ಸಂಬಂಧಿಸಿದ ಕರ್ನಾಟಕ ರಾಜ್ಯ ಗ್ರಾಮೀಣ ನೈರ್ಮಲ್ಯ ನೀತಿ, ಕಾರ್ಯತಂತ್ರ ಮಾದರಿಗಳ ಉಪ ವಿಧಿಗಳು ಮತ್ತು ಸ್ವಚ್ಛ ಸಂಕೀರ್ಣ ಸ್ವಚ್ಛತೆಯ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.
ಕಾಯಂ ಆಗಿರುವ ಮತ್ತು ಆಗದಿರುವ ನೌಕರರಿಗೂ ಕೋವಿಡ್ ಪರಿಹಾರ ಸಿಗಲಿದ್ದು, ಈವರೆಗೆ 186 ಮೃತಪಟ್ಟಿರುವ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತ್ ಗ್ರಾಮ ಮಟ್ಟದ ಕಾರ್ಯಪಡೆಯಲ್ಲದೆ 50 ಮನೆಗಳಿಗೆ ಒಂದು ಸಮಿತಿ ರಚನೆ ಮಾಡಿದ್ದನ್ನು ಕೇಂದ್ರ ಸರ್ಕಾರ ಅಭಿನಂದಿಸಿದೆ. ಜಲಜೀವನ್ ಮಿಷನ್‌ನಡಿ ಶುದ್ಧ ಕುಡಿಯುವ ನೀರಿನ ಏಳು ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
2 ಸಾವಿರ ಸಹಾಯಧನಕ್ಕೆ 500 ರಿಂದ ಸಾವಿರ ಖರ್ಚು..!
ನರೇಗಾದಡಿ 13 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಲಾಗಿದ್ದು, ಈಗಾಗಲೇ 4.40 ಕೋಟಿ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. 9.10 ಲಕ್ಷ ಕಾಮಗಾರಿಗಳು ಪ್ರಾರಂಭವಾಗಿವೆ. ಜಲಜೀವನ್ ಮಿಷನ್‌ನಡಿಯಲ್ಲಿ ಪ್ರತಿಯೊಂದು ಮನೆಗೂ ನಳ ಸಂಪರ್ಕ ನೀಡಲಾಗುತ್ತಿದೆ. ಪ್ರತಿ ದಿನ ತಲಾ 55 ಲೀಟರ್ ನೀರು ಪೂರೈಸಲಾಗುತ್ತಿದೆ. ಕೆಲವೆಡೆ ಪೈಪ್‌ಲೈನ್ ಹಾಕಲಾಗಿದ್ದರೂ ಕೆಲವು ಮನೆಗಳಿಗೆ ನಳದ ಸಂಪರ್ಕ ಇಲ್ಲ. ಇದರ ಕಾಮಗಾರಿ ಮುಂದುವರೆಯಲಿದೆ. ನಳದ ನೀರಿನ ಸಂಪರ್ಕಕ್ಕೆ ಯಾವುದೇ ದರವನ್ನು ನಿಗದಿ ಮಾಡಿಲ್ಲ. ಆದರೆ ಗ್ರಾಮ ಪಂಚಾಯ್ತಿಗಳೇ ನೀರಿನ ದರ ನಿಗದಿ ಮಾಡಲಿದೆ. ಪ್ರತಿ ತಿಂಗಳಿಗೆ 100 ರು. ನಿಗದಿಯಾಗಿದ್ದರೂ ಕೆಲವೆಡೆ ಆ ದರವನ್ನು ನೀಡಲಾಗುತ್ತಿಲ್ಲ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಒತ್ತು ಕೊಟ್ಟಿದ್ದು, ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಿದೆ. 1800 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಕೆಲಸ ಮುಗಿಯುತ್ತಿದ್ದು, ಕೆಲವೆಡೆ ತ್ಯಾಜ್ಯ ವಿಲೇವಾರಿಗೆ ಸ್ಥಳ ಸಿಗುತ್ತಿಲ್ಲ. 22 ಲಕ್ಷ ನರೇಗಾ ಕೂಲಿ ಕಾರ್ಮಿಕರಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ನೀಡಲಾಗಿದೆ. ಜಾಬ್‌ಕಾರ್ಡ್ ಹೊಂದಿರುವ ಖಾತೆಗಳಿಗೆ ನೇರವಾಗಿ ನರೇಗಾ ಕಾಮಗಾರಿಯ ಹಣ ಸಂದಾಯವಾಗಲಿದೆ ಎಂದು ವಿವರಿಸಿದರು.
ಜತೆಗೆ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮೀಣ ಜನರ ಕುಂದು ಕೊರತೆಗಳು, ಸಮಸ್ಯೆ, ಮನವಿ ಹಾಗೂ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ನೀಡಲು ಪರಿಹಾರ ಎಂಬ ಸಹಾಯವಾಣಿಯನ್ನು ಹಿಂದೆಯೇ (ಮೊ.ಸಂ. 94809 85555) ಅನುಷ್ಠಾನಗೊಳಿಸಲಾಗಿದೆ. ಅನೇಕ ದೂರು, ಮನವಿಗಳೂ ಬಂದಿವೆ ಎಂದು ಇದೇ ವೇಳೆ ಈಶ್ವರಪ್ಪ ಮಾಹಿತಿ ನೀಡಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಇತರೆ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.