Asianet Suvarna News Asianet Suvarna News

ಮುರುಘಾಮಠಕ್ಕೆ ಉಸ್ತುವಾರಿ ನೇಮಕಕ್ಕೆ ನಿಯಮ ಇದೆಯೇ; ಹೈಕೋರ್ಟ್ ಪ್ರಶ್ನೆ

ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಜೈಲಿಗೆ ಹೋಗುವ ಮುನ್ನ ಮಠಕ್ಕೆ ಉಸ್ತುವಾರಿ ಸ್ವಾಮೀಜಿಯನ್ನು ನೇಮಕ ಮಾಡಲು ಯಾವ ಅಧಿಕಾರ ಹೊಂದಿದ್ದರು ಮತ್ತು ಉಸ್ತುವಾರಿಯನ್ನು ನೇಮಿಸಲು ಅವಕಾಶ ಕಲ್ಪಿಸುವ ಲಿಖಿತ ನಿಯಮಗಳೇನಾದರೂ ಇವೆಯೇ ಎಂದು ಹೈಕೋರ್ಟ್ ಪ್ರಶ್ನಿಸಿದೆ.

Is there a rule for appointing caretaker to Muruga Math; High Court question rav
Author
First Published Jan 19, 2023, 8:04 AM IST

ಬೆಂಗಳೂರು (ಜ.19) : ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಜೈಲಿಗೆ ಹೋಗುವ ಮುನ್ನ ಮಠಕ್ಕೆ ಉಸ್ತುವಾರಿ ಸ್ವಾಮೀಜಿಯನ್ನು ನೇಮಕ ಮಾಡಲು ಯಾವ ಅಧಿಕಾರ ಹೊಂದಿದ್ದರು ಮತ್ತು ಉಸ್ತುವಾರಿಯನ್ನು ನೇಮಿಸಲು ಅವಕಾಶ ಕಲ್ಪಿಸುವ ಲಿಖಿತ ನಿಯಮಗಳೇನಾದರೂ ಇವೆಯೇ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಮುರುಘಾ ಮಠ(Murughamutt)ಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ(PS Vastrad) ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದ ಸರ್ಕಾರ ಆದೇಶವನ್ನು ರದ್ದುಪಡಿಸುವಂತೆ ಕೋರಿ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ(Basavaprabhu swamiji) ಮತ್ತು ಭಕ್ತರು ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಪೀಠ, ಮಠದ ಪರ ವಕೀಲರಿಗೆ ಈ ಪ್ರಶ್ನೆ ಕೇಳಿತು.

Muruga Mutt: ಆಡಳಿತಾಧಿಕಾರಿ ನೇಮಕ ಆದೇಶ ಹಿಂಪಡೆಯದಿದ್ದರೆ ಡಿ.26ರಿಂದ ಧರಣಿ: ಬಸವಪ್ರಭು ಶ್ರೀ

ಅದಕ್ಕೆ ಉತ್ತರಿಸಿದ ಮಠದ ಪರ ಹಿರಿಯ ವಕೀಲ ಜಯಕುಮಾರ್‌ ಎಸ್‌.ಪಾಟೀಲ್‌, ಉಸ್ತುವಾರಿ ಸ್ವಾಮೀಜಿ ನೇಮಕ ಮಾಡಲು ಪೀಠಾಧಿಪತಿ ಅಧಿಕಾರ ಹೊಂದಿದ್ದಾರೆ. ಮುರುಘಾ ಶರಣರು ಜೈಲಿನಲ್ಲಿದ್ದರೂ ಅವರಿಂದ ನೇಮಕಗೊಂಡಿರುವ ಮಠದ ಉಸ್ತುವಾರಿ ಸ್ವಾಮೀಜಿ, ಶಾಖಾ ಮಠದ ಮಠಾಧಿಪತಿಯೇ ಆಗಿದ್ದಾರೆ. ಅವರು ಮಠದ ವ್ಯವಹಾರಗಳು ಮತ್ತು ಅದರ ಆಸ್ತಿಗಳ ನಿರ್ವಹಣೆಗಾಗಿ ಶರಣರಿಂದ ತಮ್ಮ ಹೆಸರಿಗೆ ಜಿಪಿಎ (ಸಾಮಾನ್ಯ ಅಧಿಕಾರ ಪತ್ರ) ಪಡೆದಿದ್ದಾರೆ. ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗೂ ಸಹ ಜಿಪಿಎ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಉಸ್ತುವಾರಿ ಸ್ವಾಮೀಜಿಗೆ ಜಿಪಿಎ ನೀಡಿರುವುದರಿಂದ ಮಠದ ವ್ಯವಹಾರಗಳ ಮತ್ತದರ ಆಸ್ತಿಗಳ ನಿರ್ವಹಣೆಗೆ ಯಾವುದೇ ತೊಂದರೆ ಆಗುವುದಿಲ್ಲ. ಹೀಗಿದ್ದರೂ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿರುವುದು ಸರಿಯಲ್ಲ ಎಂದು ತಿಳಿಸಿದರು.

Murugha Mutt Administrator ಮುರುಘಾ ಮಠಕ್ಕೆ ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ಅನಗತ್ಯ: ಬಸವಪ್ರಭು ಶ್ರೀ

ಅಲ್ಲದೆ, ಆಡಳಿತಾಧಿಕಾರಿಯ ನೇಮಿಸಿ ಸರ್ಕಾರ ಹೊರಡಿಸಿದ ಆದೇಶದ ಕಾನೂನಿನ ಸಿಂಧುತ್ವವನ್ನು ಆಕ್ಷೇಪಿಸಿದ ಮಠದ ವಕೀಲರು, ರಾಜ್ಯ ಸರ್ಕಾರವು ಸಂವಿಧಾನದ 162ನೇ ವಿಧಿಯನ್ನು ಬಳಸಿ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿರುವ ಕ್ರಮ ನ್ಯಾಯಸಮ್ಮತವಾಗಿಲ್ಲ. ಈ ಪ್ರಕರಣದಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಿದ ಸರ್ಕಾರದ ಕ್ರಮವು ಮೂಲಭೂತ ಹಕ್ಕು ಕಲ್ಪಿಸುವ ಸಂವಿಧಾನದ 21 ಮತ್ತು 26ನೇ ಪರಿಚ್ಚೇದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಆದ್ದರಿಂದ ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಆದೇಶವನ್ನು ಅಸಿಂಧು ಎಂದು ಘೋಷಿಸಬೇಕು ಎಂದು ಮನವಿ ಮಾಡಿ, ತಮ್ಮ ವಾದ ಮಂಡನೆಯನ್ನು ಪೂರ್ಣಗೊಳಿಸಿದರು. ನ್ಯಾಯಾಲಯದ ದಿನದ ಕಲಾಪ ಪೂರ್ಣಗೊಂಡ ಕಾರಣ ವಿಚಾರಣೆಯನ್ನು ಜ.23ಕ್ಕೆ ಮುಂದೂಡಲಾಗಿದೆ. ಅಂದು ಸರ್ಕಾರದ ಪರ ರಾಜ್ಯ ಅಡ್ವೋಕೇಟ್‌ ಜನರಲ್‌ ಅವರು ವಾದ ಮಂಡನೆ ಮಾಡಲಿದ್ದಾರೆ.

Follow Us:
Download App:
  • android
  • ios