ಬೆಂಗಳೂರು(ಜು.27): ಕೊರೋನಾ ಸೋಂಕು ದೃಢಪಟ್ಟ ಬಗ್ಗೆ ಮಾಹಿತಿ ನೀಡುವ ಪಾಲಿಕೆ, ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡುವಲ್ಲಿ ನಿರ್ಲಕ್ಷ್ಯ ಮಾಡುವ ಪ್ರಕರಣಗಳು ಮುಂದುವರೆದಿದೆ. ಸೋಂಕು ದೃಢಪಟ್ಟು 4 ದಿನವಾದರೂ ಸೋಂಕಿತರ ಮನೆಗೆ ಆ್ಯಂಬುಲೆನ್ಸ್‌ ಕಳಿಸದೇ ಇಡೀ ಕುಟುಂಬದ ಸದಸ್ಯರನ್ನು ಆತಂಕಕ್ಕೆ ದೂಡಿದ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ವೈಯ್ಯಾಲಿಕಾವಲ್‌ನಲ್ಲಿ ನೆಲೆಸಿರುವ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು 40 ವರ್ಷದ ವ್ಯಕ್ತಿಗೆ ಸೋಂಕಿರುವುದು ಗುರುವಾರ ದೃಢವಾಗಿದೆ. ಈ ಬಗ್ಗೆ ಪಾಲಿಕೆ ಸಿಬ್ಬಂದಿ ಕರೆ ಮಾಡಿ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಆದರೆ, ಮೂರು ದಿನ ಕಳೆದರೂ ಯಾರೂ ಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಚಿಕಿತ್ಸೆ ಸಿಗದೆ ಬಿಬಿಎಂಪಿ ನೌಕರ ಸಾವು: ಹಾಸಿಗೆ ಇಲ್ಲವೆಂದ ಆಸ್ಪತ್ರೆ ಸಿಬ್ಬಂದಿ

ನಾನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, 2 ದಿನಕ್ಕೊಮ್ಮೆ ಡಯಾಲಿಸಿಸ್‌ ಮಾಡಿಸಿಕೊಳ್ಳಬೇಕು. ಈಗಾಗಲೇ ಮೂರು ದಿನ ಕಳೆದಿದೆ. ಹೀಗಿರುವಾಗ ಮುಂದೇನಾಗುತ್ತದೆ ಎಂಬ ಆತಂಕ್ಕ ಕಾಡುತ್ತಿದೆ. ಆದ್ದರಿಂದ ತಕ್ಷಣ ತಮ್ಮನ್ನು ಡಯಾಲಿಸಿಸ್‌ ವ್ಯವಸ್ಥೆಯಿರುವ ಕೆ.ಸಿ.ಜನರಲ್‌ ಇಲ್ಲವೇ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ಎಂದು ಬೇಡಿಕೊಂಡಿದ್ದು, ವಿಡಿಯೋ ವೈರಲ್‌ ಆಗಿದೆ.

24 ಗಂಟೆಯಿಂದ ಆ್ಯಂಬುಲೆನ್ಸ್‌ಗಾಗಿ ಕಾಯುತ್ತಿರುವ ಆಟೋ ಚಾಲಕ

ಕೊರೋನಾ ಸೋಂಕು ತಗುಲಿದ್ದು, ಒಂದು ಗಂಟೆಯೊಳಗೆ ಆ್ಯಂಬುಲೆನ್ಸ್‌ ವ್ಯವಸ್ಥೆಯಾಗಲಿದೆ ಎಂದು ಹೇಳಿದ ಪಾಲಿಕೆ ಅಧಿಕಾರಿಗಳು 24 ಗಂಟೆಯಾದರೂ ಯಾವುದೇ ವಾಹನ ಕಳಿಸಿಲ್ಲ. ಈ ಬಗ್ಗೆ ಈವರೆಗೂ ಯಾವುದೇ ಕರೆ ಕೂಡಾ ಬಂದಿಲ್ಲ ಎಂದು ಸುದ್ದುಗುಂಟೆ ಪಾಳ್ಯದ ಆಟೋ ಚಾಲಕರೊಬ್ಬರು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶುಕ್ರವಾರ ನಡೆದ ರಾರ‍ಯಂಡಮ್‌ ಟೆಸ್ಟ್‌ನಲ್ಲಿ ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದೆ. ಸೋಂಕು ತಗುಲಿರುವ ಸಂಬಂಧ ಬಿಬಿಎಂಪಿ ಸಿಬ್ಬಂದಿ ಶನಿವಾರ ಸಂಜೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೂ, ಈವರೆಗೂ ಅ್ಯಂಬುಲೆನ್ಸ್‌ ಬಂದಿಲ್ಲ. ಅಲ್ಲದೆ, ಹೊಟ್ಟೆನೋವು ಮತ್ತು ಬೇಧಿಯಾಗುತ್ತಿದ್ದು, ಬೇರೆ ಯಾವುದೇ ಲಕ್ಷಣಗಳು ಇಲ್ಲ. ಆದರೂ ಭಯವಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.