ಬೆಂಗಳೂರು [ಮಾ.17]:  ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ರಾಜ್ಯಕ್ಕೆ ಆಗಮಿಸಿರುವ ವಿದೇಶಿ ಪ್ರಯಾಣಿಕರನ್ನು ಟ್ರ್ಯಾಕ್‌ ಮಾಡಲು ದೇಶದಲ್ಲೇ ಮೊದಲ ಬಾರಿಗೆ ‘ಐವಿಆರ್‌ಎಸ್‌’ (ಇಂಟರಾಕ್ಟಿವ್‌ ವಾಯ್ಸ್ ರೆಸ್ಪಾನ್ಸ್‌ ಸಿಸ್ಟಂ) ವ್ಯವಸ್ಥೆ ಬಳಕೆ ಆರಂಭಿಸಲಾಗಿದೆ. ಜತೆಗೆ, ರಾಜ್ಯದಲ್ಲಿ ಪ್ರಸ್ತುತ ಒಂದು ಹಾಗೂ ಎರಡನೇ ಹಂತದ ನಡುವೆ ಇರುವ ಕೊರೋನಾ ಸೋಂಕು ಮುಂದಿನ ಹಂತಕ್ಕೆ ಹೋಗದಂತೆ ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಕಳೆದ 14 ದಿನಗಳಲ್ಲಿ ರಾಜ್ಯಕ್ಕೆ ಆಗಮಿಸಿರುವ 42 ಸಾವಿರ ವಿದೇಶಿ ಪ್ರಯಾಣಿಕರನ್ನು ಒಂದೇ ವೇಳೆಗೆ ಸಂಪರ್ಕಿಸಿ ಅವರ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಲು ಐವಿಆರ್‌ಎಸ್‌ (ಇಂಟರಾಕ್ಟಿವ್‌ ವಾಯ್ಸ್ ರೆಸ್ಪಾನ್ಸ್‌ ಸಿಸ್ಟಂ) ವ್ಯವಸ್ಥೆ ಬಳಸುತ್ತಿದ್ದೇವೆ. ದೇಶದಲ್ಲೇ ಇಂತಹ ತಂತ್ರಜ್ಞಾನದ ಬಳಕೆಗೆ ಮುಂದಾಗುತ್ತಿರುವ ಮೊದಲ ರಾಜ್ಯ ನಮ್ಮದು ಎಂದು ಹೇಳಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿದೇಶಿ ಪ್ರಯಾಣಿಕರನ್ನು ತಪಾಸಣೆ ನಡೆಸಿ ಸ್ವಯಂ ಘೋಷಣೆ ಪತ್ರದ ಮೂಲಕ ಅವರ ದೂರವಾಣಿ ಸಂಖ್ಯೆ, ಇ-ಮೇಲ್‌, ಮನೆ ವಿಳಾಸ ಹಾಗೂ ಆರೋಗ್ಯ ವಿವರಗಳನ್ನು ತೆಗೆದುಕೊಂಡಿದ್ದೇವೆ. ಈ ಸಂಪರ್ಕ ಸಂಖ್ಯೆಗಳ ಆಧಾರದ ಮೇಲೆ ಅಷ್ಟೂಮಂದಿಯನ್ನು ಒಂದೇ ಬಾರಿ ಐವಿಆರ್‌ಎಸ್‌ ಮೂಲಕ ಸಂಪರ್ಕಿಸಬಹುದು. ಈ ಮೂಲಕ 42 ಸಾವಿರ ಮಂದಿಯ ಆರೋಗ್ಯ ವಿವರಗಳನ್ನೂ ಒಂದೇ ಬಾರಿಗೆ ಕಲೆ ಹಾಕಲು ಸಾಧ್ಯವಿದೆ ಎಂದು ಹೇಳಿದರು.

ಕಾರ್ಯನಿರ್ವಹಣೆ ಹೇಗೆ:

ವಿದೇಶದಿಂದ ಬಂದ ಪ್ರಯಾಣಿಕರಿಗೆ ಐವಿಆರ್‌ಎಸ್‌ ಮೂಲಕ ವ್ಯವಸ್ಥೆಯೇ ಕರೆ ಮಾಡುತ್ತದೆ. ಈ ವೇಳೆ ಐವಿಆರ್‌ಎಸ್‌ ಹಾಗೂ ಕರೆ ಸ್ವೀಕರಿಸಿರುವವರ ನಡುವೆ ಸಂವಹನ ನಡೆಯುತ್ತದೆ. ಉದಾ: ಐವಿಆರ್‌ಎಸ್‌ ಮೂಲಕ ಜನರೇಟ್‌ ಆದ ಕರೆ ಸ್ವೀಕರಿಸಿದ ವ್ಯಕ್ತಿಗೆ ಪ್ರಾಥಮಿಕ ಮಾಹಿತಿಯನ್ನು ವ್ಯವಸ್ಥೆ ಕೇಳುತ್ತದೆ. ಬಳಿಕ ಕೊರೋನಾ ಸೋಂಕಿನ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳಿವೆಯೇ ಎಂದು ಪ್ರಶ್ನಿಸಬಹುದು. ಇದಕ್ಕೆ ಉತ್ತರ ಪಡೆಯಲು ‘ಹೌದು’ ಎಂದಾದರೆ ‘1ನ್ನು’ ಒತ್ತಿ, ‘ಇಲ್ಲ’ ಎಂದಾದರೆ ‘2ನ್ನು’ ಒತ್ತಿ ಎಂದು ಹೇಳಬಹುದು.

ಕರೋನಾ ಕಾಟ; ಕಲ್ಯಾಣ ಕರ್ನಾಟಕ ನಿಟ್ಟುಸಿರು ಬಿಡುವ ಸುದ್ದಿ ಕೊಟ್ಟ ಕೇಂದ್ರ.

ಈ ರೀತಿ ಸಂಗ್ರಹಿಸಿದ ದತ್ತಾಂಶವನ್ನು ಆರೋಗ್ಯವಂತರು ಹಾಗೂ ಅನಾರೋಗ್ಯ ಸಮಸ್ಯೆಯುಳ್ಳವರು ಎಂದು ವರ್ಗೀಕರಣ ಮಾಡಲಾಗುವುದು. ಅನಾರೋಗ್ಯ ಸಮಸ್ಯೆಯುಳ್ಳವರಿಗೆ ಕೂಡಲೇ 104 ಸಹಾಯವಾಣಿ ಅಥವಾ ಹತ್ತಿರದ ಕೊರೋನಾ ಫಸ್ಟ್‌ ರೆಸ್ಪಾನ್ಸ್‌ ಆಸ್ಪತ್ರೆಗೆ ತೆರಳಲು ಸಲಹೆ ನೀಡಲಾಗುವುದು. ಈ ರೀತಿಯ ವ್ಯವಸ್ಥೆಯಿಂದ ಒಂದೇ ದಿನ 42 ಸಾವಿರ ಜನರೊಂದಿಗೂ ಸಹ ಸಂಪರ್ಕ ಸಾಧಿಸಬಹುದು ಎಂದು ಸಚಿವ ಡಾ.ಕೆ. ಸುಧಾಕರ್‌ ವಿವರಿಸಿದರು.

‘ವಾರ್‌ ರೂಂ’ ಸಿದ್ಧತೆ:

ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಸೋಂಕು ಒಂದು ಹಾಗೂ ಎರಡನೇ ಹಂತದ ನಡುವೆ ಇದೆ. ಇದು ಮುಂದಿನ ಹಂತಕ್ಕೆ ಹೋಗದಂತೆ ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತಿದ್ದೇವೆ. ಒಂದು ವೇಳೆ ಸೋಂಕು ಮುಂದಿನ ಹಂತ ತಲುಪಿದರೆ ಉಂಟಾಗಬಹುದಾದ ತೀವ್ರತೆ ಎದುರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲದೆ ಹೆಚ್ಚುವರಿ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಖಾಲಿ ಕಟ್ಟಡಗಳನ್ನು ಗುರುತಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವಂತೆ ಮೊದಲ ಹಂತ ಎಂದರೆ ಬೇರೆ ದೇಶದಿಂದ ಕೊರೋನಾ ಸೋಂಕಿತರು ದೇಶಕ್ಕೆ ಆಗಮಿಸುವುದು. ಎರಡನೇ ಹಂತ ಎಂದರೆ ವಿದೇಶದಿಂದ ಬಂದ ಸೋಂಕಿತರಿಂದ ಸ್ಥಳೀಯರಿಗೆ ಸೋಂಕು ತಗಲುವುದು. 3ನೇ ಹಂತವೆಂದರೆ ಒಂದು ಸಮುದಾಯಕ್ಕೆ ಕೊರೋನಾ ಸೋಂಕು ಹರಡುವುದು. 4ನೇ ಹಂತವೆಂದರೆ ಸೋಂಕು ಸಾಂಕ್ರಾಮಿಕ ಪಿಡುಗಾಗಿ ಇಡೀ ದೇಶಕ್ಕೆ ವ್ಯಾಪಿಸುವುದು. ಅದೃಷ್ಟವಶಾತ್‌ ನಾವು ಮೊದಲ ಹಾಗೂ ಎರಡನೇ ಹಂತದ ನಡುವೆ ಇದ್ದೇವೆ. ಇದನ್ನು ಇದೇ ಹಂತದಲ್ಲಿ ನಿಯಂತ್ರಿಸಲು ಎಲ್ಲಾ ಕ್ರಮಗಳನ್ನೂ ಕೈಗೊಳ್ಳುತ್ತಿದ್ದೇವೆ ಎಂದು ಸುಧಾಕರ್‌ ತಿಳಿಸಿದರು.

ಒಂದು ವೇಳೆ ಮೂರನೇ ಹಂತ ತಲುಪಿದರೆ ಅಂತಹ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ಮಾತ್ರವೇ ಸಾಧ್ಯವಾಗದೆ ಇರಬಹುದು. ಹೀಗಾಗಿ ಖಾಲಿ ಕಟ್ಟಡಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಬಂದಾಗ ಅಲ್ಲೂ ಕೊರೋನಾ ಶಂಕಿತರು ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗುವುದು. ಇಂತಹ ಕಡೆ ಐಸಿಯು, ವೆಂಟಿಲೇಟರ್‌ ವ್ಯವಸ್ಥೆ ಒದಗಿಸಲು ಆಗುವ ವೆಚ್ಚದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹೇಳಿದರು.

ಇದಲ್ಲದೆ, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಹದಿನೇಳು ವೈದ್ಯಕೀಯ ಕಾಲೇಜುಗಳಲ್ಲಿ ‘ವಾರ್‌ ರೂಂ’ ಸಿದ್ಧತೆ ಮಾಡಿಕೊಳ್ಳಲಾಗುವುದು. ಜಿಲ್ಲಾ ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಿ ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ‘ವಾರ್‌ ರೂಂ‘ ನೆರವಾಗಲಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಸಭೆ ನಡೆಸಿ ಚರ್ಚಿಸಲೂ ಸಹ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ವೈದ್ಯಕೀಯ ಕಾಲೇಜುಗಳಲ್ಲಿ ಹೆಲ್ಪ್‌ ಡೆಸ್ಕ್‌:

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಸಮನ್ವಯಕ್ಕಾಗಿ ಎಲ್ಲಾ ವೈದ್ಯಕೀಯ ಕಾಲೇಜುಗಳು ಹಾಗೂ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಲ್ಪ್‌ ಡೆಸ್ಕ್‌ ಸ್ಥಾಪಿಸಲಾಗುವುದು. ಅಲ್ಲದೆ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 150ರಿಂದ 250 ಹಾಸಿಗೆಗಳ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಎರಡು ತಿಂಗಳ ಮಟ್ಟಿಗೆ ತಾತ್ಕಾಲಿಕವಾಗಿ ಅಗತ್ಯವಿರುವ ಸಿಬ್ಬಂದಿಯನ್ನೂ ನೇಮಿಸುತ್ತೇವೆ. ಪ್ರತಿ ದಿನವೂ ಯಾವ ರೀತಿಯಲ್ಲಿ ಕೊರೋನಾ ತಡೆಗೆ ಕ್ರಮ ವಹಿಸುತ್ತಿದ್ದಾರೆ ಎಂಬುದನ್ನು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ತಿಳಿದುಕೊಳ್ಳಲಾಗುವುದು ಎಂದು ಹೇಳಿದರು.