Asianet Suvarna News Asianet Suvarna News

ಬೆಂಗಳೂರನ್ನು ಕಾಡುತ್ತಿದೆ ‘ಚಿಕ್ಕಪೇಟೆ ವೈರಸ್‌’!

ಚಿಕ್ಕಪೇಟೆಗೆ ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ಆಂಧ್ರ ವರ್ತಕರು, ಗ್ರಾಹಕರ ದಾಂಗುಡಿ|ಚಿಕ್ಕಪೇಟೆಯಲ್ಲಿ ಕೊರೋನಾ ಸೋಂಕು ಹೆಚ್ಚಾದ ಬಳಿಕವೇ ನಗರದಾದ್ಯಂತ ಪಸರಿಸಿದ ಸೋಂಕು| ಬಿಬಿಎಂಪಿ ಅಧಿಕಾರಿಗಳ ಅಸಹಾಯತೆ|

Coronavirus Cases Increasing in Chickpet in Bengaluru
Author
Bengaluru, First Published Jul 9, 2020, 7:31 AM IST

ಬೆಂಗಳೂರು(ಜು.09): ಕೊರೋನಾ ಸೋಂಕು ರಾಜ್ಯದಲ್ಲಿ ಶುರುವಾದಾಗ ತಬ್ಲೀಘಿ ಮೂಲ ರಾಜ್ಯವನ್ನು ಕಾಡಿದರೆ ಇದೀಗ ಬೆಂಗಳೂರನ್ನು ‘ಚಿಕ್ಕಪೇಟೆ ವೈರಸ್‌’ ಇನ್ನಿಲ್ಲದಂತೆ ಕಾಡುತ್ತಿದೆ!

"

ಹೌದು, ಲಾಕ್‌ಡೌನ್‌ ಸಡಿಲಗೊಳಿಸಿದ ಬೆನ್ನಲ್ಲೇ ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳಿಂದ ಅಲ್ಲಿನ ವರ್ತಕರು ಹಾಗೂ ತಮಿಳುನಾಡು, ಆಂಧ್ರಪ್ರದೇಶದಿಂದ ಗ್ರಾಹಕರು ಚಿಕ್ಕಪೇಟೆಯಲ್ಲಿ ಹೆಚ್ಚು ಸಕ್ರಿಯವಾದರು. ಮಹಾರಾಷ್ಟ್ರ, ತಮಿಳುನಾಡಿನಿಂದ ಆಗಮಿಸಿದ ಬಹುತೇಕರು ಕ್ವಾರಂಟೈನ್‌ ನಿಯಮ ಪಾಲಿಸಿಯೇ ಇಲ್ಲ. ಇದರಿಂದಾಗಿ ಬೆಂಗಳೂರಿನಲ್ಲಿ ಪಾದರಾಯನಪುರ, ಹೊಂಗಸಂದ್ರದ ಹಾಟ್‌ಸ್ಪಾಟ್‌ಗಳ ಬಳಿಕ ಚಿಕ್ಕಪೇಟೆ ಮತ್ತೊಂದು ಹಾಟ್‌ಸ್ಪಾಟ್‌ ಆಗಿ ಬದಲಾಯಿತು. ಆದರೆ, ಪಾದರಾಯನಪುರ, ಹೊಂಗಸಂದ್ರಕ್ಕಿಂತ ಅತಿ ಹೆಚ್ಚು ಅಪಾಯವನ್ನು ಚಿಕ್ಕಪೇಟೆ ಸೋಂಕು ಸೃಷ್ಟಿಸಿದೆ.

ಡೇಂಜರ್..ಡೇಂಜರ್..! ಕೋವಿಡ್ 19 ನ ಹಾಟ್‌ಸ್ಪಾಟ್‌ ಆಗಿದೆ ಚಿಕ್ಕಪೇಟೆ

ಜೂ.25 ರಂದು 1207 ರಷ್ಟುಸೋಂಕು ಮಾತ್ರ ಇದ್ದ ಬೆಂಗಳೂರಿನಲ್ಲಿ ಜೂ.21ರಂದು ಚಿಕ್ಕಪೇಟೆಯ ಕೊರೋನಾ ಸ್ಫೋಟವಾದ ಬೆನ್ನಲ್ಲೇ ನಗರಾದ್ಯಂತ ಸೋಂಕಿನ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದೀಗ 12,509 ಮಂದಿಗೆ ಸೋಂಕು ತಗುಲಿದ್ದು 177 ಮಂದಿ ಮೃತಪಟ್ಟಿದ್ದಾರೆ. ಮೊದಲಿಗೆ ಪಾದರಾಯನಪುರ, ಹೊಂಗಸಂದ್ರದಲ್ಲಿ ಸೋಂಕು ಕಾಣಿಸಿಕೊಂಡರೂ ಬೇರೆ ಕಡೆ ಹರಡಲಿಲ್ಲ. ಜೂನ್‌ 3ನೇ ವಾರದಲ್ಲಿ ಚಿಕ್ಕಪೇಟೆಯಲ್ಲಿ ಕೊರೋನಾ ವೈರಸ್‌ ತನ್ನ ಹರಡುವಿಕೆ ಶುರು ಮಾಡಿತು. ಸಜ್ಜನ್‌ ಶಾ ಮಾರುಕಟ್ಟೆ, ಚಿಕ್ಕಪೇಟೆ ಪ್ಲಾಜಾ, ಮಾಮುಲ್‌ಪೇಟ್‌ನ ಎಂ.ಎಸ್‌. ಪ್ಲಾಜಾ, ಕಿಲಾರಿ ರಸ್ತೆ, ಕಬ್ಬನ್‌ಪೇಟೆ ರಸ್ತೆಯಲ್ಲಿ ಜೂನ್‌ 25ರ ವೇಳೆಗೆ 20ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿತ್ತು.
ಪ್ರಮುಖ ವ್ಯಾಪಾರಿ ತಾಣವಾದ ಚಿಕ್ಕಪೇಟೆಯಲ್ಲಿ ನಿತ್ಯ 1.5 ಲಕ್ಷದಿಂದ 2 ಲಕ್ಷ ಜನರು ಖರೀದಿಗಾಗಿ ಮುಗಿ ಬೀಳುತ್ತಾರೆ. ಇದರಿಂದ ಚಿಕ್ಕಪೇಟೆ ಸೋಂಕು ನಗರಾದ್ಯಂತ ಅತಿ ಶೀಘ್ರವಾಗಿ ಹರಡಿತು. ಈವರೆಗೆ 70ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದ್ದು, ನಿಖರವಾದ ಅಂಕಿ-ಅಂಶ ಬಿಬಿಎಂಪಿ ಅಧಿಕಾರಿಗಳ ಬಳಿಯೇ ಲಭ್ಯವಿಲ್ಲ.

ಸೀಲ್‌ಡೌನ್‌ ವೈಫಲ್ಯ:

ಸೋಂಕು ಹೆಚ್ಚಾದಾಗ ಬಿಬಿಎಂಪಿ ಅಧಿಕಾರಿಗಳು ಜೂ.21ರಂದು ಚಿಕ್ಕಪೇಟೆಯನ್ನು ಸೀಲ್‌ಡೌನ್‌ ಮಾಡಿದರು. ಆದರೆ ಕಂಟೈನ್‌ಮೆಂಟ್‌ ಪ್ರದೇಶದ ವ್ಯಾಖ್ಯಾನ ಬದಲಾಗಿದ್ದರಿಂದ ಹೆಚ್ಚು ಪ್ರದೇಶವನ್ನು ಸೀಲ್‌ಡೌನ್‌ ಮಾಡದೆ ಪ್ರಕರಣ ವರದಿಯಾದ ಸ್ಥಳಗಳನ್ನು ಮಾತ್ರ ಸೀಲ್‌ಡೌನ್‌ ಮಾಡಲಾಗಿತ್ತು. ಇದರಿಂದ ಮತ್ತಷ್ಟುಸೋಂಕು ಹರಡಿತು. ಇದನ್ನು ಅರಿತ ಸ್ಥಳೀಯ ವ್ಯಾಪಾರಿಗಳು ಜೂ.25 ರಿಂದ ಸ್ವಯಂ ಲಾಕ್‌ಡೌನ್‌ ಹೇರಿಕೊಂಡರು. ಆದರೆ, ಸ್ವಯಂ ಲಾಕ್‌ಡೌನ್‌ ನಿರ್ಣಯಕ್ಕೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ನಗರಕ್ಕೆ ಚಿಕ್ಕಪೇಟೆಯ ಸೋಂಕಿನ ಕೊಡುಗೆ ಮತ್ತಷ್ಟು ಹೆಚ್ಚಾಯಿತು ಎಂದು ತಿಳಿದುಬಂದಿದೆ.

ಬಿಬಿಎಂಪಿ ಅಧಿಕಾರಿಗಳ ಅಸಹಾಯತೆ:

ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದು, ಚಿಕ್ಕಪೇಟೆಯಲ್ಲಿ ಸೋಂಕು ವರದಿಯಾದ ಪ್ರದೇಶಗಳನ್ನು ಕಟ್ಟುನಿಟ್ಟಾಗಿ ಸೀಲ್‌ಡೌನ್‌ ಮಾಡಿದ್ದೇವೆ. ನಿತ್ಯ 1 ಲಕ್ಷಕ್ಕೂ ಹೆಚ್ಚು ಮಂದಿ ಗ್ರಾಹಕರು ಇಲ್ಲಿಗೆ ಆಗಮಿಸುತ್ತಾರೆ. ನಗರದ ಮೂಲೆ-ಮೂಲೆಯಿಂದ ಚಿನ್ನಾಭರಣ, ಬಟ್ಟೆ, ಎಲೆಕ್ಟ್ರಿಕಲ್‌ ಸಾಮಗ್ರಿ, ಅಡುಗೆ ಮನೆ ಸಾಮಾಗ್ರಿ ಖರೀದಿಗೆ ಬರುತ್ತಾರೆ. ಅವರೆಲ್ಲರೂ ಈ ವ್ಯಾಪಾರಿಗಳ ಪ್ರಾಥಮಿಕ ಸಂಪರ್ಕಿತರಾಗಿದ್ದು, ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದರಿಂದಲೂ ಚಿಕ್ಕಪೇಟೆ ಕೊರೋನಾ ಹರಡುವಿಕೆಯಲ್ಲಿ ಮೂಲವಾಗಿರಬಹುದು. ಆದರೆ, ಇದನ್ನು ನಿಖರವಾಗಿ ಹೇಳಲಾಗದು ಎಂದರು.
 

Follow Us:
Download App:
  • android
  • ios