ಬೆಂಗಳೂರು [ಮಾ.12]:  ಕೊರೋನಾ ಸೋಂಕಿನ ಬಗ್ಗೆ ಸುಳ್ಳು ವದಂತಿ ಹರಡುವುದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ, ಸೋಂಕು ಪರೀಕ್ಷೆಗೆ ಅಥವಾ ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿರಲು ಒಪ್ಪದ ವ್ಯಕ್ತಿಗಳನ್ನು ಬಂಧಿಸಿ ಚಿಕಿತ್ಸೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್‌ -19 (ಕೊರೋನಾ) -2020’ ನಿಯಮಾವಳಿ ರೂಪಿಸಿ ತಕ್ಷಣದಿಂದ ಜಾರಿಗೊಳಿಸಿ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು ಕೊರೋನಾ ಸೋಂಕನ್ನು ಕರ್ನಾಟಕ ರಾಜ್ಯ ಸಾಂಕ್ರಾಮಿಕ ರೋಗಗಳ ವ್ಯಾಪ್ತಿಗೆ ತಂದಿದೆ. ಇದಕ್ಕಾಗಿ ಈ ನಿಯಮಾವಳಿ ರೂಪಿಸಿ ಜಾರಿಗೆ ತಂದಿದೆ.

ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ -1897 (ಸೆಂಟ್ರಲ್‌ ಆ್ಯಕ್ಟ್ 3) ಅಡಿ ಕೊರೋನಾ ಸೋಂಕು ಕುರಿತ ನಿಯಮಗಳನ್ನು ರೂಪಿಸಿದ್ದು, ಕೊರೋನಾ ಸೋಂಕು ಪರೀಕ್ಷೆ ಅಥವಾ ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿರಲು ಒಪ್ಪದ ವ್ಯಕ್ತಿಗಳನ್ನು ಬಂಧಿಸಿ ಚಿಕಿತ್ಸೆ ನೀಡಲು ಅವಕಾಶ ನೀಡಲಾಗಿದೆ. ಈ ನಿಯಮಾವಳಿಯಡಿ ಎಲ್ಲ ನಿಯಮಗಳು ಒಂದು ವರ್ಷದ ಅವಧಿವರೆಗೆ ಮಾತ್ರ ಚಾಲ್ತಿಯಲ್ಲಿರುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೆ, ನಿಯಮಾವಳಿ ಪ್ರಕಾರ ಕೊರೋನಾ ಸೋಂಕಿನ ಬಗ್ಗೆ ಸುಳ್ಳು ವದಂತಿ ಹರಡುವುದನ್ನು ಶಿಕ್ಷಾರ್ಹ ಅಪರಾಧ ಎಂದು ಆದೇಶಿಸಲಾಗಿದೆ. ಯಾವುದೇ ವ್ಯಕ್ತಿ, ಸಂಸ್ಥೆ ಹಾಗೂ ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳು ತಪ್ಪು ಮಾಹಿತಿ ಹರಡುವಂತಿಲ್ಲ. ಹಾಗೆ ಮಾಡಿದರೆ ಐಪಿಸಿ 188 ಅಡಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೊರೋನಾ ದಾಂಧಲೆ, 70 ಸಾವಿರ ಕೈದಿಗಳಿಗೆ ಬಿಡುಗಡೆ ಭಾಗ್ಯ..

ಕೊರೋನಾ ಸೋಂಕು ವ್ಯಾಪಿಸಿರುವ ಯಾವುದೇ ಗ್ರಾಮ, ಪಟ್ಟಣ, ನಗರ ಸೇರಿದಂತೆ ಯಾವುದೇ ಸೀಮಿತ ಭೌಗೋಳಿಕ ಪ್ರದೇಶಕ್ಕೆ ಸಂಚಾರ ನಿರ್ಬಂಧ ವಿಧಿಸುವ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಯಾವುದೇ ವಾಹನಗಳ ಸಂಚಾರವನ್ನು ನಿರ್ಬಂಧಿಸುವ, ಶಾಲಾ-ಕಾಲೇಜು, ಸಂಸ್ಥೆಗಳನ್ನು ಮುಚ್ಚಿಸುವ ಹಾಗೂ ಸಾರ್ವಜನಿಕ ಸಮಾರಂಭಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ.

ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆ ಇಲ್ಲ

ಕೊರೋನಾ ಸೋಂಕಿಗೆ ಸಂಬಂಧಿಸಿದ ಮಾದರಿಗಳ ಸಂಗ್ರಹ ಹಾಗೂ ಪರೀಕ್ಷೆಗೆ ಖಾಸಗಿ ಪ್ರಯೋಗಾಲಯಗಳಿಗೆ ಅವಕಾಶ ನೀಡಿಲ್ಲ. ಅಂತಹ ಎಲ್ಲ ಮಾದರಿಗಳನ್ನು ಭಾರತದ ಸರ್ಕಾರದ ಮಾರ್ಗಸೂಚಿಯಂತೆ ಸಂಗ್ರಹಿಸಿ ಸಂಬಂಧಿತ ಪ್ರಯೋಗಾಲಯಗಳಿಗೆ ಕಳುಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ನೋಡಲ್‌ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಖಾಸಗಿ ಲ್ಯಾಬ್‌ಗಳು ಪರೀಕ್ಷೆಗೆ ಮುಂದಾದರೆ ಐಪಿಸಿ 188ರ ಅಡಿ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗಿದೆ.

ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ:

ನಿಯಮದಡಿ ಎಲ್ಲ ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ವೈರಸ್‌ ಶಂಕಿತ ರೋಗಿಗಳನ್ನು ಪರೀಕ್ಷಿಸಲು ಪ್ರತ್ಯೇಕ ಸ್ಕ್ರೀನಿಂಗ್‌ ಕಡ್ಡಾಯವಾಗಿ ಮಾಡಬೇಕು. ಆಸ್ಪತ್ರೆಗಳಲ್ಲಿ ತಪಾಸಣೆಯ ಸಂದರ್ಭದಲ್ಲಿ ಶಂಕಿತ ವ್ಯಕ್ತಿಯ ಪ್ರಯಾಣದ ಇತಿಹಾಸವನ್ನು ಹಾಗೂ ಅವರ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನು ದಾಖಲಿಸಬೇಕು. ಸೋಂಕಿತ ದೇಶಕ್ಕೆ ಹೋಗಿದ್ದರ ಮಾಹಿತಿ ಇದ್ದಲ್ಲಿ ಅವರನ್ನು 28 ದಿನಗಳ ನಿಗಾದಲ್ಲಿರಿಸಬೇಕು. ಈ ಎಲ್ಲ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಡ್ಡಾಯವಾಗಿ ನೀಡಬೇಕು. ಖಾಸಗಿ ಆಸ್ಪತ್ರೆಗಳೂ ಸಹ ಶಂಕಿತರ ಮಾದರಿಯನ್ನು ಸರ್ಕಾರಿ ಪ್ರಯೋಗಾಲಯಗಳಿಗೆ ರವಾನಿಸಬೇಕು ಎಂದು ಹೇಳಲಾಗಿದೆ.

ವಿದೇಶ ಪ್ರಯಾಣದ ಮಾಹಿತಿ ಕಡ್ಡಾಯ:

ಕಳೆದ 14 ದಿನಗಳ ಹಿಂದೆ ಸೋಂಕಿತ ದೇಶಗಳಿಂದ ಆಗಮಿಸಿರುವ ಪ್ರಯಾಣಿಕರು ಹತ್ತಿರ ಸರ್ಕಾರಿ ಆಸ್ಪತ್ರೆಯಲ್ಲಿ ತಪ್ಪದೇ ವರದಿ ಮಾಡಿಕೊಳ್ಳಬೇಕು. ಇಲ್ಲವೇ 104ಕ್ಕೆ ಕರೆ ಮಾಡಿ ತಿಳಿಸಬೇಕು. ಇಲ್ಲವಾದಲ್ಲಿ ಅದು ಅಪರಾಧವಾಗುತ್ತದೆ. ವಿದೇಶದಿಂದ ಬಂದವರು ಸೋಂಕು ಇಲ್ಲದಿದ್ದರೂ, 14 ದಿನಗಳ ಕಾಲ ಯಾರ ಸಂಪರ್ಕಕ್ಕೂ ಬಾರದೆ ಮನೆಯಲ್ಲಿ ಪ್ರತ್ಯೇಕವಾಗಿ ಇರಬೇಕು. ಸೋಂಕು ನಿಯಂತ್ರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿಗಳ ಮೇಲೆ ಯಾರೂ ಹಲ್ಲೆ ಮಾಡಬಾರದು.