ಮೋಜುಗಾರರ ಪಾಲಿನ ಭೂರಮೆಯ ಸ್ವರ್ಗ ‘ಥಾಯ್ಲೆಂಡ್‌’ ಅದ್ಭುತ ಪ್ರವಾಸಿತಾಣಗಳಲ್ಲೊಂದಾಗಿ ಹೆಸರು ಗಳಿಸಿದ್ದರೆ, ಶಾಂತಿಯ ನೆಲವೀಡು ಕರ್ನಾಟಕಕ್ಕೆ ಭಾರೀ ಪ್ರಮಾಣದಲ್ಲಿ ‘ಡ್ರಗ್ಸ್‌’ ಎಂಬ ವಿಷ ಪೂರೈಸುವ ಕುಖ್ಯಾತಿಗೂ ಪಾತ್ರವಾಗಿದೆ!

ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ಮೋಜುಗಾರರ ಪಾಲಿನ ಭೂರಮೆಯ ಸ್ವರ್ಗ ‘ಥಾಯ್ಲೆಂಡ್‌’ ಅದ್ಭುತ ಪ್ರವಾಸಿತಾಣಗಳಲ್ಲೊಂದಾಗಿ ಹೆಸರು ಗಳಿಸಿದ್ದರೆ, ಶಾಂತಿಯ ನೆಲವೀಡು ಕರ್ನಾಟಕಕ್ಕೆ ಭಾರೀ ಪ್ರಮಾಣದಲ್ಲಿ ‘ಡ್ರಗ್ಸ್‌’ ಎಂಬ ವಿಷ ಪೂರೈಸುವ ಕುಖ್ಯಾತಿಗೂ ಪಾತ್ರವಾಗಿದೆ!

ಕಳೆದ ಎರಡು ವರ್ಷಗಳಿಂದ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಿಂದ ರಾಜ್ಯಕ್ಕೆ ಅತಿ ಹೆಚ್ಚು ‘ಹೈಡ್ರೋ ಗಾಂಜಾ’ ಹರಿದು ಬಂದಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿರುವುದೇ ಇದಕ್ಕೆ ಸಾಕ್ಷಿ. ಅದೇ ರೀತಿ ದೇಶದ ರಾಜಧಾನಿ ದೆಹಲಿಯಿಂದಲೂ ಇತ್ತೀಚಿನ ದಿನಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ ಎಂದು ಪೊಲೀಸರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಎರಡು ತಿಂಗಳಲ್ಲೇ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 26 ಮಂದಿ ‘ಬ್ಯಾಂಕಾಕ್‌ ’ಪ್ರಯಾಣಿಕರನ್ನು ಸೆರೆ ಹಿಡಿದು 112.2 ಕೋಟಿ ರು. ಮೌಲ್ಯದ 1.60 ಕ್ವಿಂಟಲ್‌ ಹೈಡೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅದೇ ರೀತಿ 8 ತಿಂಗಳ ಅವಧಿಯಲ್ಲಿ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಯಲ್ಲಿ 20 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾವನ್ನು ಸಿಸಿಬಿ ವಶಪಡಿಸಿಕೊಂಡಿದೆ. ಇನ್ನು ಇತ್ತೀಚೆಗೆ ಬ್ಯಾಂಕಾಕ್‌ನಿಂದ ಅಕ್ರಮವಾಗಿ 18.65 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾ ಸಾಗಿಸಿದ್ದ ದಂಪತಿ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಲೆಗೆ ಕೆಡವಿದ್ದಾರೆ.

ರಾಜ್ಯಕ್ಕೆ ಮೊದಲೆಲ್ಲ ಆಫ್ರಿಕಾ ದೇಶಗಳಿಂದ ಎಂಡಿಎಂಎ ಹಾಗೂ ಕೊಕೇನ್ ಸೇರಿ ಸಿಂಥೆಟಿಕ್ ಡ್ರಗ್ಸ್ ಪೂರೈಕೆಯಾದರೆ, ಪಾಕಿಸ್ತಾನ, ಮ್ಯಾನ್ಮಾರ್, ಬಾಂಗ್ಲಾದೇಶ ಹಾಗೂ ಅಪ್ಘಾನಿಸ್ತಾನ ದೇಶಗಳಿಂದ ನೈಸರ್ಗಿಕವಾಗಿ ಅಫೀಮು, ಹೈಡ್ರೋ ಗಾಂಜಾ ಹಾಗೂ ಚರಸ್ ಹರಿದು ಬರುತ್ತಿತ್ತು. ಆದರೀಗ ಥಾಯ್ಲೆಂಡ್‌ ಅತಿ ಹೆಚ್ಚು ಹೈಡ್ರೋ ಗಾಂಜಾ ಸರಬರಾಜು ಮಾಡುವ ದೇಶವಾಗುತ್ತಿದೆ. ಅಲ್ಲದೆ, ಮಲೇಷಿಯಾದಿಂದಲೂ ರಾಜ್ಯದೊಳಗೆ ಗಾಂಜಾ ನುಸುಳುತ್ತಿದೆ. ವಿದೇಶಗಳಿಂದ ವಿಮಾನಗಳು ಹಾಗೂ ಹಡಗುಗಳ ಮೂಲಕ ಡ್ರಗ್ಸ್ ಸಾಗಣೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಅಂತಾರಾಷ್ಟ್ರೀಯ ಡ್ರಗ್ಸ್ ಸಾಗಣೆ ಜಾಲದ ಕುರಿತು ಮಾಹಿತಿ ಪಡೆದು ಕಸ್ಟಮ್ಸ್, ಸಿಸಿಬಿ, ಸ್ಥಳೀಯ ಪೊಲೀಸರು, ಕಂದಾಯ ಜಾರಿ ನಿರ್ದೇಶನಾಲಯ ಹಾಗೂ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ)ಗಳು ಹೆಚ್ಚಿನ ನಿಗಾವಹಿಸಿವೆ. ವಿಮಾನ ನಿಲ್ದಾಣ, ವಿದೇಶಿ ಅಂಚೆ ಕಚೇರಿ ಹಾಗೂ ಬಂದರುಗಳ ಮೇಲೆ ತನಿಖಾ ಸಂಸ್ಥೆಗಳು ಕಣ್ಗಾವಲಿಟ್ಟರೂ ಡ್ರಗ್ಸ್ ಕಳ್ಳ ಹಾದಿಯಲ್ಲಿ ರಾಜ್ಯದೊಳಗೆ ನುಗ್ಗಿ ವ್ಯಸನಿಗಳ ಮತ್ತೇರಿಸುತ್ತಿದೆ. ಹೀಗಾಗಿ ಪೊಲೀಸರ ಕಾರ್ಯಾಚರಣೆ ತಂತ್ರಗಾರಿಕೆ ಸಹ ಬದಲಾಗಿದೆ.

ಪ್ರವಾಸ ಕಳುಹಿಸಿ ಡ್ರಗ್ಸ್ ಸ್ಮಗ್ಲಿಂಗ್:

ಥಾಯ್ಲೆಂಡ್‌ ದೇಶದ ಉಚಿತ ಪ್ರವಾಸದ ಆಸೆ ತೋರಿಸಿ ಜನರನ್ನು ಡ್ರಗ್ಸ್ ಸಾಗಣೆಗೆ ಡ್ರಗ್ಸ್ ಮಾಫಿಯಾ ಬಳಸಿಕೊಳ್ಳುತ್ತಿರುವ ಆತಂಕಕಾರಿ ವಿಚಾರ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ಮಹಾಲಕ್ಷ್ಮೀ ಲೇಔಟ್‌ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಸಾರಾ ಸಿಮ್ರಾನ್‌ ಹಾಗೂ ಆಕೆಯ ಪತಿ ಸೈಫುದ್ದೀನ್ ಬಂಧಿತರಾಗಿದ್ದರು. ದಂಪತಿ ಬಳಿ 18.60 ಕೋಟಿ ರು. ಮೌಲ್ಯದ 18.5 ಕೆ.ಜಿ. ಹೈಡ್ರೋ ಗಾಂಜಾ ಜಪ್ತಿಯಾಗಿತ್ತು. ದಂಪತಿ ವಿಚಾರಣೆ ವೇ‍ಳೆ ಉಚಿತ ಥಾಯ್ಲೆಂಡ್‌ ಪ್ರವಾಸದ ಸಂಗತಿ ಬೆಳಕಿಗೆ ಬಂದಿದೆ. ಹೀಗಾಗಿ ಥಾಯ್ಲೆಂಡ್‌ ದೇಶಕ್ಕೆ ಜನರನ್ನು ಉಚಿತ ಪ್ರವಾಸಕ್ಕೆ ಕಳುಹಿಸಿ ಅಲ್ಲಿಂದ ದುಷ್ಕರ್ಮಿಗಳು ಹೈಡ್ರೋ ಗಾಂಜಾ ಅಡಗಿಸಿಟ್ಟು ಸಾಗಣೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದು ಕೆಜಿಗೆ ಒಂದು ಕೋಟಿ ರು.

ಹೈಡ್ರೋ ಗಾಂಜಾಗೆ ರಾಜ್ಯದಲ್ಲಿ ಮಾದಕ ವಸ್ತು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ತಲಾ ಒಂದು ಕೆ.ಜಿ.ಗೆ ಒಂದು ಕೋಟಿ ರು. ಬೆಲೆ ಇದೆ. ವಿಮಾನಗಳಲ್ಲಿ ಬರುವಾಗ ಕಣ್ತಪ್ಪಿಸಿ ಒಂದು ಕೆ.ಜಿ. ಸಾಗಿಸಿದರೆ ಪೆಡ್ಲರ್‌ ಜೇಬಿಗೆ ಕೋಟಿ ರು. ಸೇರುತ್ತದೆ. ಈ ಕಾರಣಕ್ಕೆ ವಿದೇಶದಿಂದ ಕೋಟ್ಯಂತರ ರು. ಮೌಲ್ಯದ ಹೈಡ್ರೋ ಗಾಂಜಾ ಸಾಗಣೆ ನಡೆದಿದೆ ಎನ್ನುತ್ತಾರೆ ಅಧಿಕಾರಿಗಳು.

ಎಷ್ಟು ಡ್ರಗ್ಸ್ ಪತ್ತೆ?:

ಕಳೆದ 11 ತಿಂಗಳಲ್ಲಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5 ಕ್ವಿಂಟಲ್‌ ಹೈಡ್ರೋ ಗಾಂಜಾ ಜಪ್ತಿಯಾಗಿದೆ. ಇದರಲ್ಲಿ ಎರಡು ತಿಂಗಳಲ್ಲೇ 1.5 ಕ್ವಿಂಟಲ್‌ ಹೈಡ್ರೋ ಗಾಂಜಾ ಥಾಯ್ಲೆಂಡ್‌ನಿಂದಲೇ ಬಂದಿದೆ. ಇನ್ನು 83 ಜನ ಬಂಧಿತರಾಗಿದ್ದಾರೆ. ಅದೇ ರೀತಿ ಥಾಯ್ಲೆಂಡ್‌ನಿಂದ ನಕಲಿ ವಿಳಾಸ ನೀಡಿ ಅಂಚೆ ಮೂಲಕ ಹೈಡ್ರೋ ಗಾಂಜಾ ಸಾಗಣೆ ನಡೆದಿದೆ. ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿ ಮೇಲೆ ಕಸ್ಟಮ್ಸ್ ಮಾಹಿತಿ ಆಧರಿಸಿ ಸಿಸಿಬಿ ನಿರಂತರ ದಾಳಿ ನಡೆಸಿದ್ದು, 8 ತಿಂಗಳ ಅವಧಿಯಲ್ಲಿ 20 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ ಮಾಡಿದೆ.

ಬಿಟ್‌ ಕಾಯಿನ್ ಬಳಸಿ ಖರೀದಿ

ವಿದೇಶದಿಂದ ಡ್ರಗ್ಸ್ ಖರೀದಿ ವ್ಯವಹಾರ ಕ್ರಿಪ್ಟೋ ಕರೆನ್ಸಿ ಮೂಲಕ ನಡೆದಿದೆ. ಡಾರ್ಕ್ ವೆಬ್‌ಗಳ ಮೂಲಕ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಜಾಲ ಸಂಪರ್ಕಿಸಿ ಸಿಂಥೆಟಿಕ್ ಹಾಗೂ ಹೈಡ್ರೋ ಗಾಂಜಾವನ್ನು ರಾಜ್ಯದ ಪೆಡ್ಲರ್‌ಗಳು ಖರೀದಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ಉತ್ಪಾದನಾ ಘಟಕ?

ರಾಜ್ಯಕ್ಕೆ ಅತಿ ಹೆಚ್ಚು ಸಿಂಥೆಟಿಕ್ ಡ್ರಗ್ಸ್‌ (ಎಂಡಿಎಂಎ) ಸರಬರಾಜು ಆಗುತ್ತಿರುವುದು ದೆಹಲಿಯಿಂದ ಎನ್ನಲಾಗಿದೆ. ಪ್ರಸಕ್ತ ವರ್ಷದಲ್ಲಿ ದೆಹಲಿಯಿಂದ ರಾಜ್ಯಕ್ಕೆ 150 ಕೋಟಿಗೂ ಅಧಿಕ ಡ್ರಗ್ಸ್‌ ಹರಿದುಬಂದಿದೆ. ದೆಹಲಿಯಲ್ಲಿ ಸಿಂಥೆಟಿಕ್ ಡ್ರಗ್ಸ್‌ ಉತ್ಪಾದನಾ ಘಟಕ ಆರಂಭವಾಗಿರುವ ಬಗ್ಗೆ ಪೊಲೀಸರಿಗೆ ಶಂಕೆ ಇದೆ. ದೆಹಲಿ ಪೊಲೀಸರು ಕೂಡ 150 ಕ್ಕೂ ಹೆಚ್ಚು ವಿದೇಶಿ ಡ್ರಗ್‌ಪೆಡ್ಲರ್‌ಗಳನ್ನು ಪತ್ತೆ ಹಚ್ಚಿ ಗಡಿಪಾರು ಮಾಡಿದ್ದಾರೆ.

ಥಾಯ್ಲೆಂಡ್‌ ಏಕೆ ಡ್ರಗ್ಸ್‌ ಮೂಲ?

- ಥಾಯ್ಲೆಂಡ್‌ನಲ್ಲಿ ಡ್ರಗ್ಸ್ ಸೇವನೆ ಮುಕ್ತ, ಹೈಡ್ರೋ ಗಾಂಜಾ ಬೇಸಾಯಕ್ಕೂ ಅಡ್ಡಿಯಿಲ್ಲ.

- ಥಾಯ್ಲೆಂಡ್‌ ದೇಶದ ಆರ್ಥಿಕತೆ ಪ್ರವಾಸೋದ್ಯಮದ ಮೇಲೆಯೇ ಅವಲಂಬಿತ

- ಹೀಗಾಗಿ ಅಲ್ಲಿ ಪ್ರವಾಸಿಗರು ಮತ್ತೇರಲು ಸಹ ಮುಕ್ತ ಅ‍ವಕಾಶ ಕಲ್ಪಿಸಲಾಗಿದೆ

- ಬ್ಯಾಂಕಾಕ್‌ ಹಾಗೂ ಫುಕೆಟ್‌ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಸಹ ನಡೆಸಲ್ಲ

- ಹೀಗಾಗಿ ಅಲ್ಲಿಂದ ಹೇರಳವಾಗಿ ಭಾರತ ಸೇರಿ ಅನೇಕ ಕಡೆ ಡ್ರಗ್ಸ್ ಸರಬರಾಜು

ಡ್ರಗ್ಸ್ ಮುಕ್ತ ರಾಜ್ಯಕ್ಕೆ ಪಣ

ಮಾದಕ ವಸ್ತುಗಳನ್ನು ಯಾರು ಬೆಂಬಲಿಸುತ್ತಾರೋ ಅವರು ಮನುಷ್ಯರಲ್ಲ. ಇಂಥ ಮಾದಕ ವಸ್ತುಗಳ ಮಾರಾಟಗಾರರು, ಬಳಕೆದಾರರ ವಿರುದ್ಧ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಸಮರ ಸಾರಿದ್ದು, ಕರ್ನಾಟಕವನ್ನು ಮಾದಕ ವ್ಯಸನ ಮುಕ್ತ ರಾಜ್ಯವಾಗಿ ರುಪಿಸುವುದೇ ನಮ್ಮ ಗುರಿ.

- ಡಾ। ಜಿ. ಪರಮೇಶ್ವರ, ಗೃಹ ಸಚಿವ