* ಸರ್ಕಾರದ ಪ್ಯಾಕೇಜ್‌ ಬರುವ ಮುನ್ನ, ಅರ್ಧ ಹಣ ಪೋಲು* 100ರಿಂದ 500 ಟ್ಯಾಕ್ಸ್‌ ಪಡೆದು ಪಾವತಿ * ದಾಖಲೆ ಸಿದ್ಧ ಮಾಡಿಕೊಳ್ಳಲು ಸಾಕಷ್ಟು ಸಮಸ್ಯೆ 

ಗದಗ(ಜೂ.21): ಕೊರೋನಾ ಸಂಕಷ್ಟದಿಂದಾಗಿ ಶ್ರಮಿಕ ವರ್ಗ ತತ್ತರಿಸಿದೆ. ಅವರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಸರ್ಕಾರ 2 ಸಾವಿರ ರುಪಾಯಿ ಪ್ಯಾಕೇಜ್‌ ಮಾದರಿ ಪರಿಹಾರವನ್ನು ನೀಡಿದೆ. ಆದರೆ ಅದನ್ನು ಪಡೆಯಬೇಕಾದಲ್ಲಿ ಶ್ರಮಿಕರು ಮೊದಲೇ 500ರಿಂದ 1 ಸಾವಿರ ರುಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಕ್ಷೌರಿಕರು, ಅರ್ಚಕರು, ಅಗಸರು, ಕಲಾವಿದರು, ನೇಕಾರರ, ಗೃಹ ಕಾರ್ಮಿಕರು, ಟೈಲರ್‌, ಮೆಕ್ಯಾನಿಕ್‌, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ರಾಟಿ ಹೊಲಿಯುವವರು ಸೇರಿದಂತೆ ಹಲವಾರು ದಿನ ನಿತ್ಯದ ದುಡಿಮೆ ಮೇಲೆ ಬದುಕುವವರಿಗೆ ದೊಡ್ಡ ಸಂಕಷ್ಟ ಎದುರಾಗಿದ್ದು, ಲಾಕ್‌ಡೌನ್‌ನಿಂದ ಅವರೆಲ್ಲಾ ಮನೆಯಲ್ಲಿಯೇ ಕೆಲಸವಿಲ್ಲದೇ ಕುಳಿತಿದ್ದರು.

ಓರ್ವರು ಅರ್ಹರು

18-65 ವಯೋಮಾನದವರಿಗೆ, ಬಿಪಿಎಲ್‌ ಪಡಿತರ ಕಾರ್ಡ್‌ ಹೊಂದಿರುವ ಕುಟುಂಬದ ಓರ್ವ ಫಲಾನುಭವಿ ಮಾತ್ರ ಈ ಯೋಜನೆಗೆ ಅರ್ಹನಾಗಿದ್ದು, ಆಧಾರ್‌ ಲಿಂಕ್‌, ಆನ್‌ಲೈನ್‌ ಅರ್ಜಿ ಹಾಕಲು ಸೂಚನೆ ನೀಡಲಾಗಿದೆ. ಫಲಾನುಭವಿಗಳು ಪಂಚಾಯಿತಿ, ನಾಡಕಚೇರಿ, ಆಧಾರ್‌ ಕೇಂದ್ರ, ಬ್ಯಾಂಕ್‌ ಹೀಗೆ ಅಲ್ಲಿಂದ ಇಲ್ಲಿಗೆ ಅಲೆದಾಡುವಂತಾಗಿದೆ. ಇದಕ್ಕಾಗಿ ಪಂಚಾಯಿತಿಯಿಂದ ದೃಢೀಕರಣ ಪ್ರಮಾಣ ಪತ್ರ ಕೇಳಿದರೆ, ಲೈಸೆನ್ಸ್‌ ಹೆಸರಲ್ಲಿ ಕೆಲವು ಪಂಚಾಯಿತಿಗಳು . 100ರಿಂದ 500 ಟ್ಯಾಕ್ಸ್‌ ಪಡೆದು ಪಾವತಿ ನೀಡುತ್ತಿದ್ದಾರೆ. ಫಲಾನುಭವಿಗಳು ದುಡಿಯಲು ಆಗದ ಈ ಸಂದರ್ಭದಲ್ಲಿ ಬಂದಷ್ಟುಬರಲಿ ಒಂದು ಹೊತ್ತಿನ ಊಟಕ್ಕೆ ಆಗಲಿ ಎಂದು 100ರಿಂದ 1000 ಖರ್ಚು ಮಾಡಿ ಪ್ಯಾಕೇಜ್‌ ಪಡೆಯಲು ಮುಂದಾಗಿದ್ದಾರೆ.

ಮೋದಿ ಆಡಳಿತದಲ್ಲೇ ಬಡವರ ಬದುಕು ಬರ್ಬರ: ಅಶೋಕ ಮಂದಾಲಿ

ಅಲೆದಾಟದಿಂದ ಹೆಚ್ಚಿನ ಖರ್ಚು

ಕೊರೋನಾ ಹಾಗೂ ಲಾಕ್‌ಡೌನ್‌ ನೆಪ ಹೇಳಿಕೊಂಡು, ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಹಾಗಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಅದರಲ್ಲಿಯೂ ಹೊಳೆಆಲೂರ ಹೋಬಳಿಯಲ್ಲಿ ಹೆಚ್ಚಿನ ಸಮಸ್ಯೆಇದ್ದು, ಇನ್ನುಳಿದ ಹೋಬಳಿಗಳ ವ್ಯಾಪ್ತಿಯಲ್ಲಿಯೂ ಬೇರೆ ಬೇರೆ ರೀತಿಯ ಸಮಸ್ಯೆಗಳಿವೆ. ಒಂದೂವರೆ ವರ್ಷದಿಂದ ಹೊಸ ರೇಷನ್‌ ಕಾರ್ಡ್‌ ಕೊಟ್ಟಿಲ್ಲ, ಲಾಕ್‌ಡೌನ್‌ ವೇಳೆಯಲ್ಲಿ ಆಧಾರ್‌ ಕಾರ್ಡ್‌ ಕೇಂದ್ರಗಳು ಬಂದಾಗಿವೆ. ಮೊಬೈಲ್‌ ನಂಬರ್‌ ಲಿಂಕ್‌ ಮಾಡಿಸಬೇಕು. ಅರ್ಜಿ ಹಾಕಿದ ತಕ್ಷಣ ವೈಬ್‌ಸೈಟ್‌ ಅಪ್‌ಡೇಟ್‌ ಆಗುವುದಿಲ್ಲ. 15ರಿಂದ 20 ದಿವಸ ಕಾಯಬೇಕು. ಹೀಗೆ ಒಂದೊಂದು ಕಡೆಯಲ್ಲಿ ಒಂದು ರೀತಿಯ ಸಮಸ್ಯೆಗಳಿವೆ. ಶ್ರಮಿಕ ವರ್ಗದ ಈ ಪ್ಯಾಕೇಜ್‌ ಹಣ ಪಡೆಯಲು ಫಲಾನುಭವಿಗಳು ಪರದಾಡುವಂತಾಗಿದೆ.

ದಾಖಲೆ ಸಿದ್ಧತೆಗೆ ಸಮಸ್ಯೆ

ತಮ್ಮ ಪಾಡಿಗೆ ತಾವು ವೃತ್ತಿ ಮಾಡಿಕೊಂಡು ಬಂದವರಿಗೆ ಈಗ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳಲು ಸಾಕಷ್ಟು ಸಮಸ್ಯೆಯಾಗುತ್ತಿದೆ. ಅಧಿಕಾರಿಗಳಿಗೆ ಸರ್ಕಾರದ ಮಾರ್ಗಸೂಚಿಗಳನ್ನು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ, ಸಾರ್ವಜನಿಕರು ಈ ಹಿಂದೆ ಅಗತ್ಯ ದಾಖಲೆಗಳನ್ನು ಸರಿ ಮಾಡಿಕೊಳ್ಳದೇ ಇರುವುದರಿಂದಾಗಿ ಇಂದು ಹೆಚ್ಚಿನ ಹಣ ಕಳೆದುಕೊಳ್ಳುವಂತಾಗಿದೆ.

2 ಸಾವಿರ ಸಹಾಯಧನ ನಮ್ಮ ಕೈ ಸೇರುವ ಮೊದಲೇ 500ರಿಂದ 1 ಸಾವಿರದವರೆಗೂ ಖರ್ಚಾಗಿದೆ. ಅಷ್ಟಾದರೂ ದಾಖಲೆಗಳು ಇಂದಿಗೂ ಸರಿಯಾಗಿಲ್ಲ, ಅದಕ್ಕಾಗಿ ಆಯಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೀರಾ ಸಂಕಷ್ಟಕ್ಕೆ ಸಿಲುಕಿರುವ ನಮ್ಮಂಥ ಕೈ ಕಸಬನ್ನೇ ಅವಲಂಬಿಸಿದವರಿಗೆ ಗದಗ ಜಿಲ್ಲಾಧಿಕಾರಿಗಳು ವಿಶೇಷ ಆದ್ಯತೆ ಮೇಲೆ ಪರಿಹಾರ ವಿತರಣೆಗೆ ಗಮನ ನೀಡಬೇಕು ಎಂದು ಫಲಾನುಭವಿಗಳು ಹೇಳುತ್ತಾರೆ.