ಬೆಂಗಳೂರು(ಜು.19): ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಿರುವುದರಿಂದ ಸೋಂಕಿತರಿಗೆ ಚಿಕಿತ್ಸೆ ನೀಡಲು ತೀವ್ರ ನಿಗಾ ಘಟಕಗಳ (ಐಸಿಯು) ಕೊರತೆ ಉಂಟಾಗಿರುವ ಈ ಹೊತ್ತಿನಲ್ಲಿ ಹಡಗುಗಳಲ್ಲಿ ಸರಕು ಸಾಗಣೆಗೆ ಬಳಸುವ ಕಂಟೈನರ್‌ಗಳನ್ನೇ ಐಸಿಯು ಘಟಕಗಳಾಗಿ ಅಭಿವೃದ್ಧಿಪಡಿಸಲಾಗಿದೆ. ರೈಲು ಬೋಗಿಗಳನ್ನು ಕೊರೋನಾ ಚಿಕಿತ್ಸಾ ಘಟಕಗಳನ್ನು ಪರಿವರ್ತಿಸಿರುವ ನಡುವೆಯೇ ಈ ಹೊಸ ಪ್ರಯೋಗ ನಡೆಸಲಾಗುತ್ತಿದೆ.

ಆ್ಯಂಟಿಜೆನ್‌ನಲ್ಲಿ ನೆಗೆಟಿವ್‌, ಲ್ಯಾಬ್‌ ಟೆಸ್ಟಲ್ಲಿ ಪಾಸಿಟಿವ್‌!

ಬೆಂಗಳೂರು ಮೂಲದ ರಿನ್ಯಾಕ್‌ ಎಂಬ ಕಂಪನಿಯು ಕಂಟೈನರ್‌ಗಳನ್ನು ಐಸಿಯು ಘಟಕಗಳಾಗಿ ಅಭಿವೃದ್ಧಿಪಡಿಸಿದೆ. ಈ ಮಾಡ್ಯುಲರ್‌ ಐಸಿಯುಗಳನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸುಲಭವಾಗಿ ಸಾಗಿಸಿ ಬಳಸಬಹುದು. ಕಂಟೈನರ್‌ಗಳಲ್ಲಿ ಐಸಿಯು ಘಟಕ ಅಭಿವೃದ್ಧಿ ಮಾಡಿರುವ ಈ ವಿನೂತನ ಪ್ರಯೋಗ ದೇಶದಲ್ಲೇ ಪ್ರಥಮ ಎನ್ನಲಾಗಿದೆ.

ಈ ಕಂಟೈನರ್‌ ಐಸಿಯುಗಳನ್ನು ಶನಿವಾರ ಪರಿಶೀಲನೆ ನಡೆಸಿ, ಕಂಪನಿಯ ತಜ್ಞರಿಂದ ವಿಸ್ತೃತ ಮಾಹಿತಿ ಪಡೆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಈ ವಿನೂತನ ಪ್ರಯೋಗದ ಬಗ್ಗೆ ಭಾರೀ ಮೆಚ್ಚುಗೆ ಸೂಚಿಸಿದರು.

ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಪ್ರಯೋಗ:

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ ಅವರು, ‘ಇಂತಹ ಕಂಟೈನರ್‌ಗಳನ್ನು ರಾಜ್ಯದಲ್ಲೂ ಬಳಕೆ ಮಾಡುವ ಉದ್ದೇಶವಿದ್ದು, ಮೊದಲಿಗೆ 10 ಕಂಟೈನರ್‌ಗಳನ್ನು ಬೆಂಗಳೂರಿನ ಮಲ್ಲೇಶ್ವರ ಕೆ.ಸಿ.ಜನರಲ್‌ ಆಸ್ಪತ್ರೆಗೆ ಒದಗಿಸಲಾಗುವುದು. ಅಲ್ಲಿನ ವೈದ್ಯರೇ ರೋಗಿಗಳಿಗೆ ಈ ಕಂಟೈನರ್‌ ಐಸಿಯುನಲ್ಲಿ ಚಿಕಿತ್ಸೆ ನೀಡಲಿದ್ದಾರೆ. ಪ್ರತಿ ಕಂಟೈನರ್‌ಗಳಲ್ಲಿ ಐದು ಹಾಸಿಗೆಗಳು ಇರಲಿವೆ. ರಿನ್ಯಾಕ್‌ ಕಂಪನಿ ತಮ್ಮದೇ ವೆಚ್ಚದಲ್ಲಿ ಈ ಐಸಿಯು ಅಭಿವೃದ್ಧಿಪಡಿಸಿ ನೀಡಿದೆ. ಕೋವಿಡ್‌ ನಂತರವೂ ಇವುಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಬಹುದು’ ಎಂದರು.

‘ತುರ್ತು ಸಂದರ್ಭಗಳು, ಅದರಲ್ಲೂ ನೈಸರ್ಗಿಕ ವಿಕೋಪದಂತಹ ದುರಂತಗಳು ಎದುರಾದಾಗ ಇಂಥ ಐಸಿಯುಗಳು ಹೆಚ್ಚು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಕೇವಲ 10ರಿಂದ 15 ದಿನಗಳಲ್ಲಿ ಸಿದ್ಧಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಈ ವರ್ಷವಿಡೀ ಆನ್‌ಲೈನ್‌ ಕ್ಲಾಸೇ ಗತಿ?: ಶಿಕ್ಷಣ ಇಲಾಖೆ ಮೂಲಗಳಿಂದಲೇ ಮಾಹಿತಿ

ಈ ಐಸಿಯುನಲ್ಲಿ ಏನಿರುತ್ತೆ?

ಜಾಗತಿಕ ಗುಣಮಟ್ಟದ ದೃಷ್ಟಿಯಲ್ಲಿರಿಸಿಕೊಂಡು ಈ ಕಂಟೈನರ್‌ ಐಸಿಯು ಸಿದ್ಧಪಡಿಸಲಾಗಿದೆ. ಆಮ್ಲಜನಕ ವ್ಯವಸ್ಥೆ, ಹವಾನಿಯಂತ್ರಿತ ವ್ಯವಸ್ಥೆಯಿದೆ. ಅಂತೆಯೇ ಕ್ಯಾಮೆರಾ ಕೂಡ ಇದ್ದು, ಆನ್‌ಲೈನ್‌ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಪರಿಕರಗಳನ್ನು ಅಳವಡಿಸಲಾಗಿದೆ. ಪ್ರತಿ ಕಂಟೈನರ್‌ನಲ್ಲಿ ಐದು ಹಾಸಿಗೆಗಳು ಇದ್ದು, ಅದಕ್ಕೆ ಇನ್ನೊಂದು ಕಂಟೈನರ್‌ ಸೇರಿದರೆ 10 ಬೆಡ್‌ಗಳಾಗುತ್ತವೆ.