Murugha math: ಮುರುಘಾಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿ ನೇಮಿಸಿದ ಕೋರ್ಟ್
ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠಕ್ಕೆ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ತಾತ್ಕಾಲಿಕ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಹೈಕೋರ್ಚ್ ಸೋಮವಾರ ಆದೇಶಿಸಿದೆ.
ಬೆಂಗಳೂರು (ಜು.4) : ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠಕ್ಕೆ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ತಾತ್ಕಾಲಿಕ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೀಠಾಧಿಪತಿ ಡಾ.ಶಿವಮೂರ್ತಿ ಮರುಘಾ ಶರಣರು(Dr Shivamurthy murughashree) ನ್ಯಾಯಾಂಗ ಬಂಧನಕ್ಕೆ ಒಳÜಗಾಗಿರುವ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ(PS Vastrad) ಅವರನ್ನು ಮಠದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ 2022ರ ಸೆ.1ರಂದು ಹೊರಡಿಸಿದ್ದ ಆದೇಶ ರದ್ದುಗೊಳಿಸಿದ ಹೈಕೋರ್ಟ್(Karnataka highcourt) ಏಕ ಸದಸ್ಯ ನ್ಯಾಯಪೀಠ ತೀರ್ಪು ಪ್ರಶ್ನಿಸಿ ಮಠದ ಭಕ್ತ ಎಚ್.ಏಕಾಂತಯ್ಯ ಎಂಬುವರು ಮೇಲ್ಮನವಿ ಸಲ್ಲಿಸಿದ್ದರು.
ಸೋಮವಾರ ಈ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ, ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ಮುರುಘಾಮಠ ಮತ್ತು ವಿದ್ಯಾಪೀಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿಯಾಗಿ ನೇಮಿಸಿದೆ. ಜತೆಗೆ, ಜಿಲ್ಲಾ ಪ್ರಧಾನ ನ್ಯಾಯಾಧೀಶರು ಮಂಗಳವಾರ ಬೆಳಗ್ಗೆ 11 ಗಂಟೆಗೆ ಮಠದ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಬೇಕು ಎಂದು ನಿರ್ದೇಶಿಸಿದೆ.
ಮುರುಘಾಮಠಕ್ಕೆ ಉಸ್ತುವಾರಿ ನೇಮಕಕ್ಕೆ ನಿಯಮ ಇದೆಯೇ; ಹೈಕೋರ್ಟ್ ಪ್ರಶ್ನೆ
ಅಲ್ಲದೆ, ಆಡಳಿತಾಧಿಕಾರಿಯಾಗುವ ಜಿಲ್ಲಾ ನ್ಯಾಯಾಧೀಶರು ಯಾವುದೇ ಪ್ರಮುಖ ನೀತಿ ನಿರ್ಧಾರ ಕೈಗೊಳ್ಳಬಾರದು. ಮಠ ಮತ್ತು ವಿದ್ಯಾಪೀಠದ ದೈನಂದಿನ ವ್ಯವಹಾರಗಳನ್ನಷ್ಟೇ ನಿಭಾಯಿಸಬೇಕು. ಈ ವಿಚಾರದಲ್ಲಿ ತಮಗೆ ಯಾವುದಾದರೂ ನೆರವು ಬೇಕಾದಲ್ಲಿ, ಚಿತ್ರದುರ್ಗ ಜಿಲ್ಲಾಧಿಕಾರಿಯನ್ನು ಲಿಖಿತವಾಗಿ ಕೋರಬಹುದು. ಜಿಲ್ಲಾ ನ್ಯಾಯಾಧೀಶರು ನೆರವು ಕೋರಿದಲ್ಲಿ ಜಿಲ್ಲಾಧಿಕಾರಿ ಕೂಡಲೇ ಎಲ್ಲಾ ಅಗತ್ಯ ನೆರವು ಕಲ್ಪಿಸಬೇಕು ಎಂದು ವಿಭಾಗೀಯ ಪೀಠ ನಿರ್ದೇಶಿಸಿದೆ.
ಇದೇ ವೇಳೆ ಮೇಲ್ಮನವಿ ಸಂಬಂಧ ರಾಜ್ಯ ಸರ್ಕಾರ, ಜಗದ್ಗುರು ಮುರುಘರಾಜೇಂದ್ರ ಮಠ ಮತ್ತು ವಿದ್ಯಾಪೀಠ, ಚಿತ್ರದುರ್ಗ ಜಿಲ್ಲಾಧಿಕಾರಿ, ಮಠದ ಮಾಜಿ ಆಡಳಿತಾಧಿಕಾರಿ ಪಿ.ಎಸ್. ವಸ್ತ್ರದ್ ಸೇರಿದಂತೆ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜು.18ಕ್ಕೆ ಮುಂದೂಡಿತು.
ಗಡುವು ಮುಕ್ತಾಯ:
ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದ್ದ ಸರ್ಕಾರ ಆದೇಶವನ್ನು 2023ರ ಮೇ 22ರಂದುಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ರದ್ದುಪಡಿಸಿದೆ. ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮರುಘಾ ಶರಣರು ಜೈಲಿನಲ್ಲಿರುವ ಕಾರಣ, ಮಠ ಮತ್ತು ಅದಕ್ಕೆ ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಹಾಗೂ ನಿರ್ವಹಣೆಗಾಗಿ ಮಠದ ಭಕ್ತರು ಮತ್ತು ವೀರಶೈವ/ಲಿಂಗಾಯತ ಸಮುದಾಯದ ಪ್ರಮುಖ ವ್ಯಕ್ತಿಗಳು ಸೂಕ್ತ ಕ್ರಿಯಾ ಯೋಜನೆ ರೂಪಿಸಬೇಕಿದೆ. ಆರು ವಾರಗಳಲ್ಲಿ ಈ ಮಧ್ಯಂತರ ವ್ಯವಸ್ಥೆ ಮಾಡಬೇಕು. ಅಲ್ಲಿಯವರೆಗೆ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿಯನ್ನು ಮುಂದುವರಿಸಲಾಗುತ್ತಿದೆ ಎಂದು ಏಕ ಸದಸ್ಯ ನ್ಯಾಯಪೀಠ ನಿರ್ದೇಶಿಸಿತ್ತು. ಆ ಆರು ವಾರಗಳ ಅವಧಿ ಭಾನುವಾರಕ್ಕೆ ಪೂರ್ಣಗೊಂಡಿದೆ ಎಂದು ರಾಜ್ಯ ಸರ್ಕಾರ, ಮೇಲ್ಮನವಿದಾರ ಮತ್ತು ಮಠದ ಪರ ವಕೀಲರು ವಿಭಾಗೀಯ ಪೀಠದ ಗಮನಕ್ಕೆ ತಂದರು.
ಹಾಗೆಯೇ, ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ, ಏಕ ಸದಸ್ಯ ನ್ಯಾಯಪೀಠದ ಆದೇಶದಂತೆ ಕ್ರಿಯಾ ಯೋಜನೆ (ನೂತನ ಆಳಿತಾಧಿಕಾರಿಯನ್ನು ನೇಮಿಸಿಲ್ಲ) ರೂಪಿಸಿಲ್ಲ. ಇದರಿಂದ ತುರ್ತಾಗಿ ಮಧ್ಯಂತರ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ ಎಂದು ವಿಭಾಗೀಯ ಪೀಠಕ್ಕೆ ತಿಳಿಸಿದರು.
ಈ ಮನವಿಯನ್ನು ಪರಿಗಣಿಸಿದ ನ್ಯಾಯಪೀಠ, ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಧೀಶರನ್ನು ಮಠ ಮತ್ತು ವಿದ್ಯಾಪೀಠದ ತಾತ್ಕಾಲಿಕ ಆಡಳಿತಾಧಿಕಾರಿಯಾಗಿ ನೇಮಿಸಿತು.
ಪ್ರಕರಣದ ಹಿನ್ನೆಲೆ:
ಮುರುಘಾ ಮಠ(Murugha mutt)ದ ಶಿವಮೂರ್ತಿ ಶರಣರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಅಡಿ(Pocso act) ದಾಖಲಾದ ದೂರಿನ ಸಂಬಂಧ 2022ರ ಸೆ.1ರಂದು ಬಂಧಿಸಲಾಗಿದೆ. ನಂತರವೂ ಮತ್ತೊಂದು ಪೋಕ್ಸೊ ಪ್ರಕರಣ ಸ್ವಾಮೀಜಿ ವಿರುದ್ಧ ದಾಖಲಾಗಿದ್ದು, ಸದ್ಯ ಅವರು ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಮಠದ ಆಡಳಿತ ನಿರ್ವಹಣೆಗಾಗಿ ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ ಅವರನ್ನು ನೇಮಕ ಮಾಡಿ 2022ರ ಡಿ.13ರಂದು ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹಾಗೂ ಭಕ್ತರು ಹೈಕೋರ್ಚ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಮುರುಘಾಮಠದ ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಿ ಹೈಕೋರ್ಟ್: ಸರ್ಕಾರಕ್ಕೆ ಮುಖಭಂಗ
ಆ ಅರ್ಜಿಗಳನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಏಕ ಸದಸ್ಯ ನ್ಯಾಯಪೀಠ ರಾಜ್ಯ ಸರ್ಕಾರದ ಆದೇಶವನ್ನು ರದ್ದುಪಡಿಸಿತ್ತು. ಸರ್ಕಾರ ನೇಮಿಸಿದ್ದ ಆಡಳಿತಾಧಿಕಾರಿಯನ್ನು ಆರು ವಾರಗಳ ಕಾಲ ಮುಂದುವರೆಯಲು ಅನುಮತಿ ನೀಡಿತ್ತು.