ಬೆಂಗಳೂರು[ಮಾ.04]: ಬೆಂಗಳೂರು ಟೆಕಿಯೊಬ್ಬರಿಗೆ ಮಾರಕ ಕೊರೋನಾ ಸೋಂಕು ದೃಢಪಟ್ಟಬೆನ್ನಲ್ಲೇ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ವಿಮಾನ ನಿಲ್ದಾಣ, ಬಂದರು, ರೈಲು ನಿಲ್ದಾಣ, ಪ್ರಮುಖ ಬಸ್‌ ನಿಲ್ದಾಣ, ಪ್ರವಾಸಿ ತಾಣಗಳಲ್ಲಿ ಸಾಕಷ್ಟುಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದ್ದು, ಆರೋಗ್ಯ ಇಲಾಖೆಯು ಸರ್ವಸನ್ನದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ.

ರಾಜ್ಯದ ಎಲ್ಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆಸ್ಪತ್ರೆಗಳು, ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಕೊರೋನಾ ಶಂಕಿತರು ಹಾಗೂ ಸೋಂಕಿತರ ಚಿಕಿತ್ಸೆಗಾಗಿ ಒಟ್ಟು 630 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ಗಳ ವ್ಯವಸ್ಥೆ ಮಾಡಲಾಗಿದೆ. 1700ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ವೈರಸ್‌ಗೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಎಲ್ಲೆಡೆ ಅಗತ್ಯ ಔಷಧ, ಎನ್‌95 ಮಾಸ್ಕ್‌ ಸೇರಿದಂತೆ ಎಲ್ಲ ವೈಯಕ್ತಿಕ ರಕ್ಷಣಾ ಸಾಮಗ್ರಿಗಳ ದಾಸ್ತಾನು ಇಡಲಾಗಿದೆ. ಪ್ರಯೋಗ ಶಾಲೆಗಳಲ್ಲಿ ಶಂಕಿತ ರೋಗಿಗಳ ಗಂಟಲಿನ ದ್ರವ(ಥ್ರೋಟ್‌ ಸ್ವಾಬ್‌)ಗಳ ಮಾದರಿ ಸಂಗ್ರಹಣೆ, ಪ್ಯಾಕಿಂಗ್‌ ಮತ್ತು ಸಾಗಾಣಿಕೆಗೆ ಸುರಕ್ಷಿತ ವ್ಯವಸ್ಥೆ ಮಾಡಲಾಗಿದೆ.

ಬೆಂಗ್ಳೂರಲ್ಲಿ ಕೊರೋನಾ ವೈರಸ್: ರೋಗ ಬರದಂತೆ ಹಿಂಗ್ ಮಾಡಿದ್ರೆ ಬೆಸ್ಟ್

ಈ ನಡುವೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಜಯನಗರದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಕೇಂದ್ರದಲ್ಲಿ ಕೊರೋನಾ ಮಾದರಿ ರಕ್ತ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಈವರೆಗೆ ರಕ್ತದ ಮಾದರಿಯನ್ನು ಪರೀಕ್ಷೆಗೆಂದು ಪುಣೆಗೆ ರವಾನಿಸಲಾಗುತ್ತಿತ್ತು.

ಸರ್ಕಾರಿ ಬಸ್ಸು ಹಾಗೂ ನಿಲ್ದಾಣಗಳಲ್ಲಿ ಸ್ವಚ್ಛತೆ ನಿರ್ವಹಣೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದೆ. ಶಾಲೆಗಳಲ್ಲಿ ಮಕ್ಕಳಿಗೆ ಶೀತ, ಜ್ವರ, ನೆಗಡಿ ಲಕ್ಷಣಗಳಿದ್ದರೆ ಕಡ್ಡಾಯ ರಜೆ ನೀಡಬೇಕು ಎಂದು ಶಿಕ್ಷಣ ಇಲಾಖೆಯಿಂದ ಆದೇಶಿಸಲಾಗಿದೆ.

ರೋಗ ಲಕ್ಷಣಗಳ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ವತಿಯಿಂದ ಹೆಚ್ಚು ಜನ ಸೇರುವ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರವಾಸಿ ತಾಣಗಳಲ್ಲಿ ಹೋರ್ಡಿಂಗ್‌ ಅಳವಡಿಸಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ಕರಪತ್ರಗಳನ್ನು ಹಂಚಲಾಗಿದೆ. ಬೀದಿ ನಾಟಕಗಳ ಮೂಲಕವೂ ಜನಜಾಗೃತಿ ಮೂಡಿಸಲಾಗಿದೆ.

ಬೆಂಗಳೂರು: ಟೆಕ್ಕಿಗೆ ಕೊರೊನಾ ವೈರಸ್, ಕಂಪನಿಗೆ ರಜೆ ಘೋಷಣೆ

ಪೋರ್ಟ್‌, ಏರ್‌ಪೋರ್ಟಲ್ಲಿ ತಪಾಸಣೆ:

ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ ವಿದೇಶ ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಆಗಮಿಸುವ ಪ್ರಯಾಣಿಕರನ್ನು ಥರ್ಮಲ್‌ ಸ್ಕಾ್ಯನರ್‌ ಮೂಲಕ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದೇ ಮಾದರಿಯ ತಪಾಸಣೆಯನ್ನು ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲೂ ಮಾಡಲಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈವರೆಗೂ ಸುಮಾರು 40 ಸಾವಿರಕ್ಕೂ ಅಧಿಕ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಶಂಕಿತ 245 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದೆ. ಈವರೆಗೂ ಬಂದಿರುವ 243 ವರದಿಗಳಲ್ಲಿ ಯಾರಲ್ಲೂ ಸೋಂಕು ದೃಢಪಟ್ಟಿಲ್ಲ.

ವಿದೇಶದಿಂದ ಬಂದವರ ತಪಾಸಣೆ:

ವಿದೇಶದಿಂದ ಆಗಮಿಸಿದ ಪ್ರವಾಸಿಗರು, ಪ್ರವಾಸ ಮುಗಿಸಿ ಬಂದವರು ಹಾಗೂ ವಿದ್ಯಾರ್ಥಿಗಳ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ದಾವಣಗೆರೆಯಲ್ಲಿ 12 ದೇಶಗಳ ಪ್ರವಾಸ ಕೈಗೊಂಡಿದ್ದ 14 ಪ್ರವಾಸಿಗರನ್ನು ತಪಾಸಣೆ ಮಾಡಲಾಗಿದೆ. ಹಾವೇರಿ, ಬಾಗಲಕೋಟೆಗಳಲ್ಲೂ ತಲಾ ಮೂವರನ್ನು ತಪಾಸಣೆ ಮಾಡಲಾಗಿದೆ. ಇದೇ ವೇಳೆ ಚೀನಾದಿಂದ ಹಿಂದಿರುಗಿದ ದಾವಣಗೆರೆ ಮೂಲದ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು 20 ದಿನಗಳಿಂದ ನಿರಂತರ ವೈದ್ಯಕೀಯ ನಿಗಾದಲ್ಲಿಡಲಾಗಿದೆ. ಎಲ್ಲೂ ಕೊರೋನಾ ವೈರಸ್‌ ಇರುವ ಕುರಿತು ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಿಕರಣ ನೀಡಿದೆ.

ಪ್ರವಾಸಿ ತಾಣಗಳಲ್ಲಿ ಕ್ರಮ:

ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೊಡಗಿನ ರಾಜಾಸೀಟ್‌, ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಶ್ರೀರಂಗಪಟ್ಟಣ, ಕೆಆರ್‌ಎಸ್‌, ಬೇಲೂರು, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ, ಗೋಕರ್ಣ, ಕಾರವಾರ, ಗಂಗಾವತಿ ಸೇರಿದಂತೆ ವಿವಿಧೆಡೆ ಕೊರೋನಾ ವೈರಸ್‌ ಕುರಿತು ಅರಿವು ಮೂಡಿಸುವ ಕರಪತ್ರ ಹಂಚಲಾಗುತ್ತಿದೆ. ಜೊತೆಗೆ ಈ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ವಿದೇಶಿ ಪ್ರವಾಸಿಗರ ಮಾಹಿತಿಯನ್ನು ಪಡೆಯುತ್ತಿರುವ ಆರೋಗ್ಯ ಇಲಾಖೆ ನಿಗದಿತ ಪ್ರದೇಶಗಳಲ್ಲಿ ಸಿಬ್ಬಂದಿ ನಿಯೋಜನೆ ಮಾಡಿದೆ. ಏತನ್ಮಧ್ಯೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮ ಗುಡ್ಡದಲ್ಲಿ ಕಳೆದ ಭಾರತ ಹುಣ್ಣಿಮೆ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಕ್ರೋಢೀಕರಣವಾದ ತ್ಯಾಜ್ಯಗಳನ್ನು ಹೊರ ಹಾಕಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಇದರ ಜತೆಗೆ ನೊಣಗಳ ಹಾವಳಿ ನಿಯಂತ್ರಣ, ಕುಡಿಯುವ ನೀರಿನ ಸ್ವಚ್ಛತೆಯತ್ತ ವಿಶೇಷ ಗಮನ ಹರಿಸಲಾಗುತ್ತಿದೆ.

ಕೊರೋನಾ ಎಫೆಕ್ಟ್: ಪತಿಯಿಂದ ಪತ್ನಿ ಬಾತ್ ರೂಮ್‌ನಲ್ಲಿ ಲಾಕ್...!

ಬೆಳಗಾವಿಯಲ್ಲಿ 9 ಮಂದಿ ಮೇಲೆ ತೀವ್ರ ನಿಗಾ

ಬೆಳಗಾವಿ ಜಿಲ್ಲೆಗೆ ವಿದೇಶದಿಂದ ಈವರೆಗೆ ಆಗಮಿಸಿರುವ 9 ಮಂದಿಯ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ. ದೆಹಲಿ, ಚೆನ್ನೈ, ಬೆಂಗಳೂರು ಮತ್ತಿತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ಪ್ರಯಾಣಿಕರನ್ನು ಟೆಸ್ಟ್‌ ಮಾಡಿದ ವೇಳೆ ನೆಗೆಟಿವ್‌ ಫಲಿತಾಂಶ ಬಂದಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಅವರಿಗೆ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ ಹೊರತು ಗೃಹಬಂಧನದಲ್ಲಿ ಇರಿಸಿಲ್ಲ. ಈ ಒಂಬತ್ತು ಮಂದಿಗೆ ಕೊರೋನಾ ದೃಢಪಟ್ಟಿತ್ತು ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಆದರೆ ಯಾರಿಗೂ ಕರೋನಾ ಇರುವುದು ಕಂಡುಬಂದಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಬೆಳಗಾವಿ ಏರ್‌ಪೋರ್ಟಲ್ಲಿ ನಿರ್ಲಕ್ಷ್ಯ: ಆರೋಪ

ಬೆಂಗಳೂರು, ಚೆನ್ನೈ, ಹೈದರಾಬಾದ್‌, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಿಮಾನ ಸೇವೆ ಒದಗಿಸುವ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕೊರೋನಾ ಪತ್ತೆ ತಡೆಗೆ ಯಾವುದೇ ಮುಂಜಾಗ್ರತಾ ಕ್ರಮವನ್ನು ಅಲ್ಲಿನ ಅಧಿಕಾರಿಗಳು ಕೈಗೊಂಡಿಲ್ಲ. ಪ್ರಯಾಣಿಕರ ತಪಾಸಣೆಯನ್ನೂ ಮಾಡುತ್ತಿಲ್ಲ. ಬದಲಾಗಿ ಜಾಗೃತಿಯನ್ನು ಮಾತ್ರ ಮೂಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಲಬುರಗಿ, ಬೀದರ್‌ ವಿಮಾನ ನಿಲ್ದಾಣಗಳಲ್ಲೂ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ ಎಂದು ಹೇಳಲಾಗಿದೆ.