Asianet Suvarna News Asianet Suvarna News

Covid-19 Vaccine: 3ನೇ ಡೋಸ್‌ಗೆ ಮುಂಚೂಣಿ ಕಾರ್ಯಕರ್ತರೇ ಹಿಂದೇಟು..!

*  ಅರ್ಹ 7 ಲಕ್ಷದಲ್ಲಿ ಬೂಸ್ಟರ್‌ ಡೋಸ್‌ ಪಡೆದವರು ಕೇವಲ 1.2 ಲಕ್ಷ
*  ಮುನ್ನೆಚ್ಚರಿಕೆ ಡೋಸ್‌ಗೆ ಹಿರಿಯರ ಉತ್ಸಾಹ, ಇನ್ನುಳಿದವರ ನಿರುತ್ಸಾಹ
*  ಹಿರಿಯ ನಾಗರಿಕರು ಮುಂದು
 

Corona Frontline Workers Hesitant to Take the 3rd Dose of Covid Vaccine in Karnataka grg
Author
Bengaluru, First Published Feb 8, 2022, 5:26 AM IST | Last Updated Feb 8, 2022, 5:26 AM IST

ಬೆಂಗಳೂರು(ಫೆ.08):  ರಾಜ್ಯದಲ್ಲಿ(Karnataka) ಕೋವಿಡ್‌(Covid-19) ವಿರುದ್ಧ ಮುನ್ನೆಚ್ಚರಿಕೆ ಡೋಸ್‌ ನೀಡಲು ಪ್ರಾರಂಭವಾಗಿ ಒಂದು ತಿಂಗಳು ಸಮೀಪಿಸುತ್ತಿದೆ. 60 ವರ್ಷ ಮೇಲ್ಪಟ್ಟಸಹ ಅಸ್ವಸ್ಥತೆ ಹೊಂದಿರುವವರಲ್ಲಿ ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಹೆಚ್ಚಿನ ಉತ್ಸಾಹ ಕಂಡುಬಂದಿದ್ದರೂ ಮುಂಚೂಣಿ ಕಾರ್ಯಕರ್ತರಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೋವಿನ್‌ ಪೋರ್ಟಲ್‌ನ ಮಾಹಿತಿ ಪ್ರಕಾರ ಸುಮಾರು 21 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಅರ್ಹತೆ ಹೊಂದಿದ್ದಾರೆ. ಆದರೆ ಈವರೆಗೆ ಕೇವಲ 8.78 ಲಕ್ಷ ಮಂದಿ ಮಾತ್ರ ಮೂರನೇ ಡೋಸ್‌(3rd Dose) ಸ್ವೀಕರಿಸಿದ್ದು, ಗುರಿಯ ಶೇ.40ರಷ್ಟು ಮಾತ್ರ ಸಾಧನೆಯಾಗಿದೆ.

Booster Dose: 3ನೇ ಡೋಸ್‌ ಅಭಿಯಾನ ನಿರೀಕ್ಷೆಯಂತೆ ಸಾಗುತ್ತಿಲ್ಲ: ಸುಧಾಕರ್‌

ಪೊಲೀಸ್‌(Police) ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ, ಪೌರ ಕಾರ್ಮಿಕರು, ಅಂಚೆ ಸಿಬ್ಬಂದಿ, ಪಂಚಾಯತ್‌ ಇಲಾಖೆ, ಸ್ಮಶಾನ ಸಿಬ್ಬಂದಿ, ಸಾರಿಗೆ ಸಿಬ್ಬಂದಿ, ಆಶಾ ಕಾರ್ಯಕರ್ತರು ಮುಂತಾದ ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಸರ್ಕಾರಿ ಸಿಬ್ಬಂದಿಗಳು ಮುಂಚೂಣಿ ಕಾರ್ಯಕರ್ತರಾಗಿದ್ದು, ಅವರಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಡೋಸ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶೇ.17ರಷ್ಟು ಮಾತ್ರ ಗುರಿ ಸಾಧನೆ:

ರಾಜ್ಯದಲ್ಲಿ ಏಳು ಲಕ್ಷ ಮುಂಚೂಣಿ ಕಾರ್ಯಕರ್ತರು ಕೋವಿಡ್‌ ಮೂರನೇ ಡೋಸ್‌ ಪಡೆಯಲು ಅರ್ಹತೆ ಹೊಂದಿದ್ದಾರೆ. ಆದರೆ ಕೇವಲ 1.23 ಲಕ್ಷ ಮಂದಿ ಮಾತ್ರ ಮುನ್ನೆಚ್ಚರಿಕೆ ಡೋಸ್‌ ಪಡೆದಿದ್ದಾರೆ. ಅಂದರೆ ಗುರಿಯ ಕೇವಲ ಶೇ.17ರಷ್ಟು ಮಾತ್ರ ತಲುಪಲಾಗಿದೆ. ಕೋವಿಡ್‌ ಮೂರನೇ ಅಲೆ(Covid 3rd Wave) ಉತ್ತುಂಗಕ್ಕೆ ಏರುತ್ತಿರುವ ಸಂದರ್ಭದಲ್ಲೂ ಜನರ ಜೊತೆ ನಿತ್ಯ ಸಂಪರ್ಕ ಹೊಂದಿರುವ ಮುಂಚೂಣಿ ಕಾರ್ಯಕರ್ತರು ಲಸಿಕೆ(Vaccine) ಪಡೆಯಲು ಮುಂದಾಗಿಲ್ಲ.

ಮುಂಚೂಣಿ ಕಾರ್ಯಕರ್ತರಿಗೆ ಹೋಲಿಸಿದರೆ ಆರೋಗ್ಯ ಕಾರ್ಯಕರ್ತರು(Health workers) ಲಸಿಕೆ ಪಡೆಯಲು ಆರಂಭದಿಂದಲೂ ಹೆಚ್ಚಿನ ಉತ್ಸಾಹ ತೋರಿದ್ದರು. ಅವರ ಈ ಉತ್ಸಾಹ ಮೂರನೇ ಡೋಸ್‌ ಅಭಿಯಾನದಲ್ಲಿಯೂ ಮುಂದುವರಿದಿದೆ. ಆರು ಲಕ್ಷ ಆರೋಗ್ಯ ಕಾರ್ಯಕರ್ತರು ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಅರ್ಹರಾಗಿದ್ದು ಮೂರು ಲಕ್ಷ ಮಂದಿ ಈಗಾಗಲೇ ಪಡೆದುಕೊಂಡಿದ್ದಾರೆ. ಅಂದರೆ ಈ ವರ್ಗದಲ್ಲಿ ಶೇ.50 ಮಂದಿಯ ಮೂರನೇ ಡೋಸ್‌ ಕೂಡ ಪೂರ್ಣಗೊಂಡಿದೆ.

ಜ.10ರಿಂದ ಮುನ್ನೆಚ್ಚರಿಕೆ ಡೋಸ್‌ ನೀಡಲು ಪ್ರಾರಂಭಿಸಲಾಗಿತ್ತು. ಕೋವಿಶೀಲ್ಡ್‌ ಅಥವಾ ಕೋವ್ಯಾಕ್ಸಿನ್‌ ಲಸಿಕೆಯ ಎರಡೂ ಡೋಸ್‌ ಪೂರ್ಣಗೊಳಿಸಿ 9 ತಿಂಗಳಾದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೀರಿದ ಸಹ ಅಸ್ವಸ್ಥತೆ ಹೊಂದಿರುವವರು ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಆರ್ಹತೆ ಹೊಂದಿದ್ದಾರೆ.

Covid Booster Dose India: ಕೇವಲ 8 ದಿನದಲ್ಲಿ 50 ಲಕ್ಷ ಜನರಿಗೆ 3ನೇ ಡೋಸ್‌

ಹಿರಿಯ ನಾಗರಿಕರು ಮುಂದು

ಸಹ ಅಸ್ವಸ್ಥತೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರು ಕೋವಿಡ್‌ ಮೂರನೇ ಡೋಸ್‌ ಪಡೆಯಲು ಭಾರಿ ಉತ್ಸಾಹ ತೋರುತ್ತಿದ್ದಾರೆ. ಕೋವಿಡ್‌ ಮೂರನೇ ಅಲೆಯಲ್ಲಿ ಸೋಂಕಿನ ನಾಗಲೋಟ ಮತ್ತು ಸಹ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳ ಮೇಲೆ ಸೋಂಕು ಅಪಾಯಕಾರಿ ಪರಿಣಾಮ ಬೀರುವ ಸಾಧ್ಯತೆ ಇರುವುದನ್ನು ಮನಗಂಡ ಹಿರಿಯ ನಾಗರಿಕರು ಲಸಿಕೆ ಅಭಿಯಾನದಲ್ಲಿ(Vaccination Drive) ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಹ ಅಸ್ವಸ್ಥತೆ ಹೊಂದಿರುವ ಎಂಟು ಲಕ್ಷ ಮಂದಿ ಹಿರಿಯ ನಾಗರಿಕರು ಮೂರನೇ ಡೋಸ್‌ ಪಡೆಯಲು ಅರ್ಹರಾಗಿದ್ದು ಈಗಾಗಲೇ 4.53 ಲಕ್ಷ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಅಂದರೆ ಗುರಿಯ ಶೇ.52 ರಷ್ಟನ್ನು ಈಗಾಗಲೇ ತಲುಪಲಾಗಿದೆ.

ಮಕ್ಕಳ ಲಸಿಕೆ, 3ನೇ ಡೋಸ್‌ ನಿಧಾನ: ವ್ಯಾಕ್ಸಿನ್‌ ಪಡೆಯಲು ಹಿಂದೇಟು..!

ರಾಜ್ಯದಲ್ಲಿ ಒಂದೆಡೆ ಹದಿಹರೆಯದ ಮಕ್ಕಳ ಕೊರೋನಾ ಲಸಿಕೆ(Children Covid Vaccine) ಅಭಿಯಾನದ ಉತ್ಸಾಹ ಕುಗ್ಗಿದ್ದರೆ, ಮತ್ತೊಂದೆಡೆ ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಅರ್ಹರು ಹಿಂದೇಟು ಹಾಕುತ್ತಿರುವುದರಿಂದ ಲಸಿಕೆ ಅಭಿಯಾನಕ್ಕೆ(Vaccine Drive) ಹಿನ್ನಡೆಯಾಗಿದೆ.

ಆರಂಭ ದಿನಗಳಲ್ಲಿ ವೇಗವಾಗಿ ಸಾಗಿದ ಹದಿಹರೆಯದ ಮಕ್ಕಳ ಕೊರೋನಾ ಲಸಿಕೆ ಅಭಿಯಾನ ಹಲವು ಜಿಲ್ಲೆಗಳಲ್ಲಿ ಶೇ.40ರ ಹಂತದಲ್ಲಿಯೇ ನಿಂತಿದ್ದು, ಮೂರು ವಾರ ಕಳೆದರೂ ರಾಜ್ಯಾದ್ಯಂತ ಇನ್ನೂ 11 ಲಕ್ಷ ಮಕ್ಕಳು(Children) ಲಸಿಕೆಯಿಂದ ದೂರ ಉಳಿದಿದ್ದಾರೆ. ಇನ್ನು ಮುನ್ನೆಚ್ಚರಿಕೆ (ಮೂರನೇ) ಡೋಸ್‌ಗೆಂದು ಗುರುತಿಸಲಾಗಿದ್ದ 21 ಲಕ್ಷ ಅರ್ಹರ ಪೈಕಿ ಮೂರು ಲಕ್ಷ ಮಂದಿ ಮಾತ್ರ ಲಸಿಕೆ(Vaccine) ಪಡೆದಿದ್ದಾರೆ.
 

Latest Videos
Follow Us:
Download App:
  • android
  • ios