ಗುತ್ತಿಗೆದಾರರ ಬಿಲ್ ವಿಳಂಬ ಮಾಡಿದಷ್ಟು ತೊಂದರೆ ತಪ್ಪಿದ್ದಲ್ಲ; ಕಾಂಗ್ರೆಸ್ ಶಾಸಕರ ಎಚ್ಚರಿಕೆ
‘ಲೋಕಸಭೆ ಚುನಾವಣೆ ಜತೆಗೆ ಮುಂದಿನ ಡಿಸೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ನಿಗದಿ ಆಗಬಹುದು. ಹೀಗಾಗಿ ಇದಕ್ಕೂ ಮೊದಲೇ ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳ ತನಿಖೆ ಪೂರ್ಣಗೊಳಿಸಿ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡಬೇಕು. ಎಂದು ಬೆಂಗಳೂರು ನಗರ ಭಾಗದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಬೆಂಗಳೂರು (ಆ.17) : ‘ಲೋಕಸಭೆ ಚುನಾವಣೆ ಜತೆಗೆ ಮುಂದಿನ ಡಿಸೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ನಿಗದಿ ಆಗಬಹುದು. ಹೀಗಾಗಿ ಇದಕ್ಕೂ ಮೊದಲೇ ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳ ತನಿಖೆ ಪೂರ್ಣಗೊಳಿಸಿ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡಬೇಕು. ಜತೆಗೆ ಹೊಸ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಸಬೇಕು’ ಎಂದು ಬೆಂಗಳೂರು ನಗರ ಭಾಗದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಇದೇ ವೇಳೆ ಬಿಬಿಎಂಪಿ ಕಾಮಗಾರಿ(BBMP Work)ಗಳ ತನಿಖೆಗೆ ನೇಮಿಸಿರುವ ನಾಲ್ಕು ಸಮಿತಿಗಳಿಂದ ಆಗಸ್ಟ್ ಅಂತ್ಯದೊಳಗೆ ವರದಿ ಪಡೆಯಬೇಕು. ತನಿಖೆಯಲ್ಲಿ ಅಕ್ರಮ ಸಾಬೀತಾದರೆ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಹಾಗೂ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಬಿಬಿಎಂಪಿ: ‘ಬೆಂಕಿ’ಗೆ ಅವಸರದ ಪರೀಕ್ಷೆಯೇ ಕಾರಣ; ಆಂತರಿಕ ತನಿಖೆ ಬಹಿರಂಗ
ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah CM) ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಬೆಂಗಳೂರು ನಗರ ಸಚಿವರು ಹಾಗೂ ಶಾಸಕರ ಸಭೆಯಲ್ಲಿ ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆ ಸಿದ್ಧತೆ ಜತೆಗೆ ಬಾಕಿ ಬಿಲ್ ಪಾವತಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ವಿಸ್ತೃತ ಚರ್ಚೆ ನಡೆಯಿತು.
ಇದೇ ವೇಳೆ ಕ್ಷೇತ್ರದ ಅಭಿವೃದ್ಧಿ, ಅನುದಾನ, ಸರ್ಕಾರ ಹಾಗೂ ಪಕ್ಷದ ಜತೆಗಿನ ಸಮನ್ವಯ ಕುರಿತು ಶಾಸಕರು ತಮ್ಮ ದೂರು ದುಮ್ಮಾನಗಳನ್ನು ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.
ಆದಷ್ಟುಬೇಗ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಬೇಕು. ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಲ್ ಪಾವತಿಸುವ ಜತೆಗೆ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಚಾಲನೆ ನೀಡಬೇಕು. ಬಹುತೇಕ ಕಡೆ ರಸ್ತೆ, ರಾಜಕಾಲುವೆ, ಚರಂಡಿ ರಿಪೇರಿಯಂತಹ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ಈ ಹಂತದಲ್ಲಿ ಬಿಬಿಎಂಪಿ ಚುನಾವಣೆ ಎದುರಿಸಿದರೆ ಪಕ್ಷಕ್ಕೆ ತೊಂದರೆ ಆಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್(DK Shivakumar), ಈಗಾಗಲೇ ತನಿಖೆ ಪ್ರಾರಂಭವಾಗಿದೆ. ಮೂವತ್ತು ದಿನಗಳ ಗಡುವು ನೀಡಿದ್ದು, ಹತ್ತು ದಿನ ಮುಕ್ತಾಯುವಾಗಿದೆ. ಇನ್ನು 20 ದಿನಗಳಲ್ಲಿ ತನಿಖೆ ಮುಗಿಸಿ ವರದಿ ನೀಡಲಿದ್ದಾರೆ. ಇದಕ್ಕೆ ಮೊದಲೇ ಬಿಲ್ ಬಿಡುಗಡೆ ಮಾಡುವುದು ಸಾಧ್ಯವಿಲ್ಲ. ವರದಿಯಿಂದ ಬಿಜೆಪಿಯ ಹಗರಣಗಳು ಬಯಲಿಗೆ ಬರುತ್ತವೆ. ಇದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ. ಆ ಬಳಿಕ ಆಯಾ ಕ್ಷೇತ್ರಗಳಿಗೆ ನೀಡಬೇಕಾದ ಅನುದಾನ, ಬಿಲ್ ಪಾವತಿ ಎಲ್ಲವನ್ನೂ ಸಲೀಸಾಗಿ ಮಾಡಲಾಗುವುದು. ಅಲ್ಲಿಯವರೆಗೆ ಸಹಕರಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು ಎಂದು ಹೇಳಲಾಗಿದೆ.
ಸತತ ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸಚಿವರಾದ ಜಮೀರ್ ಅಹಮದ್‌ಖಾನ್, ಬೈರತಿ ಸುರೇಶ್, ದಿನೇಶ್ ಗುಂಡೂರಾವ್, ಸಂಸದರಾದ ಡಿ.ಕೆ. ಸುರೇಶ್, ಮಾಜಿ ಸಚಿವರಾದ ಎಂ. ಕೃಷ್ಣಪ್ಪ, ಶಾಸಕರಾದ ಎನ್.ಎ.ಹ್ಯಾರಿಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬೆಂಗಳೂರು ಸಮಸ್ಯೆ ಬಗ್ಗೆ ವಿಸ್ತೃತ ಚರ್ಚೆ
ಸಭೆ ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ಕೈ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದೆವು. ಕ್ಷೇತ್ರಗಳ ಅಭಿವೃದ್ಧಿ, ಬೆಂಗಳೂರು ಅಭಿವೃದ್ಧಿ, ಸಂಚಾರದಟ್ಟಣೆ, ಒಂಟಿ ಮನೆ ಬಗ್ಗೆ ಚರ್ಚಿಸಲಾಗಿದೆ. ಬೆಂಗಳೂರಿನಲ್ಲಿ ವಿಧಾನಸಭಾವಾರು ಮನೆಗಳನ್ನು ನಿರ್ಮಿಸಿಕೊಡುವ ಬಗ್ಗೆ, ಬೆಂಗಳೂರು ಕುಡಿಯುವ ನೀರಿನ ಬಗ್ಗೆ, ಡ್ರಗ್‌್ಸ ನಿಯಂತ್ರಣದ ಬಗ್ಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಡಿಸೆಂಬರ್‌ನಲ್ಲಿ ಪಾಲಿಕೆ ಚುನಾವಣೆ
ಇದಲ್ಲದೆ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ. ಬಿಬಿಎಂಪಿ ಚುನಾವಣೆ ಬಗ್ಗೆಯೂ ಚರ್ಚೆಯಾಗಿದೆ. ಎರಡ್ಮೂರು ದಿನದಲ್ಲಿ ವಾರ್ಡ್‌ಗಳ ಪುನರ್ ರಚನೆ ಕುರಿತು ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಬಹುದು. ಅಂತಿಮ ವಾರ್ಡ್‌ಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ಡಿಸೆಂಬರ್‌ನಲ್ಲಿ ಪಾಲಿಕೆ ಚುನಾವಣೆ ಬರಬಹುದು. ಹೀಗಾಗಿ ಉದ್ಘಾಟನೆ ಕಾರ್ಯಕ್ರಮಗಳು ಬೇಗ ಬೇಗ ಮಾಡುವ ಬಗ್ಗೆ ಚರ್ಚೆಯಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
News Hour: ‘ಇವರನ್ನು ಲೂಟಿ ಹೊಡೆಯೋಕೆ ಬಿಟ್ಟು, ನಾನು ವಿದೇಶದಲ್ಲಿ ಇರಬೇಕಾ?’, ಕುಮಾರಸ್ವಾಮಿ ಕೆಂಡ!
ಕಾಮಗಾರಿಗಳ ಬಿಲ… ಬಾಕಿ ವಿಚಾರವಾಗಿ ಮಾತನಾಡಿ, ಈಗಾಗಲೇ ತನಿಖೆ ಮಾಡುತ್ತಿದ್ದೇವೆ. ಒಂದು ತಿಂಗಳು ಸಮಯ ಕೊಟ್ಟಿದ್ದಾರೆ. ಯಾರು ಕೆಲಸ ಚೆನ್ನಾಗಿ ಮಾಡಿದ್ದಾರೆ. ಅವರಿಗೆ ಹಣ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.