ಬೆಂಗಳೂರು (ಆ.20):  ಕೋವಿಡ್‌ ಪರೀಕ್ಷೆಗೆ ಒಳಪಟ್ಟವರು ಇನ್ಮುಂದೆ ಆನ್‌ಲೈನ್‌ನಲ್ಲೇ ತಮ್ಮ ವರದಿ ಪಡೆದುಕೊಳ್ಳಬಹುದು. ಸರ್ಕಾರದ ಕೋವಿಡ್‌ ವಾರ್‌ ರೂಂ ಅಭಿವೃದ್ಧಿಪಡಿಸಿರುವ ವೆಬ್‌ ಪೋರ್ಟಲ್‌ www.covidwar.karnataka.in ನಲ್ಲಿ ತಮ್ಮ ಎಸ್‌ಆರ್‌ಎಫ್‌ ಐಡಿ ನಂಬರ್‌ (ಮಾದರಿ ಉಲ್ಲೇಖಿತ ಅರ್ಜಿ ಸಂಖ್ಯೆ) ದಾಖಲಿಸಿ ವರದಿ ವೀಕ್ಷಿಸಬಹುದು.

ಐಸಿಎಂಆರ್‌ ನಿಯಮಾವಳಿ ಪ್ರಕಾರ, ಕೋವಿಡ್‌ ಪರೀಕ್ಷಾ ವರದಿ ನಿರ್ವಹಣೆಗೆ ಎಸ್‌ಆರ್‌ಎಫ್‌ ಸಂಖ್ಯೆ ಬಹಳ ಮುಖ್ಯ. ಇದರಲ್ಲಿ ಕೋವಿಡ್‌ ಪರೀಕ್ಷೆಗೆ ಮೂಗು, ಗಂಟಲು ದ್ರವ ಮಾದರಿ ಸಂಗ್ರಹಿಸಿದ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಪೂರ್ಣ ಮಾಹಿತಿ ದಾಖಲಿಸಲಾಗಿರುತ್ತದೆ. ಈ ಸಂಖ್ಯೆಯನ್ನು ದಾಖಲಿಸಿ ಆನ್‌ಲೈನ್‌ನಲ್ಲಿ ವರದಿ ಪರಿಶೀಲಿಸಿದಾಗ ಪಾಸಿಟಿವ್‌ ಬಂದರೆ ಯಾರೂ ಕೂಡ ಭಯಪಡಬೇಕಾಗಿಲ್ಲ. ತಮಗೆ ಯಾವುದೇ ಲಕ್ಷಣಗಳಿಲ್ಲದವರು, ಸೌಮ್ಯ ಹಾಗೂ ಸಾಧಾರಣ ಲಕ್ಷಣಗಳಿರುವವರು ಮನೆಯಲ್ಲೇ ಆರೈಕೆಯಲ್ಲಿ (ಹೋಂ ಐಸೋಲೇಷನ್‌) ಇರಬಹುದು ಎಂದು ಸರ್ಕಾರದ ಕೋವಿಡ್‌ ವಾರ್‌ರೂಂ ಮುಖ್ಯಸ್ಥ ಮುನೀಶ್‌ ಮೌದ್ಗಿಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ: ಸಂಸದ ಉಮೇಶ ಜಾಧವ್‌ ಪುತ್ರ, ಶಾಸಕ ಅವಿನಾಶ್‌ ಇಬ್ಬರಿಗೂ ಕೊರೋನಾ...

ವರದಿ ಪಾಸಿಟಿವ್‌ ಬಂದ ಬಳಿಕ ಸರ್ಕಾರ ಅಥವಾ ಸ್ಥಳೀಯ ಕೋವಿಡ್‌ ನಿರ್ವಹಣಾ ಅಧಿಕಾರಿಗಳು ಸ್ವಯಂ ನಿಮ್ಮ ಮೊಬೈಲ್‌ ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಸಂಪರ್ಕದಲ್ಲಿರುತ್ತಾರೆ. ಒಂದು ವೇಳೆ ತೀವ್ರ ತೆರನಾದ ಲಕ್ಷಣಗಳು ಕಂಡು ಬಂದರೆ ಅಥವಾ ಆರೋಗ್ಯ ಸಮಸ್ಯೆ ಗಂಭೀರವಾಗಿದ್ದರೆ ತಕ್ಷಣ 108 ಆರೋಗ್ಯ ಕವಚ ಆ್ಯಂಬುಲೆನ್ಸ್‌ಗೆ ಅಥವಾ ಕೋವಿಡ್‌ ಸಹಾಯವಾಣಿ ಆಪ್ತಮಿತ್ರ 14410ಕ್ಕೆ ಕರೆ ಮಾಡಬಹುದು. ತಕ್ಷಣ ನಿಮಗೆ ಆಂಬ್ಯುಲೆನ್ಸ್‌ ಸೇವೆ ಒದಗಿಸಿ ಹಾಸಿಗೆ ಖಾಲಿ ಇರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಅವರು ಹೇಳಿದ್ದಾರೆ.

ರಾಜ್ಯ ವಾರ್‌ ರೂಂ ಸಮೀಕ್ಷೆ ಪ್ರಕಾರ, ದೇಶದಲ್ಲಿ ಅತಿ ಹೆಚ್ಚು ಕೋವಿಡ್‌ ಪರೀಕ್ಷೆ ನಡೆಸಿದ ರಾಜ್ಯಗಳ ಪೈಕಿ ಕರ್ನಾಟಕ ಆರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇದುವರೆಗೆ ಪ್ರತಿ 10 ಲಕ್ಷ ಜನರಲ್ಲಿ 34,912 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ದೆಹಲಿಯಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 79,828 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಜಮ್ಮು ಕಾಶ್ಮೀರ (64,640), ಆಂಧ್ರ ಪ್ರದೇಶ (59,737), ಅಸ್ಸಾಂ (58,385), ತಮಿಳುನಾಡು (53,311), ಕರ್ನಾಟಕ (34,912) ಇವೆ (ಆ.18ರ ಅಂಕಿ ಅಂಶಗಳು).

ಗುಡ್‌ ನ್ಯೂಸ್: ದೇಶಿ ಕೋವಿಡ್ ಲಸಿಕೆ ಬಳಕೆಗೆ ಶೀಘ್ರ ಸಮ್ಮುತಿ..?

ಸರ್ಕಾರದ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಇದುವರೆಗೂ ಒಟ್ಟು 21 ಲಕ್ಷಕ್ಕೂ ಹೆಚ್ಚು ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ರಾಜ್ಯದಲ್ಲಿರುವ 100ಕ್ಕೂ ಹೆಚ್ಚು ಕೋವಿಡ್‌ ಪ್ರಯೋಗಾಲಯಗಳ ಮೂಲಕ 15.82 ಲಕ್ಷಕ್ಕೂ ಹೆಚ್ಚು ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ. 5.51 ಲಕ್ಷಕ್ಕೂ ಹೆಚ್ಚು ‌ ಆ್ಯಂಟಿಜನ್‌ ಟೆಸ್ಟ್‌ ನಡೆಸಲಾಗಿದೆ.