ವದಂತಿಗಳಿಗೆ ಕಿವಿಗೊಡಬೇಡಿ| ಆರೋಗ್ಯ ಇಲಾಖೆ ಸಿಬ್ಬಂದಿ ಅನುಭವದ ಮಾತು| ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಮ್ಮನ್ನು ಕರೆದೊಯ್ಯುವ ವಾಹನ ಚಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು| ಅವರೊಂದಿಗೆ ಪ್ರತಿದಿನ ಕಚೇರಿಗೆ ಹೋಗುತ್ತಿದ್ದ ಎಲ್ಲ ಸಿಬ್ಬಂದಿಯನ್ನು ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು|

ಬೆಂಗಳೂರು(ಜು.27): ವದಂತಿಗಳಿಗೆ ಕಿವಿಗೊಡದೇ ಮನಸ್ಸು ಗಟ್ಟಿ ಮಾಡಿಕೊಂಡು ಜನರಿಂದ ದೂರ ಉಳಿದಲ್ಲಿ ಕೊರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗಬಹುದು, ಕೊರೋನಾ ಮಾರಣಾಂತಿಕ ಕಾಯಿಲೆ ಅಲ್ಲ, ಬೇರೆ ಯಾವುದೇ ಗಂಭೀರ ಕಾಯಿಲೆ ಇಲ್ಲದಿದ್ದರೆ ಜೀವಕ್ಕೆ ಏನೂ ಅಪಾಯವಿಲ್ಲ. ಸೋಂಕು ತಗುಲಿ ಚಿಕಿತ್ಸೆಯಿಂದ ಗುಣಮುಖರಾಗಿರುವ ಆರೋಗ್ಯ ಇಲಾಖೆಯ ಕ್ಷಯರೋಗಿಗಳ ವಿಭಾಗದ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯೊಬ್ಬರ ಅನುಭವದ ಮಾತಿದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಕನ್ನಡಪ್ರಭ’ ಜೊತೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಮ್ಮನ್ನು ಕರೆದೊಯ್ಯುವ ವಾಹನ ಚಾಲಕನಿಗೆ ಜೂ.18ಕ್ಕೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರೊಂದಿಗೆ ಪ್ರತಿದಿನ ಕಚೇರಿಗೆ ಹೋಗುತ್ತಿದ್ದ ಎಲ್ಲ ಸಿಬ್ಬಂದಿಯನ್ನು ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಜೊತೆಗೆ, ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಈ ವೇಳೆ ನನ್ನ ಜೊತೆ ಸೇವೆ ಸಲ್ಲಿಸುವ ಸುಮಾರು 10ಕ್ಕೂ ಹೆಚ್ಚು ಮಂದಿಗೆ ಸೋಂಕಿರುವುದು ದೃಢಪಟ್ಟಿತ್ತು. ಜೂ.24ರಂದು ನನಗೂ ಸೋಂಕು ತಗುಲಿರುವುದು ದೃಢವಾಯಿತು. ಬಳಿಕ ಜಯನಗರದ ಜನರಲ್‌ ಆಸ್ಪತ್ರೆಯಲ್ಲಿ ಎರಡು ದಿನ ಚಿಕಿತ್ಸೆ ನೀಡಿ, ರವಿಶಂಕರ್‌ ಗುರೂಜಿ ಆಶ್ರಮದಲ್ಲಿ 10 ದಿನಗಳ ಕಾಲ ಆರೈಕೆ ಪಡೆದು ಗುಣಮುಖಳಾದೆ. ಜು.2ರಂದು ಮನೆಗೆ ಬಂದಿದ್ದೇನೆ ಎಂದು ವಿವರಿಸಿದರು.

ಕೊರೋನಾ ಸೋಂಕಿತನ ಪರದಾಟ: 4 ದಿನದಿಂದ ಕಾದರೂ ಬರಲಿಲ್ಲ ಆ್ಯಂಬುಲೆನ್ಸ್‌

ಆಶ್ರಮದಲ್ಲಿ ಪೌಷ್ಟಿಕಾಂಶಭರಿತ ಆಹಾರ ನೀಡುತ್ತಿದ್ದರು. ಜತೆಗೆ ರೋಗ ನಿರೋಧಕ ಮಾತ್ರೆಗಳು ನೀಡುತ್ತಿದ್ದರು. ಜೊತೆಯಲ್ಲಿ ಇದ್ದ ಬೇರೆಯವರ ಜೊತೆ ಆರಾಮವಾಗಿ ದಿನ ಕಳೆಯುತ್ತಿದ್ದೆ. ನಮ್ಮ ಜೊತೆ ಇದ್ದ ಯಾರಿಗೂ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಲಿಲ್ಲ. ಎಲ್ಲರೂ ಗುಣಮುಖರಾಗಿದ್ದಾರೆ. ಕೊರೋನಾ ಸೋಂಕು ತಗುಲಿದೆ ಎಂಬ ಭೀತಿಯಿಂದ ಕೆಲವರು ಆತ್ಮಹತ್ಯೆಗೆ ಶರಣಾಗುವುದು ಅತ್ಯಂತ ಮೂರ್ಖತನದ ನಿರ್ಧಾರ ಎಂದರು.

ನೆರೆಹೊರೆಯವರಿಂದ ಮಾನಸಿಕ ಹಿಂಸೆ!

ಕೊರೋನಾ ಸೋಂಕಿತರನ್ನು ಜನರು ಅಸ್ಪ್ರಶ್ಯರಂತೆ ನೋಡುತ್ತಾರೆ. ನಮ್ಮ ಮಕ್ಕಳನ್ನು ಮಾತನಾಡುವುದಕ್ಕೂ ನೆರೆಹೊರೆಯವರು ಹಿಂಜರಿಯುತ್ತಿದ್ದಾರೆ. ನಮ್ಮ ಕುಟುಂಬವೇ ವೈರಸ್‌ನ್ನು ಸೃಷ್ಟಿಮಾಡಿ ಇತರರಿಗೆ ಹರಡುತ್ತಿರುವಂತೆ ನೋಡಿದರು. ಈ ವಿಷಯದಲ್ಲಿ ಮಾನಸಿಕವಾಗಿ ಸಾಕಷ್ಟು ನೊಂದಿದ್ದೇನೆ. ನೆನಪಿಸಿಕೊಂಡರೆ ಈಗಲೂ ಬೇಸರವಾಗುತ್ತಿದೆ. ಈ ಹಿಂಸೆಯಿಂದಾಗಿ ಮೂರು ಕೆ.ಜಿ ತೂಕ ಕಡಿಮೆಯಾಗಿದ್ದೇನೆ. ಜನರಲ್ಲಿನ ಈ ವರ್ತನೆ ಬದಲಾಗಬೇಕು ಎಂದು ಮನವಿ ಮಾಡಿದರು.